ರಾಷ್ಟ್ರೀಯ ಕರಾಟೆಯಲ್ಲಿ ಮುಂಡ್ಕೂರಿನ ಸಹೋದರಿಯರ ಮಿಂಚು – ಚಿನ್ನ, ಬೆಳ್ಳಿ, ಕಂಚಿನ ಪದಕಗಳ ಬೇಟೆ

ಮುಂಡ್ಕೂರು: ಯುನೈಟೆಡ್ ಕರಾಟೆ ಬುಡೋಕಾನ್ ಇಂಟರ್ನ್ಯಾಷನಲ್ ಸಂಸ್ಥೆಯ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್‌ಶಿಪ್‌–2026ರಲ್ಲಿ ಮುಂಡ್ಕೂರಿನ ಸಹೋದರಿಯರಾದ ಆರ್ಯಾ ಮಲ್ಯ ಮತ್ತು ಅಹನಾ ಮಲ್ಯ ಅವರು ಪದಕಗಳನ್ನು ಬಾಚಿಕೊಳ್ಳುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ಟೂರ್ನಿಯಲ್ಲಿ ಅದ್ಭುತ ಕೌಶಲ ಪ್ರದರ್ಶಿಸಿದ ಕುಮಾರಿ ಆರ್ಯಾ ಮಲ್ಯ ಅವರು ‘ಕುಮಿಟೆ’ ಹಾಗೂ ‘ಕಟಾ’ ಎರಡೂ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ಎರಡು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇದೇ ವೇಳೆ, ಎಂಟು ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಕಣಕ್ಕಿಳಿದ ಕುಮಾರಿ ಅಹನಾ ಮಲ್ಯ ಅವರು ವೈಯಕ್ತಿಕ ‘ಕಟಾ’ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ‘ಕುಮಿಟೆ’ ವಿಭಾಗದಲ್ಲಿ ಕಂಚಿನ ಪದಕ ಮುಡಿಗೇರಿಸಿಕೊಂಡು ಗಮನ ಸೆಳೆದಿದ್ದಾರೆ.
ಸಾಧಕ ಬಾಲಕಿಯರಿಬ್ಬರೂ ಮುಂಡ್ಕೂರಿನ ಮಂಜುನಾಥ ಮಲ್ಯ ಹಾಗೂ ನಯನಾ ಮಲ್ಯ ದಂಪತಿಯ ಪುತ್ರಿಯರು. ಇವರು ಬೆಳ್ಮಣ್‌ನ ಶ್ರೀ ಲಕ್ಷ್ಮೀ ಜನಾರ್ಧನ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿನಿಯರಾಗಿದ್ದು, ಕರಾಟೆ ತರಬೇತುದಾರ ಸತೀಶ್ ಬೆಳ್ಮಣ್ಣ ಅವರ ಗರಡಿಯಲ್ಲಿ ಪಟ್ಟುಗಳನ್ನು ಕಲಿತು ಈ ಯಶಸ್ಸು ಕಂಡಿದ್ದಾರೆ. ಸಹೋದರಿಯರ ರಾಷ್ಟ್ರಮಟ್ಟದ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.







































error: Content is protected !!
Scroll to Top