ಪಠ್ಯ ಶಿಕ್ಷಣಕ್ಕೆ ಮೀರಿದ ಕಲಿಕೆಯನ್ನು NSS ಕಲಿಸುತ್ತದೆ : ಕೆ. ಶಾಂತರಾಮ ಸೂಡ
ಮಣಿಪಾಲ: ಶೈಕ್ಷಣಿಕ ಜೀವನದಲ್ಲಿ ಪಠ್ಯ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಒಂದಾದ ಎನ್.ಎಸ್.ಎಸ್. ನಮ್ಮ ಜೀವನಕ್ಕೆ ನಿಜ ಜೀವನದ ಕಲಿಕೆಯನ್ನು ಕಲಿಸುತ್ತದೆ. ಪದವಿಪೂರ್ವ ವಿಭಾಗದಲ್ಲಿ ಸಿಕ್ಕಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಪೆರ್ಡೂರು ಪ್ರೌಢ ಶಾಲೆ ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಶಾಂತರಾಮ ಸೂಡ ಹೇಳಿದ್ದಾರೆ.
ಅವರು ಪೆರ್ಡೂರು ಪ್ರೌಢಶಾಲೆ ಕನ್ನಡ ಮಾಧ್ಯಮದಲ್ಲಿ ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು, ವಿದ್ಯಾನಗರ ಇಲ್ಲಿಯ ಎನ್ ಎಸ್ ಎಸ್ ಘಟಕ ಆಯೋಜಿಸಿದ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಸಂತೋಷ್ ನೆಲ್ಲಿಕಾರು ದಿಕ್ಸೂಚಿ ಭಾಷಣ ಮಾಡಿದರು.
ಮುಖ್ಯ ಅತಿಥಿ ಪೆರ್ಡೂರು ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಾಸುದೇವ ನಾಯಕ್ ಮಾತನಾಡಿ, ಪ್ರತಿದಿನವೂ ಹೊಸ ಕಲಿಕೆಯನ್ನು ನೀಡುವ ಶಿಬಿರವನ್ನು ಸದುಪಯೋಗಪಡಿಸಿಕೊಳ್ಳಿ ಎನ್ನುತ್ತಾ ಶಿಬಿರಾರ್ಥಿಗಳಿಗೆ ಶುಭಾಶಯ ಹೇಳಿದರು.
ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗಣೇಶ ಶೆಟ್ಟಿ ಅಧ್ಯಕ್ಷತೆ ವಹಿಸಿ ಶುಭಾಶಯಗೈದರು.
ಪೆರ್ಡೂರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಹಸೀನ ಬಾನು, ವಿದ್ಯಾರ್ಥಿ ಪ್ರತಿನಿಧಿಗಳಾದ ಕೀರ್ತನ್ ಹಾಗೂ ತನ್ವಿ ಎಸ್. ಆಚಾರ್ಯ ವೇದಿಕೆಯಲ್ಲಿದ್ದರು.
ಕಾರ್ಯಕ್ರಮಾಧಿಕಾರಿ ರವಿ ಜಿ. ಸ್ವಾಗತಿಸಿದರು. ಆಂಗ್ಲ ಭಾಷಾ ವಿಭಾಗ ಮುಖ್ಯಸ್ಥೆ ಶಮಿತ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.










































