ಹೆಬ್ರಿ: ಗೃಹಿಣಿ ಅನುಮಾನಾಸ್ಪದ ಸಾವು, ತಾಯಿಯಿಂದ ದೂರು ದಾಖಲು

ಹೆಬ್ರಿ: ಅಮಾಸೆಬೈಲಿನ ಶೇಡಿಮನೆ ಎಂಬಲ್ಲಿ ಜಲಜಾ ಪೂಜಾರಿ ಎಂಬವರ ಪುತ್ರಿ ಮಾಲಿನಿ (27) ಎಂಬವರು ಸೆ.29ರಂದು ಮನೆಯಲ್ಲಿ ಸಾವಿಗೀಡಾಗಿದ್ದು, ಈ ಸಾವಿನ ಬಗ್ಗೆ ಸಂಶಯ ಇದೆ ಎಂಬುದಾಗಿ ಜಲಜಾ ಪೂಜಾರಿ ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜಲಜಾ ಪೂಜಾರಿ ಸೀತಾನದಿ ಗೇರುಬೀಜ ಕಾರ್ಖಾನೆಯಲ್ಲಿ ನೌಕರಿ ಮಾಡುತ್ತಿದ್ದು, ಮಾಲಿನಿ, ಮಾಲಿನಿಯವರ ಗಂಡ ಸಂತೋಷ ಮತ್ತು ಈ ದಂಪತಿಯ ಮಕ್ಕಳಾದ ಮಾನ್ವಿ, ಸನ್ವಿತಾ, ಮನ್ವಿತಾ ಜೊತೆಗೆ ಶೇಡಿಮನೆಯಲ್ಲಿ ವಾಸವಾಗಿದ್ದರು.

ಸೆ.29ರಂದು ಜಲಜಾ ಪೂಜಾರಿ ನೌಕರಿ ಮಾಡುವ ಗೇರುಬೀಜ ಕಾರ್ಖಾನೆಗೆ ಸ್ಥಳೀಯರೊಬ್ಬರು ಫೋನ್‌ ಮಾಡಿ ಮನೆಯಲ್ಲಿ ಮಕ್ಕಳಿಗೆ ಹುಷಾರಿಲ್ಲ ಎಂಬ ವಿಚಾರವನ್ನು ಜಲಜಾ ಪೂಜಾರಿಯವರಿಗೆ ತಿಳಿಸಲು ಹೇಳಿದ್ದಾರೆ. ಅದರಂತೆ ಜಲಜಾ ಪೂಜಾರಿ 4 ಗಂಟೆ ಸುಮಾರಿಗೆ ಮನೆಗೆ ಧಾವಿಸಿದಾಗ ಮಾಲಿನಿಯನ್ನು ರೂಮಿನ ಬಾಗಿಲಿನಿಂದ ಹೊರಗೆ ಎಳೆದು ತಂದು ಮಲಗಿಸಿದ ಸ್ಥಿತಿಯಲ್ಲಿ ಇದ್ದು ಬಲಗಾಲು ರೂಮಿನ ದಾರಂದದ ಮೇಲೆ ಇತ್ತು.

ಮಾಲಿನಿ ಮಧ್ಯಾಹ್ನ 1.45ರಿಂದ 2.30ರ ನಡುವೆ ಕೋಣೆಯ ಬಾಗಿಲಿಗೆ ಚಿಲಕ ಹಾಕಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಆ ಸಮಯದಲ್ಲಿ ಮನೆಗೆ ಬಂದ ಸಂತೋಷನ ಸ್ನೇಹಿತೆ ಪ್ರೇಮಲತಾ ಎಂಬವರು ಇದನ್ನು ನೋಡಿ ಮಾಡಿಗೆ ಹತ್ತಿ ಕೋಣೆಯ ಮೇಲಿನ ಮೂರು ಹಂಚನ್ನು ಸರಿಸಿ ಕೋಣೆಯೊಳಗೆ ಇಳಿದು ಮಾಲಿನಿಯನ್ನು ನೇಣಿನ ಕುಣಿಕೆಯಿಂದ ಇಳಿಸಿ ಕೋಣೆಯ ಹೊರಗೆ ಎಳೆದುಕೊಂಡು ಬಂದು ಪ್ರಾಣ ಉಳಿಸಲು ಯತ್ನಿಸಿದ್ದಾರೆ ಎಂದು ಪ್ರೇಮಲತಾ ಜಲಜಾ ಪೂಜಾರಿಗೆ ತಿಳಿಸಿದ್ದಾರೆ.

ಮಾಲಿನಿಗೆ ಮದುವೆಯಾಗಿ ಎಂಟು ವರ್ಷಗಳಾಗಿದ್ದು, ಪ್ರಸ್ತುತ ದಂಪತಿ ನಡುವೆ ವೈಮನಸ್ಸು ಇದೆ. ಅದಾಗ್ಯೂ ಜೊತೆಗೆ ವಾಸವಾಗಿದ್ದರು. ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿರುವ ಹೊತ್ತಿನಲ್ಲಿ ಸಂತೋಷನ ಸ್ನೇಹಿತೆ ಪ್ರೇಮಲತಾ ಒಬ್ಬರೆ ಇದ್ದರು ಎಂಬ ಕಾರಣಕ್ಕೆ ಮಗಳ ಸಾವಿನ ಬಗ್ಗೆ ಸಂಶಯ ಇದೆ ಎಂದು ಜಲಜಾ ಪೂಜಾರಿ ದೂರಿನಲ್ಲಿ ತಿಳಿಸಿದ್ದಾರೆ.



































error: Content is protected !!
Scroll to Top