ನಾಲ್ವರು ಸಹೋದ್ಯೋಗಿಗಳನ್ನು ಗುಂಡು ಹಾರಿಸಿ ಕೊಂದ ಸಿಐಎಸ್‌ಎಫ್‌ ಸಿಬ್ಬಂದಿ

ಡ್ಯೂಟಿ ಬದಲಾವಣೆ ವಿಚಾರವಾಗಿ ನಡೆದ ವಾಗ್ವಾದ ಕೊಲೆಯಲ್ಲಿ ಅಂತ್ಯ

ಶ್ರೀನಗರ: ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (CISF) ಹೆಡ್‌ಕಾನ್‌ಸ್ಟೆಬಲ್ ಒಬ್ಬ ಮನಬಂದಂತೆ ಗುಂಡು ಹಾರಿಸಿ ಒಬ್ಬ ಹಿರಿಯ ಅಧಿಕಾರಿ ಸೇರಿದಂತೆ ನಾಲ್ವರು ಸಿಬ್ಬಂದಿಯನ್ನು ಹತ್ಯೆ ಮಾಡಿದ ಆಘಾತಕಾರಿ ಘಟನೆ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಡ್ಯೂಟಿ ಬದಲಾಯಿಸುವ ಸಂದರ್ಭದಲ್ಲಿ ನಡೆದಿದ್ದು, ಯೋಧರ ನಡುವೆ ವಾಗ್ವಾದ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಬಸೋಹ್ಲಿಯ ಮಾಷ್ಕಾ ಗ್ರಾಮದಲ್ಲಿರುವ ಸೇವಾ ನದಿಯ ‘ಸೇವಾ ಜಲವಿದ್ಯುತ್ ಯೋಜನೆ’ ಘಟಕದಲ್ಲಿ ನಿಯೋಜನೆಗೊಂಡಿದ್ದ ಸಿಐಎಸ್‌ಎಫ್ ತುಕಡಿಯಲ್ಲಿ ಮಂಗಳವಾರ ಸಂಜೆ ಸುಮಾರು 6.40ರ ವೇಳೆಗೆ ಈ ಘಟನೆ ನಡೆದಿದೆ. ಸಿಬ್ಬಂದಿ ನಡುವೆ ನಡೆದ ತೀವ್ರ ವಾಗ್ವಾದವೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ.

ಘಟನೆಯಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ಅಂಕಿತ್ ಕುಮಾರ್ ಪಾಂಡೆ, ಸಬ್‌ಇನ್‌ಸ್ಪೆಕ್ಟರ್ ಲಕ್ಷ್ಮಣ್ ಸಿಂಗ್, ಕಾನ್‌ಸ್ಟೆಬಲ್ ರಫೀಕ್ ಅಹ್ಮದ್ ಹಾಗೂ ಕಾನ್‌ಸ್ಟೆಬಲ್ ಸಂದೀಪ್ ಕುಮಾರ್ ಮೃತಪಟ್ಟಿದ್ದಾರೆ.

ಆರೋಪಿ ಹೆಡ್‌ಕಾನ್‌ಸ್ಟೆಬಲ್ ಅವದೇಶ್ ಕುಮಾರ್ ಸಿಂಗ್ ತನಗೆ ನೀಡಲಾಗಿದ್ದ ಎಕೆ-47 ರೈಫಲ್‌ನೊಂದಿಗೆ ಕಚೇರಿಯ ಆವರಣಕ್ಕೆ ನುಗ್ಗಿ ಏಕಾಏಕಿ ಸಹೋದ್ಯೋಗಿಗಳ ಮೇಲೆ ಗುಂಡಿನ ಮಳೆಗರೆದಿದ್ದಾನೆ. ಆತನ ಬಳಿ ಬರೋಬ್ಬರಿ 150 ಸುತ್ತು ಗುಂಡುಗಳಿದ್ದವು ಎಂದು ಸಿಐಎಸ್‌ಎಫ್ ಮೂಲಗಳು ತಿಳಿಸಿವೆ.

ಗುಂಡೇಟಿನಿಂದ ತೀವ್ರವಾಗಿ ರಕ್ತಸ್ರಾವಗೊಂಡು ಗಾಯಗೊಂಡಿದ್ದ ನಾಲ್ವರನ್ನು ತಕ್ಷಣವೇ ಹಿಮಾಚಲ ಪ್ರದೇಶದ ಎನ್‌ಎಚ್‌ಪಿಸಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿದ ಸ್ಥಳೀಯ ಪೊಲೀಸರು ಪ್ರದೇಶವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿ ಅವದೇಶ್ ಕುಮಾರ್ ಸಿಂಗ್‌ನನ್ನು ಬಂಧಿಸಲಾಗಿದ್ದು, ಪೊಲೀಸರಿಗೆ ಒಪ್ಪಿಸಲಾಗಿದೆ. ಗುಂಡಿನ ದಾಳಿಗೆ ನಿಖರ ಕಾರಣವೇನು ಎಂಬ ಕುರಿತು ಹಿರಿಯ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.



































error: Content is protected !!
Scroll to Top