ಸಾರ್ವಜನಿಕ ಯೋಜನೆ ಹಣ ಸಂಗ್ರಹಕಾರರ ಕಾನೂನುಬದ್ಧ ಜವಾಬ್ದಾರಿ

ಯಾವುದೇ ಒಬ್ಬ ವ್ಯಕ್ತಿ ತನ್ನ ವೈಯುಕ್ತಿಕ ನೆಲೆಯಲ್ಲಿ ಅಥವಾ ಸಾರ್ವಜನಿಕ ಸೇವಾ ಸಂಸ್ಥೆಯ ಹೆಸರಿನಲ್ಲಿ ಸಾರ್ವಜನಿಕ ಯೋಜನೆಗಾಗಿ ಸಾರ್ವಜನಿಕರಿಂದ ಹಣವನ್ನು ದೇಣಿಗೆ, ವಂತಿಕೆ ಅಥವಾ ಇತರ ರೂಪದಲ್ಲಿ ಸಂಗ್ರಹಿಸುವ ಸಂಧರ್ಭದಲ್ಲಿ ಆತ ಕೆಲವು ಕಾನೂನುಬದ್ಧವಾದ ಜವಾಬ್ದಾರಿಯನ್ನು ಹೊಂದಿರುತ್ತಾನೆ. ಕಾರಣ ಆತ ನಿರ್ದಿಷ್ಟ ಉದ್ದೇಶಕ್ಕಾಗಿ ಸಾರ್ವಜನಿಕರಿಂದ ಸಂಗ್ರಹಿಸುವ ಹಣವು ಆತನ ವೈಯುಕ್ತಿಕ ಹಕ್ಕಿನದ್ದಾಗಿರುವುದಿಲ್ಲ. ತಾನು ಸಂಗ್ರಹಿಸಿದ ಹಣವನ್ನು ಅಥವಾ ಫಂಡನ್ನು ಆತ ತನ್ನ ಸ್ವಂತ ಹಣದಂತೆ ಬಳಸುವ ಅಥವಾ ಬೇರೆ ಉದ್ದೇಶಕ್ಕಾಗಿ ಹೂಡಿಕೆ ಮಾಡುವ ಅಧಿಕಾರವನ್ನು ಆತ ಹೊಂದಿರುವುದಿಲ್ಲ. ಈ ರೀತಿಯ ಕಾನೂನುಬದ್ಧ ಜವಾಬ್ದಾರಿಯು ಸಾರ್ವಜನಿಕ ಉದ್ದೇಶಕ್ಕಾಗಿ ಹಣ ಸಂಗ್ರಹಿಸುವ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯು ವೈಯುಕ್ತಿಕವಾಗಿ ಹಾಗೂ ಆತನಿಗೆ ಸಂಬಂಧಪಟ್ಟ ಅಥವಾ ಪ್ರತಿನಿಧಿಸುವ ಸಮಿತಿ, ಸಂಘಟನೆ, ಟ್ರಸ್ಟ್ ಅಥವಾ ಸಂಘ ಸಂಸ್ಥೆಯನ್ನು ಅಥವಾ ಅದರಲ್ಲಿ ಹೊಂದಿರುವ ಅಧಿಕೃತ ಸ್ಥಾನಮಾನವನ್ನು ಅವಲಂಬಿಸಿರುತ್ತದೆ ಮತ್ತು ಹಣ ಸಂಗ್ರಹಣೆಯ ಸಂದರ್ಭದಲ್ಲಿ ಆತ ಸಾರ್ವಜನಿಕರಿಗೆ ಯೋಜನೆಯ ಬಗ್ಗೆ ನೀಡಿದ ಭರವಸೆಯನ್ನು ಸಹಾ ಹೊಂದಿಕೊಂರುತ್ತದೆ.

ಭಾರತೀಯ ನ್ಯಾಯ ಸಂಹಿತೆ (ಬಿ.ಎನ್.ಎಸ್)ರ ಕಲಂ ೩೧೬ರ ಪ್ರಕಾರ ಯಾವುದೇ ಒಬ್ಬ ವ್ಯಕ್ತಿ ನಿರ್ದಿಷ್ಟವಾದ ಸಾರ್ವಜನಿಕ ಯೋಜನೆಯ ನೆಪದಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಅಪ್ರಾಮಾಣಿಕವಾಗಿ ದುರುಪಯೋಗಪಡಿಸಿಕೊಂಡಲ್ಲಿ ಆತ ನಂಬಿಕೆ ದ್ರೋಹದ (ಕ್ರಿಮಿನಲ್ ಬ್ರೀಚ್ ಆಫ್ ಟ್ರಸ್ಟ್) ಶಿಕ್ಷಾರ್ಹ ಅಪರಾಧ ನಡೆಸಿದಂತಾಗುತ್ತದೆ. ಸಾಮಾನ್ಯವಾಗಿ ಯಾವುದೇ ವ್ಯಕ್ತಿ ತಾನು ಸಾರ್ವಜನಿಕ ಉದ್ದೇಶಕ್ಕಾಗಿ ಹಣವನ್ನು ಸಂಗ್ರಹಿಸುವ ಸಂದರ್ಭದಲ್ಲಿ ತಾನು ಹೊಂದಿರುವ ಅಧಿಕಾರಕ್ಕೆ ಅನುಗುಣವಾಗಿ ಸಂಗ್ರಹಿಸಿದ ಹಣದ ಸುರಕ್ಷತೆ, ಸದುಪಯೋಗ, ಹೂಡಿಕೆಯ ಅಧಿಕಾರ, ಲೆಕ್ಕ ಪತ್ರ ನಿರ್ವಹಣೆ ಮತ್ತು ಪಾರದರ್ಶಕತೆ ಮುಂತಾದ ಕಾನೂನುಬದ್ಧ ಜವಾಬ್ದಾರಿಯನ್ನು ಹೊಂದಿರುತ್ತಾನೆ.

