ನವದೆಹಲಿ: ಅಯೋಧ್ಯೆಯ ಶ್ರೀ ರಾಮಮಂದಿರದ ದೇಣಿಗೆ ಹಣದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರದ ವಿಶೇಷ ತನಿಖಾ ತಂಡ (SIT) ಚಾರ್ಜ್‌ಶೀಟ್ ಸಲ್ಲಿಸಿದೆ ಎಂಬ ಮಾಹಿತಿಯನ್ನು ಸುಪ್ರೀಂ ಕೋರ್ಟ್ ಅಧಿಕೃತವಾಗಿ ದಾಖಲಿಸಿಕೊಂಡಿದೆ.
ಹಾಗೆಯೇ ಈ ಕುರಿತ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಲೇವಾರಿ ಮಾಡಿದ್ದು, ಪ್ರಕರಣದ ವಿಚಾರಣೆಯನ್ನು ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯವೇ ಮುಂದುವರಿಸಲಿದೆ ಎಂದು ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಗ್ನಿ ಹಾಗೂ ವಿ. ಮೋಹನಾ ಅವರನ್ನೊಳಗೊಂಡ ಪೀಠದ ಮುಂದೆ ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ ಅವರು ಸುಪ್ರೀಂ ಕೋರ್ಟ್‌ಗೆ ವಿವರಣೆ ನೀಡಿದರು. ದೇಣಿಗೆ ಎಣಿಕೆ ಪ್ರಕ್ರಿಯೆಯ ಸಮಯದಲ್ಲಿ ಹಣ ದುರುಪಯೋಗವಾಗಿರುವುದು ಎಸ್‌ಐಟಿ ತನಿಖೆಯಲ್ಲಿ ದೃಢಪಟ್ಟಿದೆ. ಪ್ರಕರಣದ ಆರೋಪಿಗಳಲ್ಲಿ ಕೆಲವರು ಈ ಹಣವನ್ನು ಆಸ್ತಿಗಳಲ್ಲಿ ಹೂಡಿಕೆ ಮಾಡಿದ್ದರೆ, ಇನ್ನು ಕೆಲವರು ಬ್ಯಾಂಕ್ ಖಾತೆಗಳಲ್ಲಿ ಡೆಪಾಸಿಟ್ ಮಾಡಿದ್ದಾರೆ ಎಂದು ಮೆಹ್ರಾ ವಿವರಿಸಿದ್ದಾರೆ.

ಚಾರ್ಜ್‌ಶೀಟ್ ಸ್ವೀಕರಿಸಿದ ಸುಪ್ರೀಂ ಕೋರ್ಟ್ ಪೀಠವು, ತನಿಖೆಗೆ ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದ ಅರ್ಜಿದಾರರು ಅಯೋಧ್ಯೆಯ ಸ್ಥಳೀಯ ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಗೆ ನೆರವಾಗಲು ಅನುಮತಿ ನೀಡಿತು. ಪ್ರಕರಣದ ಅರ್ಹತೆ ಅಥವಾ ಮೆರಿಟ್ ಬಗ್ಗೆ ನ್ಯಾಯಾಲಯ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟಪಡಿಸಿ ಅರ್ಜಿಗಳನ್ನು ಮುಕ್ತಾಯಗೊಳಿಸಿತು.
ಹಾಗೆಯೇ ಅಯೋಧ್ಯೆ ಭೂ ವಿವಾದ ಪ್ರಕರಣದಲ್ಲಿ ತೀರ್ಪು ನೀಡಿರುವ ಜಾಗದಲ್ಲೇ ರಾಮಮಂದಿರ ನಿರ್ಮಾಣವಾಗಿದೆಯೇ ಎಂಬುದನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಹೊಸ ಅರ್ಜಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತು. ಸೆ. 21 ರಂದು ಕೋರ್ಟ್‌ಗೆ ಮಾಹಿತಿ ನೀಡಿದ್ದ ಎಸ್‌ಐಟಿ, ಸೆ. 25 ರೊಳಗೆ ತನ್ನ ಮೊದಲ ಚಾರ್ಜ್‌ಶೀಟ್ ಸಲ್ಲಿಸುವುದಾಗಿ ತಿಳಿಸಿತ್ತು. ಅದರಂತೆ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.









































