ನವದೆಹಲಿ: ಅಗ್ನಿಪಥ್ ಯೋಜನೆಯಡಿಯಲ್ಲಿ ಸೇವೆಯಲ್ಲಿರುವ ಶೇ. 75 ರಷ್ಟು ಅಗ್ನಿವೀರರಿಗೆ ಅವರ 4 ವರ್ಷಗಳ ಆರಂಭಿಕ ಸೇವಾ ಅವಧಿಯ ನಂತರ ಹೆಚ್ಚುವರಿಯಾಗಿ 2 ವರ್ಷಗಳ ಸೇವಾ ವಿಸ್ತರಣೆ (Engagement Period) ನೀಡಲು ಕೇಂದ್ರ ಸಂಪುಟ ಅನುಮೋದಿಸಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಎನ್. ಎಸ್. ರಾಜಾ ಸುಬ್ರಮಣಿ ಅವರು ಈ ಪ್ರಮುಖ ನಿರ್ಧಾರವನ್ನು ಘೋಷಿಸಿದ್ದಾರೆ.
ಸೇವಾ ವಿಸ್ತರಣೆಯ ಈ ಅವಧಿಯ ಬಳಿಕ ಸೂಕ್ತ ಮೌಲ್ಯಮಾಪನ ಮತ್ತು ಆಯ್ಕೆ ಮಾನದಂಡಗಳಿಗೆ ಒಳಪಟ್ಟು, ಆಸಕ್ತ ಅಗ್ನಿವೀರರಿಗೆ ಸಶಸ್ತ್ರ ಪಡೆಗಳಿಗೆ (ಆರ್ಮ್ಸ್ ಫೋರ್ಸಸ್) ಖಾಯಂ ಆಗಿ ಸೇರ್ಪಡೆಯಾಗಲು ಮತ್ತೊಂದು ಅವಕಾಶ ಸಿಗಲಿದೆ. ಅಗ್ನಿವೀರರ ಮೊದಲ ಬ್ಯಾಚ್ ತನ್ನ 4 ವರ್ಷಗಳ ಸೇವಾ ಅವಧಿಯನ್ನು ಪೂರ್ಣಗೊಳಿಸುತ್ತಿದ್ದು, ಅವರ ಕಾರ್ಯಕ್ಷಮತೆಯ ಬಗ್ಗೆ ಸೇನೆಯಿಂದ ಅತ್ಯಂತ ಧನಾತ್ಮಕ ಪ್ರತಿಕ್ರಿಯೆಗಳು ಬಂದಿವೆ. ಸಶಸ್ತ್ರ ಪಡೆಗಳು ನೀಡಿದ ಶಿಫಾರಸುಗಳನ್ನು ಆಧರಿಸಿ ಸಂಪುಟವು ಈ ವಿಸ್ತರಣೆಗೆ ಅಂಕಿತ ಹಾಕಿದೆ.

ಅಗ್ನಿವೀರರ ತರಬೇತಿಯು ಕೇವಲ ದೈಹಿಕ ಕ್ಷಮತೆಗೆ ಮಾತ್ರ ಸೀಮಿತವಾಗಿರದೆ, ತಾಂತ್ರಿಕ ಜ್ಞಾನ, ನೈತಿಕ ಮೌಲ್ಯಗಳು ಹಾಗೂ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡುತ್ತಿದೆ. ಸಶಸ್ತ್ರ ಪಡೆಗಳ ವಿವಿಧ ವಿಭಾಗಗಳಲ್ಲಿ ಅವರಿಗೆ ಅವಕಾಶಗಳನ್ನು ತೆರೆಯಲಾಗುತ್ತಿದ್ದು, ದೈಹಿಕ ಸಾಮರ್ಥ್ಯ, ಹೊಂದಾಣಿಕೆ ಮತ್ತು ಹೊಣೆಗಾರಿಕೆಗಳನ್ನು ಪರಿಗಣಿಸಿ ಮುಂದಿನ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಇದರೊಂದಿಗೆ 10ನೇ ತರಗತಿಯಿಂದ 12ನೇ ತರಗತಿಗೆ ಹಾಗೂ 12ನೇ ತರಗತಿಯಿಂದ ಪದವಿಗೆ ಶಿಕ್ಷಣ ಮುಂದುವರಿಸಲು ಸೇವಾ ತರಬೇತಿಯ ಜೊತೆಯಲ್ಲೇ ವ್ಯವಸ್ಥೆ ಮಾಡಲಾಗಿದೆ.
ಸೇವಾ ವಿಸ್ತರಣೆಯ ಅವಧಿಯಲ್ಲಿ ವೇತನ ಹೆಚ್ಚಳವಾಗಲಿದ್ದು, ಮೊದಲ ವರ್ಷದಲ್ಲಿ ₹43,500 ಹಾಗೂ ಎರಡನೇ ವರ್ಷದಲ್ಲಿ ₹47,000 ವೇತನ ಸಿಗಲಿದೆ. ಇದರೊಂದಿಗೆ ಯೋಜನೆಯಡಿ ಸಿಗುವ ‘ಸೇವಾ ನಿಧಿ’ ಪ್ಯಾಕೇಜ್ ಸಹ ಮುಂದುವರಿಯಲಿದೆ.

























