ಜಿಲ್ಲಾ ಆಹಾರ ಸುರಕ್ಷತಾ ಇಲಾಖೆಯಿಂದ ಮಂಗಳೂರಿನ ವಿವಿಧೆಡೆ ಕಾರ್ಯಾಚರಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಇಲಾಖೆಯು ಆಸ್ಪತ್ರೆ, ಕಾಲೇಜು ಕ್ಯಾಂಟೀನ್‌ ಹಾಗೂ ಬೇಕರಿಗಳಲ್ಲಿ ಸಾರ್ವಜನಿಕರಿಗೆ ಪೂರೈಸಲಾಗುವ ಆಹಾರದ ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಮುಕ್ಕ ಹಾಗೂ ಮುಲ್ಕಿ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿತು.

ಸುರತ್ಕಲ್ ಸಮೀಪದ ಮುಕ್ಕದಲ್ಲಿರುವ ಶ್ರೀನಿವಾಸ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕ್ಯಾಂಟೀನ್ ಹಾಗೂ ಹಾಸ್ಟೆಲ್ ಮೆಸ್‌ನ ಅಡುಗೆ ಕೋಣೆಗಳಿಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಕೂಲಂಕಷ ಪರಿಶೀಲನೆ ನಡೆಸಿತು.

ಅಡುಗೆ ತಯಾರಿಸಲು ಬಳಸಲಾಗುವ ಕಚ್ಚಾ ಆಹಾರ ಸಾಮಗ್ರಿಗಳ ಮಾದರಿಗಳು ಮತ್ತು ಕುಡಿಯುವ ನೀರಿನ ಮಾದರಿಯನ್ನು ಸಂಗ್ರಹಿಸಿ, ಗುಣಮಟ್ಟ ಪರೀಕ್ಷೆಗಾಗಿ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ತಿಳಿದು ಬಂದಿದೆ.

ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಅತ್ಯಂತ ಉತ್ತಮ ಗುಣಮಟ್ಟದ, ಶುಚಿ-ರುಚಿಯಾದ ಹಾಗೂ ಸುರಕ್ಷಿತ ಆಹಾರವನ್ನು ತಯಾರಿಸಿ ನೀಡಬೇಕೆಂದು ಆಡಳಿತ ಮಂಡಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.

ಆಹಾರ ತಯಾರಿಸುವ ಮತ್ತು ಸರಬರಾಜು ಮಾಡುವ ನೌಕರರು ಕಡ್ಡಾಯವಾಗಿ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ನಿಯಮಿತವಾಗಿ ವೈದ್ಯಕೀಯ ತಪಾಸಣೆ ನಡೆಸಿ ಆರೋಗ್ಯ ದೃಢೀಕರಣ ಪತ್ರಗಳನ್ನು ಸಲ್ಲಿಸಬೇಕು ಎಂದು ನಿರ್ದೇಶಿಸಲಾಯಿತು.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಎಲ್ಲಾ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಾಕೀತು ಮಾಡಲಾಯಿತು.

ಹಬ್ಬಗಳ ಸಂದರ್ಭದಲ್ಲಿ ಭಾರಿ ಪ್ರಮಾಣದಲ್ಲಿ ಸಿಹಿ ತಿಂಡಿಗಳು ಮಾರಾಟವಾಗುವುದನ್ನು ಗಮನದಲ್ಲಿಟ್ಟುಕೊಂಡು, ಮುಲ್ಕಿ ಕಾರ್ನಾಡ್ ವ್ಯಾಪ್ತಿಯಲ್ಲಿರುವ ಬೇಕರಿಗಳ ಮೇಲ್ಲೂ ಆಹಾರ ಸುರಕ್ಷತಾ ತಂಡವು ವಿಶೇಷ ಕಾರ್ಯಾಚರಣೆ ನಡೆಸಿತು.

ಸಿಹಿ ತಿಂಡಿಗಳಿಗೆ ಅಪಾಯಕಾರಿ ರಾಸಾಯನಿಕಯುಕ್ತ ಕೃತಕ ಬಣ್ಣಗಳನ್ನು ಬಳಸಬಾರದು ಎಂದು ಬೇಕರಿ ಮಾಲೀಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಯಿತು.

ಬಣ್ಣಗಳನ್ನು ಬಳಸಿ ತಯಾರಿಸಲಾಗಿದ್ದ ಸಂಶಯಾಸ್ಪದ ಸಿಹಿ ತಿಂಡಿಗಳನ್ನು ಸ್ಥಳದಲ್ಲೇ ಸೀಜ್ ಮಾಡಿ, ಸೀಲ್ ಹಾಕಿ ಪರೀಕ್ಷೆಗಾಗಿ ಆಹಾರ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

ಬೇಕರಿ ಮತ್ತು ತಿಂಡಿ ತಯಾರಿಕಾ ಘಟಕಗಳಲ್ಲಿ ಸಮರ್ಪಕ ಶುಚಿತ್ವ ಕಾಪಾಡಿಕೊಳ್ಳದ ಬೇಕರಿಗಳಿಗೆ ಇಲಾಖೆಯ ವತಿಯಿಂದ ತಕ್ಷಣವೇ ನೋಟಿಸ್‌ ಜಾರಿಗೊಳಿಸಲಾಗಿದೆ.























































































































error: Content is protected !!
Scroll to Top