ತಿಮರೋಡಿ ಗಡಿಪಾರು ಆದೇಶಕ್ಕೆ ತಡೆ ಕೋರಿದ ಅರ್ಜಿ ತಿರಸ್ಕರಿಸಿದ ಗೃಹ ಇಲಾಖೆ

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಲು ನೀಡಿದ ಅದೇಶ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಒಂದು ವರ್ಷದ ಅವಧಿಗೆ ಗಡಿಪಾರು ಮಾಡಿ ಪುತ್ತೂರು ಉಪವಿಭಾಗಾಧಿಕಾರಿ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಉಜಿರೆಯ ಸೌಜನ್ಯ ಪರ ಹೋರಾಟಗಾರ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಅರ್ಜಿಯನ್ನು ಗೃಹ ಇಲಾಖೆಯ ಸಕ್ಷಮ ಅಪೀಲು ಪ್ರಾಧಿಕಾರ ತಿರಸ್ಕರಿಸಿದೆ. ಇದರಿಂದಾಗಿ ತಿಮರೋಡಿ ಅವರ ಗಡಿಪಾರು ಆದೇಶ ಮುಂದುವರಿಯುವ ಸಾಧ್ಯತೆ ಇದೆ.

ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ದಾಖಲಾಗಿರುವ ವಿವಿಧ ಕ್ರಿಮಿನಲ್ ಪ್ರಕರಣಗಳು ಹಾಗೂ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿಗೆ ಸಂಬಂಧಿಸಿದ ಕಾರಣಗಳನ್ನು ಉಲ್ಲೇಖಿಸಿ ಪುತ್ತೂರು ಸಹಾಯಕ ಆಯುಕ್ತರು ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಒಂದು ವರ್ಷದ ಅವಧಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದರು.

ಮಹೇಶ್ ಶೆಟ್ಟಿ ತಿಮರೋಡಿ ವಕೀಲರ ಮೂಲಕ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್‌ನ ಏಕಸದಸ್ಯ ಹಾಗೂ ವಿಭಾಗೀಯ ಪೀಠಗಳು ಅವರ ಅರ್ಜಿಗಳನ್ನು ವಜಾಗೊಳಿಸಿ, ಕಾನೂನಿನ ಪ್ರಕಾರ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸುವಂತೆ ಸೂಚಿಸಿದ್ದವು.

ಬಳಿಕ ಸುಪ್ರೀಂ ಕೋರ್ಟ್‌ನಲ್ಲಿಯೂ ಗಡಿಪಾರು ಆದೇಶಕ್ಕೆ ತಡೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಅಲ್ಲಿಯೂ ತಡೆಯಾಜ್ಞೆ ದೊರೆಯದೆ ಶಾಸನಬದ್ಧ ಅಪೀಲು ಪ್ರಾಧಿಕಾರವನ್ನು ಸಂಪರ್ಕಿಸುವಂತೆ ಸೂಚಿಸಲಾಗಿತ್ತು. ಗೃಹ ಇಲಾಖೆಯ ಸಕ್ಷಮ ಅಪೀಲು ಪ್ರಾಧಿಕಾರ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಅರ್ಜಿಯನ್ನು ಅ.17ರಂದು ತಿರಸ್ಕರಿಸಿರುವುದಾಗಿ ತಿಳಿದು ಬಂದಿದೆ.

ನ್ಯಾಯಾಲಯಗಳಿಂದಲೂ ತಡೆಯಾಜ್ಞೆ ದೊರೆಯದ ಹಿನ್ನೆಲೆಯಲ್ಲಿ ಹಾಗೂ ಇದೀಗ ಗೃಹ ಇಲಾಖೆಯ ಅಪೀಲು ಪ್ರಾಧಿಕಾರವೂ ಅರ್ಜಿಯನ್ನು ವಜಾಗೊಳಿಸಿರುವುದರಿಂದ ಮಹೇಶ್ ಶೆಟ್ಟಿ ತಿಮರೋಡಿ ಅವರ ಗಡಿಪಾರು ಪ್ರಕ್ರಿಯೆ ಮತ್ತೆ ಮುನ್ನೆಲೆಗೆ ಬಂದಿದ್ದು, ಮುಂದಿನ ಕ್ರಮದ ಬಗ್ಗೆ ಕುತೂಹಲ ಮೂಡಿಸಿದೆ.



















































































error: Content is protected !!
Scroll to Top