ಆತ ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ತನ್ನ ವೈಯುಕ್ತಿಕ ನೆಲೆಯ ಅಥವಾ ಹೆಸರಿನ ಬ್ಯಾಂಕ್ ಖಾತೆಯಲ್ಲಿ ಇರಿಸದೆ ಮತ್ತು ತನ್ನ ವೈಯುಕ್ತಿಕ ವ್ಯವಹಾರದಲ್ಲಿ ತೊಡಗಿಸದೆ ತಾನು ಪ್ರತಿನಿಧಿಸುವ ಸಂಸ್ಥೆ ಅಥವಾ ಉದ್ದೇಶಿತ ಯೋಜನೆಗೆ ಸಮ್ಮಂದಪಟ್ಟ ಅಧಿಕೃತ ಬ್ಯಾಂಕ್ ಖಾತೆಯಲ್ಲಿ ಇರಿಸುವುದು ಆತನ ಜವಾಬ್ದಾರಿಯುತವಾದ ಕರ್ತವ್ಯವಾಗಿರುತ್ತದೆ. ಮಾತ್ರವಲ್ಲದೆ ಸಾರ್ವಜನಿಕರಿಂದ ಯಾವ ನಿರ್ದಿಷ್ಟ ಉದ್ದೇಶಕ್ಕಾಗಿ ಹಣವನ್ನು ಸಂಗ್ರಹಿಸುತ್ತಾನೋ ಅದೇ ಉದ್ದೇಶಕ್ಕಾಗಿ ತಾನು ಸಂಗ್ರಹಿಸಿದ ಹಣವನ್ನು ಆತ ಬಳಸಬೇಕಾಗುತ್ತದೆ.

ಸಂಗ್ರಹಿಸಿದ ಹಣವನ್ನು ಠೇವಣಿ ಇಡುವ ಸಂದರ್ಭದಲ್ಲಿ ಅದರ ಸುರಕ್ಷತೆ, ಬಡ್ಡಿ ಆದಾಯ ಮತ್ತು ಹೂಡಿಕೆಯ ಅಪಾಯ ಮುಂತಾದ ವಿಷಯಗಳನ್ನು ಸಹಾ ಆತ ತನ್ನ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಸಾರ್ವಜನಿಕ ಹಣವನ್ನು ಬ್ಯಾಂಕ್ ಠೇವಣಿ ಅಥವಾ ಇತರ ಹೂಡಿಕೆಗಳಲ್ಲಿ ತೊಡಗಿಸುವ ಮೊದಲು ಸಂಬಂಧಪಟ್ಟ ಸಂಸ್ಥೆಯ ಬೈಲಾ, ನಿಯಮಾವಳಿ, ಆಡಳಿತ ಮಂಡಳಿ ಅಥವಾ ಸಾಮಾನ್ಯ ಸಭೆಯ ನಿರ್ಣಯದ ಮೂಲಕ ಪೂರ್ವಾನುಮತಿ ಪಡೆಯಬೇಕಾಗುತ್ತದೆ. ತಾನು ಪಡೆದ ಅಥವಾ ಸಂಗ್ರಹಿಸಿದ ಹಣದ ಸ್ವೀಕೃತಿ, ಖರ್ಚು ವೆಚ್ಚ, ಹೂಡಿಕೆ ಮುಂತಾದವುಗಳಿಗೆ ಸಮ್ಮಂದಿಸಿದಂತೆ ಸಮರ್ಪಕ ದಾಖಲೆಗಳೊಂದಿಗೆ ಲೆಕ್ಕ ಪತ್ರವನ್ನು ಇರಿಸಿಕೊಂಡು ಯಾವುದೇ ಸಂದರ್ಭದಲ್ಲಿ ಅಗತ್ಯವಿದ್ದಾಗ ಲೆಕ್ಕ ಪತ್ರದ ವಿವರವನ್ನು ಪಾರದರ್ಶಕವಾಗಿ ತಾನು ಪ್ರತಿನಿಧಿಸುವ ಸಂಸ್ಥೆಯ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ನೀಡುವ ಕಾನೂನುಬದ್ಧ ಜವಾಬ್ದಾರಿಯನ್ನು ಆತ ಹೊಂದಿರುತ್ತಾನೆ.





















































error: Content is protected !!
Scroll to Top