ಕಾರ್ಕಳ: ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿ, ಉಡುಪಿ ಜಿಲ್ಲೆಯ ಕರೆಯ ಮೇರೆಗೆ ಕಾರ್ಕಳ ವಕೀಲರ ಸಂಘದ ಸಭಾಂಗಣದಲ್ಲಿ “ವಕೀಲರ ಸಂಘ ಕಾರ್ಕಳ” ನೇತೃತ್ವದಲ್ಲಿ “ಕಾರ್ಕಳ ತಾಲೂಕು ಹಕ್ಕೊತ್ತಾಯ ಸಭೆ”ಯನ್ನು ಆಯೋಜಿಸುವ ಬಗ್ಗೆ ಪೂರ್ವಭಾವಿ ಸಭೆ ನಡೆಸಲಾಯಿತು.
ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿ, ಉಡುಪಿ ಜಿಲ್ಲೆಯ ಸಂಚಾಲಕರು ಹಾಗೂ ನ್ಯಾಯವಾದಿ ಪ್ರೇಮ್ ಪ್ರಸಾದ್ ಶೆಟ್ಟಿ ಮಾತನಾಡಿ, ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯ ನಿಟ್ಟಿನಲ್ಲಿ ಜಿಲ್ಲಾ ಹೋರಾಟ ಸಮಿತಿಯು ಈಗಾಗಲೇ ಉಡುಪಿಯಲ್ಲಿ ಜಿಲ್ಲಾ ಮಟ್ಟದ ವಿವಿಧ ಸಂಘ ಸಂಸ್ಥೆಗಳ ಹಕ್ಕೊತ್ತಾಯ ಸಭೆಯನ್ನು ನಡೆಸಿ, ನಂತರ ಕುಂದಾಪುರ ತಾಲೂಕು, ಬೈಂದೂರು ತಾಲೂಕು ಹಾಗೆಯೇ ಬ್ರಹ್ಮಾವರ ತಾಲೂಕುಗಳಲ್ಲಿ ಹಕ್ಕೊತ್ತಾಯ ಸಭೆಗಳನ್ನು ಕಳೆದ ಎರಡು ಮೂರು ತಿಂಗಳುಗಳಿಂದ ನಿರಂತರವಾಗಿ ಆಯೋಜಿಸಿ, ಜನಜಾಗೃತಿಯನ್ನು ಮೂಡಿಸಿದೆ. ಇದೀಗ ಸೆಪ್ಟೆಂಬರ್ 29, 2026ರಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಈ ನಮ್ಮ ಬೇಡಿಕೆಯ ಬಗ್ಗೆ ತ್ರಿಸದಸ್ಯ ನ್ಯಾಯಮೂರ್ತಿಗಳ ಸಮಿತಿಯನ್ನು ರಚಿಸಿರುವುದು, ನಮ್ಮ ಹೋರಾಟದ ಮೊದಲ ಯಶಸ್ಸಿನ ಹೆಜ್ಜೆ ಎಂದು ತಿಳಿಸುತ್ತಾ, ಇದೀಗ ಕಾರ್ಕಳ ತಾಲೂಕಿನಲ್ಲಿಯೂ ಈ ನಮ್ಮ ಬೇಡಿಕೆಯ ಬಗ್ಗೆ ವಕೀಲರ ಸಮೂಹ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರನ್ನೊಳಗೊಂಡ ಕಾರ್ಕಳ ತಾಲೂಕು ಹೋರಾಟ ಸಮಿತಿಯ ಹಕ್ಕೊತ್ತಾಯ ಸಭೆಯನ್ನು ಇದೇ ನವಂಬರ್ 14, ಶನಿವಾರ, ಮಧ್ಯಾಹ್ನ 03:30ಕ್ಕೆ ಅನಂತಶಯನದ ಬಳಿ ಹೋಟೆಲ್ ಪ್ರಕಾಶ್ ಸಭಾಂಗಣದಲ್ಲಿ ಆಯೋಜಿಸಲು ತೀರ್ಮಾನಿಸಲಾಯಿತು ಎಂದು ತಿಳಿಸಿದರು.
ಕಾರ್ಕಳ ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್ ಆಚಾರ್ ಮಾತನಾಡಿ, ತಾಲೂಕು ಹಕ್ಕೊತ್ತಾಯ ಸಭೆಯನ್ನು ಯಶಸ್ವಿಯಾಗಿ ಆಯೋಜಿಸಲು ವಕೀಲರ ಸಂಘ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸುತ್ತಾ, ಈ ಮಹತ್ತರ ಹೋರಾಟಕ್ಕೆ ತಾಲೂಕಿನ ಸಂಘ-ಸಂಸ್ಥೆಗಳು ನಮ್ಮೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು. ಮಾಜಿ ಅಧ್ಯಕ್ಷ ಹಿರಿಯ ನ್ಯಾಯವಾದಿ ಸುನಿಲ್ ಕುಮಾರ್ ಶೆಟ್ಟಿ, ಶೇಖರ್ ಮಡಿವಾಳ, ಸದಾನಂದ ಸಾಲಿಯಾನ್, ರವೀಂದ್ರ ಮೊಯಿಲಿ, ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಕಮಲಾಕ್ಷ ಕಾಮತ್, ರಾಜಕೀಯ ಮುಖಂಡ ಶುಭದ ರಾವ್, ನಿವೃತ್ತ ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ, ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷರು, ಮಾಜಿ ಕೌನ್ಸಿಲರ್ ಅವಿನಾಶ್ ಜಿ. ಶೆಟ್ಟಿ ಇನ್ನಿತರ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದು, ಸಲಹೆ ಸೂಚನೆಗಳನ್ನಿತ್ತು ಸಭೆಗೆ ತಮ್ಮ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ತಿಳಿಸಿದರು.

ಕಾರ್ಯದರ್ಶಿ ಪದ್ಮಪ್ರಸಾದ್ ಜೈನ್ ಸ್ವಾಗತಿಸಿ, ಹರೀಶ್ ಅಧಿಕಾರಿ ವಂದಿಸಿದರು.

























