ಅಮೆರಿಕ: ದೀಪಾವಳಿ ಆಚರಣೆ ವೇಳೆ ಹಿಂದೂಗಳ ವಿರುದ್ಧ ಜನಾಂಗೀಯ ನಿಂದನೆ, ಕಿರುಕುಳ

ವಾಷಿಂಗ್ಟನ್‌: ಅಮೆರಿಕದಲ್ಲಿ ನೆಲೆಸಿರುವ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಜನಾಂಗೀಯ ನಿಂದನೆ ಘಟನೆಗಳಿಗೆ ಮತ್ತೊಂದು ಕೃತ್ಯ ಸೇರ್ಪಡೆಯಾಗಿದೆ.

ಸಿಯಾಟಲ್‌ ನಗರದಲ್ಲಿ ಹಿಂದೂ ಸಮುದಾಯದ ಜನರು ಶಾಂತಿಯುತವಾಗಿ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದ ಸಂದರ್ಭದಲ್ಲಿ, ಸ್ಥಳೀಯ ಅಮೆರಿಕನ್ ಮೂಲಭೂತವಾದಿಗಳು ಅವಾಚ್ಯವಾಗಿ ನಿಂದಿಸಿ ಪ್ರತಿಭಟನೆ ನಡೆಸಿರುವ ಘಟನೆ ವರದಿಯಾಗಿದೆ.

ಹಣೆಗೆ ಬಿಂದಿ ಅಥವಾ ಕುಂಕುಮ ಇಡುವ ಹಿಂದೂಗಳನ್ನು ಹೀಯಾಳಿಸುವ ಉದ್ದೇಶದಿಂದ ‘ಡಾಟ್‌ ಹೆಡ್ಸ್’ ಎಂದು ಉಲ್ಲೇಖಿಸಿರುವ ಕಿಡಿಗೇಡಿಗಳು, ‘ಎಲ್ಲಾ ಡಾಟ್ ಹೆಡ್‌ಗಳನ್ನು ದೇಶದಿಂದ ಹೊರಗೆ ಕಳುಹಿಸಿ’ (Deport All Dot Heads) ಹಾಗೂ ‘ಕ್ರೈಸ್ತರ ಜಾಗದಲ್ಲಿ ಹಿಂದೂಗಳ ಸ್ಥಾನಪಲ್ಲಟವನ್ನು ನಿಲ್ಲಿಸಿ’ (Stop Hindu Replacement of Christians) ಎಂಬ ಪ್ರಚೋದನಕಾರಿ ಬರಹಗಳಿದ್ದ ಫಲಕಗಳನ್ನು ಪ್ರದರ್ಶಿಸಿದ್ದಾರೆ.

ಪಾಶ್ಚಿಮಾತ್ಯ ದೇಶಗಳಲ್ಲಿ ಚಾಲ್ತಿಯಲ್ಲಿರುವ ‘ಗ್ರೇಟ್ ರೀಪ್ಲೇಸ್‌ಮೆಂಟ್’ ಪಿತೂರಿ ಸಿದ್ಧಾಂತದ ಹಿನ್ನೆಲೆಯಲ್ಲಿ ಈ ದುಷ್ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ.

ಘಟನೆಯನ್ನು ಸ್ಥಳೀಯ ಅಮೆರಿಕನ್ ಹಿಂದೂ ಸಮುದಾಯವು ತೀವ್ರವಾಗಿ ಖಂಡಿಸಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ ಜೇಕ್ ಲಾಂಗ್ ಮತ್ತು ಥಾಮಸ್ ಅಲಾನ್ ಎಂಬುವವರನ್ನು ಗುರುತಿಸಲಾಗಿದೆ. ಜೇಕ್ ಲಾಂಗ್ ಈ ಹಿಂದೆ ಅಮೆರಿಕದ ಸೆನೆಟ್ ಚುನಾವಣೆಗೆ ಫ್ಲೋರಿಡಾದಿಂದ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಲು ಪ್ರಯತ್ನಿಸಿದ್ದಲ್ಲದೆ, 2021ರ ಕ್ಯಾಪಿಟಲ್ ಗಲಭೆಯಲ್ಲೂ ಭಾಗಿಯಾಗಿದ್ದ ಎನ್ನಲಾಗಿದೆ.























































































































error: Content is protected !!
Scroll to Top