ಪರಶುರಾಮ ಥೀಮ್ ಪಾರ್ಕ್ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹ
ಬೆಂಗಳೂರು : ಪರಶುರಾಮ ಥೀಮ್ ಪಾರ್ಕ್ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಮುಕ್ತಗೊಳಿಸಬೇಕೆಂದು ಆಗ್ರಹಿಸಿ ನ. 22ರ ಭಾನುವಾರ ಬೆಂಗಳೂರಿನಿಂದ ಬೈಲೂರು ಪರಶುರಾಮ ಥೀಮ್ ಪಾರ್ಕ್ವರೆಗೆ ಬೃಹತ್ ವಾಹನ ಜಾಥಾ ನಡೆಯಲಿದೆ ಎಂದು ಜನಾಗ್ರಹ ಸಮಿತಿ ಬೆಂಗಳೂರು ಪ್ರಕಟಣೆಯಲ್ಲಿ ತಿಳಿಸಿದೆ.
ಕರಾವಳಿ ಭಾಗದ ಜನರ ಬಹುದಿನಗಳ ಬೇಡಿಕೆಯೊಂದು ಈಡೇರಬೇಕು. ಪರಶುರಾಮ ಥೀಮ್ ಪಾರ್ಕ್ ಕೇವಲ ಒಂದು ಪ್ರವಾಸಿ ತಾಣವಲ್ಲ. ಇದು ಪರಶುರಾಮನ ಐತಿಹಾಸಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಯೋಜನೆಯಾಗಿದೆ. ಕರಾವಳಿ ಕರ್ನಾಟಕದ ಪ್ರವಾಸೋದ್ಯಮ ಅಭಿವೃದ್ಧಿಗೂ ಈ ಯೋಜನೆ ಮಹತ್ವದ ಕೊಡುಗೆ ನೀಡಲಿದೆ. ಆದರೆ, ಸರ್ಕಾರ ಬದಲಾದ ನಂತರ ಈ ಯೋಜನೆಯ ಕಾಮಗಾರಿ ಸ್ಥಗಿತಗೊಂಡಿದೆ. ಸರಕಾರದ ವಿಳಂಬ ನೀತಿ ಕುರಿತು ಸಾರ್ವಜನಿಕ ವಲಯದಲ್ಲಿ ಆಕ್ರೋಶವಿದೆ. ಯೋಜನೆಗೆ ಸಂಬಂಧಿಸಿದ ಗೊಂದಲ, ವಿವಾದ ಶೀಘ್ರವಾಗಿ ಬಗೆಹರಿಸಿ, ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಪ್ರಾಮಾಣಿಕವಾಗಿ ಕ್ರಮ ಕೈಗೊಳ್ಳಬೇಕೆಂಬುದು ಜನಾಗ್ರಹ ಸಮಿತಿಯ ಒತ್ತಾಯವಾಗಿದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಯಾರ ವಿರುದ್ಧವೂ ಅಲ್ಲ
ಈ ಹೋರಾಟ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧವಲ್ಲ. ಬದಲಾಗಿ, ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ, ಪ್ರವಾಸೋದ್ಯಮದ ಅಭಿವೃದ್ಧಿ ಹಾಗೂ ಸಾರ್ವಜನಿಕರ ಆಶಯ ಈಡೇರಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಧಾರ್ಮಿಕ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಯುವಕರು, ಸಾರ್ವಜನಿಕರು ಹಾಗೂ ಪರಶುರಾಮ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಜನಾಗ್ರಹ ಸಮಿತಿ ಮನವಿ ಮಾಡಿದೆ.









































