ಕಾರ್ಕಳ: ಮಲೇಷ್ಯಾದಲ್ಲಿ ಉದ್ಯೋಗ ತೆಗೆಸಿ ಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಆರೋಪಿಗಳಿಬ್ಬರು ಲಕ್ಷಾಂತರ ರೂ. ವಂಚಿಸಿದ ಘಟನೆ ಕಾರ್ಕಳದಲ್ಲಿ ನಡೆದಿದೆ.
ಆರೋಪಿಗಳಾದ ಕೃಷ್ಣ ಕುಲಾಲ್ ಬಜಗೋಳಿ ಮತ್ತು ಮೋಹಿತ್ ಬೆಂಗಳೂರು ಅವರು ಕಾರ್ಕಳದ ಮಿಯ್ಯಾರಿನಲ್ಲಿ ಫೋಟೋಗ್ರಫಿ ವೃತ್ತಿ ನಡೆಸುತ್ತಿದ್ದ ಪ್ರಕಾಶ್ ಆಚಾರ್ಯ ಎಂಬವರಿಗೆ ವಂಚಿಸಿರುವುದಾಗಿದೆ.
ಪ್ರಕಾಶ್ ಅವರಿಗೆ ಮಲೇಷ್ಯಾದ ರೆಸ್ಟೋರೆಂಟ್ ಒಂದರಲ್ಲಿ ಕೆಲಸ ತೆಗೆಸಿಕೊಡುವುದಾಗಿ ಆರೋಪಿಗಳು ನಂಬಿಸಿ ಅವರಿಂದ ಹಣ ಪಡೆದು, ಮಲೇಷ್ಯಾಕ್ಕೆ ತೆರಳಲು ಖರ್ಚು, ಟಿಕೆಟ್ ಹಣವನ್ನು ನೀಡುವಂತೆ ಹೇಳಿದ್ದಾರೆ. ಅದರಂತೆ ಪ್ರಕಾಶ್ ಅವರು ಕೃಷ್ಣ ಅವರ ಖಾತೆಗೆ ಗೂಗಲ್ ಪೇ ಮೂಲಕ 1,40,000 ರೂ. ಮತ್ತು ಮೋಹಿತ್ ಅವರ ಖಾತೆಗೆ 85,000 ರೂ. ವರ್ಗಾಯಿಸಿದ್ದಾರೆ.

ಆದರೆ ಆರೋಪಿಗಳು ಹಣ ಪಡೆದು ಮಲೇಷ್ಯಾ ಕ್ಕೆ ಟಿಕೆಟ್ ಮತ್ತು ವಿಸಾ ಕಳಿಸಿದ್ದು, ಪ್ರಕಾಶ್ ಅವರು ಮಲೇಷ್ಯಾಗೆ ಹೋದಾಗ ಅಲ್ಲಿನ ಏರ್‌ಪೋರ್ಟ್‌ನಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಅವರಿಗೆ ನೀಡಲಾದ ವಿಸಾ, ಟಿಕೆಟ್ ಸೇರಿದಂತೆ ಎಲ್ಲಾ ದಾಖಲೆಗಳು ನಕಲಿ ಎಂದು ತಿಳಿದು ಬಂದಿದೆ. ಜೊತೆಗೆ ಪ್ರಕಾಶ್ ಅವರು ಮಲೇಷ್ಯಾದಲ್ಲಿದ್ದ ಸಂದರ್ಭದಲ್ಲಿ ಮನ್ವೀರ್ ಸಿಂಗ್ ಎಂಬ ಏಜೆಂಟ್ ಸಹ ಮೂವತೈದು ಸಾವಿರ ರೂ. ಪಡೆದು ವಂಚಿಸಿದ್ದಾನೆ.
ಈ ಸಂಬಂಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

















