ದಸರಾ ಕಂಬಳದಲ್ಲಿ ಪ್ರಥಮ ಸ್ಥಾನಿಯಾಗುವ ಕೋಣಗಳಿಗೆ 16 ಗ್ರಾಂ ಚಿನ್ನ ಬಹುಮಾನ!

ಅ.18, 19ರಂದು ಕರಾವಳಿಯ ವೈಭವದ ಜಾನಪದ ಕ್ರೀಡೆ ನೋಡಲು ಜನ ಕಾತರ

ಮೈಸೂರು: ಮೈಸೂರು ದಸರಾ ಈ ಬಾರಿ ಕರಾವಳಿಯ ಹೆಮ್ಮೆಯ ಕಂಬಳದ ಜಾನಪದ ಕ್ರೀಡೆ ಅವಕಾಶ ಸಿಕ್ಕಿದೆ. ಕೆಸರು ಗದ್ದೆಯಲ್ಲಿ ಕೋಣಗಳ ಓಟ, ರೈತರ ಉತ್ಸಾಹ ಹಾಗೂ ಕರಾವಳಿಯ ಜನಪದ ಸಂಸ್ಕೃತಿಯ ಪ್ರತಿಬಿಂಬವಾಗಿರುವ ಕಂಬಳ, ಮೈಸೂರಿನ ದಸರಾ ಸಂಭ್ರಮಕ್ಕೆ ಹೊಸ ಆಯಾಮ ನೀಡಲಿದೆ.

ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ಮೈಸೂರು ದಸರಾದಲ್ಲಿ ವೇದಿಕೆ ಸಜ್ಜಾಗಿದೆ. ಅ.18 ಮತ್ತು 19ರಂದು ಮೈಸೂರಿನಲ್ಲಿ ಭರ್ಜರಿ ಕಂಬಳ ನಡೆಯಲಿದೆ. 150ರಿಂದ 160 ಜೊತೆ ಆಯ್ದ ಪ್ರಸಿದ್ಧ ಕೋಣಗಳು ಮೈಸೂರು ದಸರಾ ಕಂಬಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಕಂಬಳದಲ್ಲಿ ಗೆದ್ದ ಸೀನಿಯರ್ ವಿಭಾಗದ ಕೋಣಗಳ ಜೋಡಿಗೆ ಮೊದಲ ಬಹುಮಾನ 16 ಗ್ರಾಂ ಚಿನ್ನ ಹಾಗೂ ದ್ವಿತೀಯ ಬಹುಮಾನ 8 ಗ್ರಾಂ ಚಿನ್ನ ನೀಡಲು ನಿರ್ಧರಿಸಲಾಗಿದೆ. ಮೂರನೇ ಮತ್ತು ನಾಲ್ಕನೇ ಸ್ಥಾನ ಪಡೆದವರಿಗೂ ಚಿನ್ನದ ಪದಕ ನೀಡಬೇಕು ಹಾಗೂ ಜೂನಿಯರ್ ವಿಭಾಗದಲ್ಲೂ ಬಹುಮಾನ ಪ್ರಮಾಣ ಹೆಚ್ಚಿಸಬೇಕು ಎಂದು ಕೋಣಗಳ ಮಾಲೀಕರು ಬೇಡಿಕೆ ಇಟ್ಟಿದ್ದಾರೆ. ಕಂಬಳದಲ್ಲಿ ಭಾಗವಹಿಸುವ ಎಲ್ಲ ಕೋಣಗಳ ಯಜಮಾನರಿಗೆ ಮೈಸೂರು ದಸರಾದ ಪ್ರಶಸ್ತಿ ಪತ್ರ, ಸ್ಮರಣಿಕೆ, ಮೈಸೂರು ಪೇಟ ಮತ್ತು ಶಾಲು ಹೊದಿಸಿ ಗೌರವಿಸಲಾಗುತ್ತದೆ.

ವಿಜಯ-ದಶಮಿ ಕರೆಯಲ್ಲಿ ಓಟ

ಮೈಸೂರಿನ ರಿಂಗ್ ರೋಡ್ ವ್ಯಾಪ್ತಿಯ ಸುಮಾರು 20 ಎಕರೆ ವಿಸ್ತೀರ್ಣದ ಜಾಗದಲ್ಲಿ ಕಂಬಳದ ಕರೆಯ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಜಿಲ್ಲಾಡಳಿತ ಈ ಕರೆಗೆ ‘ವಿಜಯ-ದಶಮಿ’ ಎಂದು ನಾಮಕರಣ ಮಾಡಿದೆ. ಕರೆಯ ಒಟ್ಟು ಉದ್ದ 147 ಮೀಟರ್ ಆಗಿದ್ದು, ಓಟದ ಅಂತರ 140 ಮೀಟರ್ ಇರಲಿದೆ. ಕರೆಯ ಗುಣಮಟ್ಟ ಹಾಗೂ ಕೋಣಗಳ ಸುರಕ್ಷತೆಗಾಗಿ ಅಕ್ಟೋಬರ್ 15ರಂದೇ 5 ಜೊತೆ ಕೋಣಗಳನ್ನು ಕರೆದೊಯ್ದು ಪ್ರಾಯೋಗಿಕ ಓಡಿಸಲು ತೀರ್ಮಾನಿಸಲಾಗಿದೆ.

ಅ.16ರಂದು ಬೆಳಿಗ್ಗೆ 10.30ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕೋಣಗಳು ಜಮಾಯಿಸಿ, ಅಲ್ಲಿಂದ ಒಟ್ಟಾಗಿ ಮೈಸೂರಿನತ್ತ ವಾಹನದಲ್ಲಿ ತೆರಳಲಿವೆ. ಹೀಗೆ ಹೊರಟ ಕೋಣಗಳಿಗೆ ಮಡಿಕೇರಿಯಲ್ಲಿ ಸುಮಾರು 2ರಿಂದ 3 ಗಂಟೆಗಳ ಕಾಲ ವಿಶ್ರಾಂತಿ ನೀಡಲಾಗುತ್ತದೆ. ಅಲ್ಲಿ ಮೇವು, ಆಹಾರ ಹಾಗೂ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಅ.16ರ ರಾತ್ರಿ ಮೈಸೂರು ತಲುಪಲಿರುವ ಕೋಣಗಳಿಗೆ, ಅಕ್ಟೋಬರ್ 17ರ ಇಡೀ ದಿನ ಸಂಪೂರ್ಣ ವಿಶ್ರಾಂತಿ ನೀಡಲಾಗುತ್ತದೆ.



































error: Content is protected !!
Scroll to Top