ಹಿರಿಯಡ್ಕ ಎಸ್‌ಐ ಕರ್ತವ್ಯದಿಂದ ಬಿಡುಗಡೆ, ತನಿಖೆಗೆ ಐದು ತಂಡ ರಚನೆ
ಉಡುಪಿ: ಪ್ರದೀಪ್ ಪೂಜಾರಿ ಆತ್ಮಹತ್ಯೆ ಮತ್ತು ಅದಕ್ಕೆ ಪೂರಕ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಪ್ರದೀಪ್ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಲು ಐದು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ. ಐುವತಿಯ ಫೋಟೋಗಳನ್ನು ವೈರಲ್ ಮಾಡಿರುವ ವಿರುದ್ಧ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕಳೆದ ಎರಡು ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಎಸ್ಪಿ, ಯುವತಿ ಫೋಟೋ ಹಂಚಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ತೇಜೋವಧೆ ಮಾಡಲಾಗುತ್ತಿದೆ. ಅತ್ಯಾಚಾರ ಸಂತ್ರಸ್ತೆಯ ಫೋಟೋ ಹಚ್ಚಕೊಳ್ಳುವುದು ಕಾನೂನು ಬಾಹಿರ. ಯುವತಿ ಬಗ್ಗೆ ಅವಹೇಳನಕಾರಿ ವಿಷಯವನ್ನು ಹರಡುವಲ್ಲಿ ಭಾಗಿಯಾಗಿರುವ ಸುಮಾರು 150 ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪೊಲೀಸರು ಈಗಾಗಲೇ ಗುರುತಿಸಿದ್ದಾರೆ. ಸತ್ಯವನ್ನು ಪರಿಶೀಲಿಸದೆ ತಪ್ಪು ಮಾಹಿತಿ ಹರಡುವ ಮತ್ತು ಮಾನಹಾನಿಕರ ಪೋಸ್ಟ್‌ಗಳನ್ನು ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಯುವತಿ ನವೆಂಬರ್ 10, 2025ರಂದು ಪ್ರದೀಪ್ ವಿರುದ್ಧ ಮೊದಲು ದೂರು ದಾಖಲಿಸಿದ್ದರು. ಮದುವೆಯಾಗಲು ನಿರಾಕರಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರದೀಪ್‌ನನ್ನು ಬಂಧಿಸಲಾಗಿತ್ತು. ಜಾಮೀನು ಪಡೆದ ನಂತರ, ಪ್ರದೀಪ್ ನವೆಂಬರ್ 29, 2025ರ ಬೆಳಿಗ್ಗೆ ಯುವತಿಯನ್ನು ದೊಡ್ಡಪಡೆ ಎಂಬ ಸ್ಥಳಕ್ಕೆ ಕರೆದೊಯ್ದು ಜೀವ ಬೆದರಿಕೆ ಹಾಕಿ ಅತ್ಯಾಚಾರ ಎಸಗಿದ್ದಾಗಿ ಮತ್ತೊಂದು ದೂರು ದಾಖಲಾಗಿತ್ತು.
ಈ ಪ್ರಕರಣದಲ್ಲಿ ಅತ್ಯಾಚಾರದ ಆರೋಪವನ್ನು ಮಹಿಳೆಯ ಹೇಳಿಕೆ ಮತ್ತು ವೈದ್ಯಕೀಯ ದಾಖಲೆಗಳ ಆಧಾರದ ಮೇಲೆ ಅತ್ಯಾಚಾರ ನಡೆದಿರುವುದು ಖಚಿತವಾಗಿ ಪ್ರಕರಣವನ್ನು ಚಾರ್ಜಶೀಟ್ ಮಾಡಲಾಗಿತ್ತು. ಮೂರನೇ ಘಟನೆ ನವೆಂಬರ್ 28, 2026ರಂದು ನಡೆದಿರುವುದಾಗಿ ವರದಿಯಾಗಿದೆ. ಪ್ರದೀಪ್ ಯುವತಿ ಸ್ನಾನ ಮಾಡಿ ಹೊರಗೆ ಬಂದಾಗ ಕೊಲ್ಲಲು ಯತ್ನಿಸಿದ್ದಾನೆ ಮತ್ತು ಆಕೆಯ ತಾಯಿಯ ಮೇಲೆ ಮೆಣಸಿನ ಪುಡಿ ಎರಚಿದ್ದಾನೆ ಎಂದು ಆರೋಪಿಸಲಾಗಿದೆ.
ಪ್ರದೀಪ್ ಯುವತಿಯನ್ನು ಕೊಲ್ಲಲು ಬಂದಿರುವುದಾಗಿ ಸ್ಪಷ್ಟವಾಗಿ ಹೇಳಿದ್ದಾನೆ ಎಂದು ಹೇಳಲಾದ ಆಡಿಯೋ ರೆಕಾರ್ಡಿಂಗ್‌ನಲ್ಲಿದೆ ಎಂದು . ಪ್ರದೀಪ್ ಅವರನ್ನು ಅಪಹರಿಸಲಾಗಿದೆ ಎಂಬ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂದು ತಿಳಿದು ಬಂದಿದೆ. ಘಟನೆಯ ನಂತರ ಯುವತಿ ಮತ್ತು ಆಕೆಯ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದೃಢಪಡಿಸುವ ವೈದ್ಯಕೀಯ ದಾಖಲೆಗಳು ಲಭ್ಯವಿವೆ.
ಮಹಿಳೆಯ ತಾಯಿ ತನ್ನ ಸಂಬಂಧಿಕರನ್ನು ಸ್ಥಳಕ್ಕೆ ಕರೆದಿದ್ದಾರೆ. ನಂತರ ಸುಮಾರು ಏಳರಿಂದ ಎಂಟು ಜನರು ಪ್ರದೀಪ್ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಪ್ರದೀಪ್ ಪೂಜಾರಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರದೀಪ್ ಮೇಲಿನ ಹಲ್ಲೆಗೆ ಸಂಬಂಧಿಸಿದ ದೂರನ್ನು ಆರಂಭದಲ್ಲಿ ಎಫ್‌ಐಆರ್ ಬದಲಿಗೆ ಎನ್‌ಸಿ ಕೇಸ್ ಆಗಿ ದಾಖಲಿಸಲಾಗಿತ್ತು. ಎಫ್‌ಐಆರ್ ದಾಖಲು ಮಾಡದಿರುವ ಕಾರಣ ಹಿರಿಯಡ್ಕ ಸಬ್‌ಇನ್ಸ್‌ಪೆಕ್ಟರ್ ಅವರನ್ನು ಈಗಾಗಲೇ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ ಮತ್ತು ಇಲಾಖಾ ವಿಚಾರಣೆ ನಡೆಯುತ್ತಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರತ್ಯೇಕ ದೂರು ದಾಖಲಾಗಿದೆ. ಆರೋಪಿಗಳನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಐದು ತಂಡಗಳನ್ನು ರಚಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಗಳು ನಡೆಯುತ್ತಿವೆ. ಆದರೆ ಕಾನೂನನ್ನು ಕೈಗೆತ್ತಿಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದಿದ್ದಾರೆ.










































