ಬದುಕಿನಲ್ಲಿ ಸಾಧಿಸಬೇಕೆಂಬ ಛಲವಿದ್ದರೆ ಒಂದು ಅದೃಷ್ಟದ ಬಾಗಿಲು ಮುಚ್ಚಿದರೂ ಹತ್ತಾರು ಬಾಗಿಲುಗಳು ತೆರೆದುಕೊಳ್ಳುತ್ತವೆ: ಡಾ. ರವಿಪ್ರಕಾಶ್ ವೈ.
ಮಣಿಪಾಲ:ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜ್ಞಾನ ಸಂಭ್ರಮ ವಾರ್ಷಿಕೋತ್ಸವದ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿ ಡಾ. ರವಿಪ್ರಕಾಶ್ ವೈ, ಮಣಿಪಾಲ ಅಸೊಸಿಯೆಟ್ ಡೈರೆಕ್ಟರ್( ಆಕಾಡೆಮಿಕ್ಸ್) ಎಂ.ಐ.ಟಿ, ಮಣಿಪಾಲ ಅವರು ಮಾತನಾಡಿ, ಮಕ್ಕಳು ಒಳ್ಳೆಯ ಅಂಕಗಳನ್ನು ಪಡೆದುಕೊಳ್ಳುವುದರೊಂದಿಗೆ ಉತ್ತಮ ಸಂವಹನ ಕೌಶಲ್ಯ, ಸೃಜನಶೀಲತೆ, ವ್ಯಕ್ತಿತ್ವವನ್ನು ಹೊಂದುವುದರಿಂದ ಅತೀ ಶೀಘ್ರದಲ್ಲಿ ಉದ್ಯೋಗವನ್ನು ತಮ್ಮದಾಗಿಸಿಕೊಳ್ಳಬಹುದು. ಶಿಸ್ತು ಇಲ್ಲದಂತಹ ವ್ಯಕ್ತಿತ್ವಕ್ಕೆ ಬದುಕಿನಲ್ಲಿ ಯಾವುದೇ ರೀತಿಯ ಮನ್ನಣೆ ಸಿಗುವುದಿಲ್ಲ. ನಮ್ಮಲ್ಲಿ ಉತ್ತಮ ನೈತಿಕತೆ, ಸರಿಯಾದ ಆಯ್ಕೆ, ಆತ್ಮವಿಶ್ವಾಸ, ಅದಕ್ಕೆ ತಕ್ಕ ಬದ್ಧತೆ ಅತೀ ಮುಖ್ಯ. ಬದುಕಿನಲ್ಲಿ ಸಾಧಿಸಬೇಕೆಂಬ ಛಲವಿದ್ದರೆ ಒಂದು ಅದೃಷ್ಟದ ಬಾಗಿಲು ಮುಚ್ಚಿದರೂ ಹತ್ತಾರು ಬಾಗಿಲುಗಳು ತೆರೆದುಕೊಳ್ಳುತ್ತವೆ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಡಾ. ನಾಗರಾಜ್ ಭಟ್, ಪ್ರಾಂಶುಪಾಲರು,( ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್) ಮಾತನಾಡಿ, ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣಕ್ಕೆ ಹೋಗುವಾಗ ಹಲವಾರು ರೀತಿಯಲ್ಲಿ ಶೈಕ್ಷಣಿಕ ಸವಾಲುಗಳನ್ನು ಎದುರಿಸಲು ಸಿದ್ಧರಿರಬೇಕು. ಹಾಗಿದ್ದಲ್ಲಿ ಮಾತ್ರ ಪ್ರಸ್ತುತ ಉದ್ಯೋಗ ಕ್ಷೇತ್ರದಲ್ಲಿಯೂ ಸಶಕ್ತವಾಗಿ ಮುಂದುವರಿಯಲು ಸಾಧ್ಯ. ಕೃತಕ ಬುದ್ಧಿಮತ್ತೆ ಇವತ್ತಿನ ಎಲ್ಲಾ ಬಹುಪಾಲು ಉದ್ಯೋಗವನ್ನು ಆವರಿಸಿರುವುದರಿಂದ ಅಂಕಗಳ ಜೊತೆಯಲ್ಲಿ ಉತ್ತಮ ಪ್ರಾವೀಣ್ಯತೆ ಹೊಂದುವುದರ ಮೂಲಕ ಕೃತಕ ಬುದ್ಧಿಮತ್ತೆಗೆ ಸಂಬಂಧಿತ ಜ್ಞಾನ, ಕೌಶಲವನ್ನು ಬೆಳೆಸಿಕೊಂಡಾಗ ಮಾತ್ರ ನೀವು ಭವಿಷ್ಯದಲ್ಲಿ ಉತ್ತಮವಾದ ಜೀವನವನ್ನು ರೂಪಿಸಿಕೊಳ್ಳಬಹುದು ಎಂದು ಹೇಳಿದರು.
ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ,ರಾಜ್ಯ ಮಟ್ಟದ ಕ್ರೀಡಾ ಸಾಧಕರಿಗೆ ಮತ್ತು ದ್ವಿತೀಯ ಪಿ.ಯು.ಸಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು.
ಪ್ರಾಂಶಪಾಲ ರವಿ ಜಿ., ಹೇಮಂತ, ವಿದ್ಯಾರ್ಥಿ ನಾಯಕರಾದ ಪ್ರಥಮ್ ಭಂಡಾರಿ ಮತ್ತು ಸ್ಮೃತಿ ಶೆಟ್ಟಿ ಇವರು ಉಪಸ್ಥಿತರಿದ್ದರು.
ಪ್ರಾಂಶುಪಾಲ ಗಣೇಶ ಶೆಟ್ಟಿ ಸ್ವಾಗತಿಸಿದರು. ಗಣಿತಶಾಸ್ತ್ರ ಉಪನ್ಯಾಸಕಿ ನಕ್ಷಾ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.









































