ಕಾರ್ಕಳದ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ಗೆ ಆಗ್ರಹ – ಸಿಎಂಗೆ ಶಾಸಕ ಸುನಿಲ್ ಕುಮಾರ್ ಮನವಿ

ಕಾರ್ಕಳ: ಮುಂಬರುವ ಐತಿಹಾಸಿಕ ಶ್ರೀ ಗೊಮ್ಮಟೇಶ್ವರಸ್ವಾಮಿ ಮಹಾಮಸ್ತಕಾಭಿಷೇಕಕ್ಕೆ ಮೂಲಸೌಕರ್ಯ ಕಲ್ಪಿಸಲು ವಿಶೇಷ ಅನುದಾನ ಬಿಡುಗಡೆ ಮಾಡುವುದು ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಹಲವು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಶಾಸಕ ವಿ. ಸುನಿಲ್ ಕುಮಾರ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಶಾಸಕರು, ಕಾರ್ಕಳ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ, ಬಾಕಿ ಉಳಿದಿರುವ ಅನುದಾನಗಳ ಬಿಡುಗಡೆ ಹಾಗೂ ಹೊಸ ಯೋಜನೆಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡುವಂತೆ ಸುದೀರ್ಘ ಚರ್ಚೆ ನಡೆಸಿದರು.
ಮಹಾಮಸ್ತಕಾಭಿಷೇಕಕ್ಕೆ ಮೂಲಸೌಕರ್ಯ:
12 ವರ್ಷಗಳಿಗೊಮ್ಮೆ ಜರುಗುವ ಕಾರ್ಕಳದ ಐತಿಹಾಸಿಕ ಗೊಮ್ಮಟೇಶ್ವರ ಮಹಾಮಸ್ತಕಾಭಿಷೇಕ ಮಹೋತ್ಸವವು 2027ರ ಫೆಬ್ರವರಿ 18ರಿಂದ ಹತ್ತು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ. ದೇಶ-ವಿದೇಶಗಳಿಂದ ಲಕ್ಷಾಂತರ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರು ಆಗಮಿಸುವುದರಿಂದ ರಸ್ತೆ, ಕುಡಿಯುವ ನೀರು, ವಸತಿ ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಸಿದ್ಧತೆಗಾಗಿ ರಾಜ್ಯ ಸರ್ಕಾರ ತಕ್ಷಣವೇ ವಿಶೇಷ ಅನುದಾನ ಒದಗಿಸಬೇಕೆಂದು ಶಾಸಕರು ಕೋರಿದರು.
ಕರಾವಳಿ ಸಂಪುಟ ಸಭೆಯಲ್ಲಿ ಪ್ರಸ್ತಾಪಕ್ಕೆ ಆಗ್ರಹ:
ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ ಆಯೋಜಿಸಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ, ಕರಾವಳಿ ಭಾಗದ ದೀರ್ಘಕಾಲಿಕ ಹಿತದೃಷ್ಟಿಯಿಂದ ಪ್ರಮುಖ ಯೋಜನೆಗಳನ್ನು ಸಂಪುಟ ಸಭೆಯ ಮುಂದಿಟ್ಟು ಅನುಮೋದನೆ ಪಡೆಯುವಂತೆ ಒತ್ತಾಯಿಸಿದರು. ಮುಖ್ಯವಾಗಿ, ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವುದು, ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ಹೆಚ್ಚಿನ ಅನುದಾನ, ಸ್ಥಳೀಯ ಉದ್ಯೋಗ ಸೃಷ್ಟಿ ಹಾಗೂ ನೀರಾವರಿ ಯೋಜನೆಗಳಿಗೆ ಸಂಪುಟ ಸಭೆಯಲ್ಲಿ ಮುದ್ರೆ ಒತ್ತಬೇಕೆಂದು ಮನವಿ ಮಾಡಿದರು.
ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವ ಸಂಪೂರ್ಣ ವಿಶ್ವಾಸವಿದೆ ಎಂದು ಮಾಜಿ ಸಚಿವರೂ ಆಗಿರುವ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಸರ್ಕಾರದ ಮುಂದಿಟ್ಟ ಪ್ರಮುಖ ಬೇಡಿಕೆಗಳು:

  • ಮಹಾಮಸ್ತಕಾಭಿಷೇಕ: 2027ರ ಮಹೋತ್ಸವಕ್ಕೆ ಸಕಲ ಮೂಲಭೂತ ಸೌಕರ್ಯಗಳಿಗಾಗಿ ವಿಶೇಷ ಅನುದಾನ.
  • ಭಾಷೆ & ಸಂಸ್ಕೃತಿ: ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷಾ ಸ್ಥಾನಮಾನ; ಕಂಬಳ ಕ್ರೀಡಾಕೂಟಗಳಿಗೆ ವಿಶೇಷ ಆರ್ಥಿಕ ನೆರವು.
  • ಪ್ರವಾಸೋದ್ಯಮ ವೃದ್ಧಿ: ಕಾರ್ಕಳ ಪರಶುರಾಮ ಥೀಮ್ ಪಾರ್ಕ್‌, ಐತಿಹಾಸಿಕ ರಾಮಸಮುದ್ರ ಕೆರೆ-ಉದ್ಯಾನವನ, ಪ್ರಸಿದ್ಧ ವರಂಗ ಚತುರ್ಮುಖ ಕೆರೆ ಬಸದಿ ಹಾಗೂ ನಾಡ್ಪಾಲು ಗ್ರಾಮದ ಕೂಡ್ಲು ಜಲಪಾತ ಅಭಿವೃದ್ಧಿ.
  • ರಸ್ತೆ & ಸಂಪರ್ಕ: ಹಿರಿಯಡ್ಕ–ಕಾರ್ಕಳ–ಜೋಡುರಸ್ತೆ–ಮಿಯ್ಯಾರು–ಬಜಗೋಳಿ ಮಾರ್ಗವಾಗಿ ಗುರುವಾಯನಕೆರೆ ಸಂಪರ್ಕಿಸುವ ರಸ್ತೆ ಮೇಲ್ದರ್ಜೆಗೆ ಹಾಗೂ ಪುರಸಭಾ/ಗ್ರಾಮೀಣ ರಸ್ತೆಗಳ ನವೀಕರಣಕ್ಕೆ ಅನುದಾನ.
  • ಆರೋಗ್ಯ & ಶಿಕ್ಷಣ: ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರವನ್ನು 100 ಹಾಸಿಗೆಗಳ ಸುಸಜ್ಜಿತ ತಾಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವುದು; ಕಾರ್ಕಳ ನರ್ಸಿಂಗ್ ಕಾಲೇಜಿಗೆ ನೂತನ ಕಟ್ಟಡ ಮಂಜೂರಾತಿ.
  • ಕೈಗಾರಿಕೆ & ಕೃಷಿ: ಯುವಜನರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ‘ಶಿಲ್ಪಕಲಾ ಹಾಗೂ ಫರ್ನಿಚರ್ ಹಬ್’ ಸ್ಥಾಪನೆ, ಕಾರ್ಕಳ ಜವಳಿ ಪಾರ್ಕ್ ನವೀಕರಣ ಮತ್ತು ಹೆಬ್ರಿ ತಾಲೂಕಿನ ಇಕ್ಕೊಡ್ಡು ಬಳಿ ಏತ ನೀರಾವರಿ ಯೋಜನೆ ಜಾರಿ.
































































error: Content is protected !!
Scroll to Top