ಕಾರ್ಕಳದ ಜನರು ಕಾಂಗ್ರೆಸ್ ನಾಟಕಕ್ಕೆ ಮರುಳಾಗಲಾರರು
ಕೆಲಸ ಬಿಟ್ಟು ರಾಜಕೀಯ ಪ್ರಹಸನಕ್ಕೆ ಇಳಿದ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ತಿರುಗೇಟು
ಕಾರ್ಕಳ : ಜನರಿಂದ ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ತಿರಸ್ಕರಿಸಲ್ಪಟ್ಟ ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರು ತಮ್ಮ ಅಸ್ತಿತ್ವಕ್ಕಾಗಿ ಜನಪರ ಕೆಲಸ ಮಾಡುವುದನ್ನು ಬಿಟ್ಟು ರಾಜಕೀಯ ಪ್ರಹಸನದಲ್ಲಿ ತೊಡಗಿದ್ದಾರೆ. ಈಗಾಗಲೇ ಪೋಸ್ಟರ್ ಅಭಿಯಾನ ಮಾಡಲು ಹೋಗಿ ಜನ ಸಾಮಾನ್ಯರಿಂದ ಉಗಿಸಿಕೊಂಡು ಅವಮಾನಕ್ಕೀಡಾಗಿದ್ದಾರೆ. ಈಗ ಮತ್ತೆ ಆಶ್ರಯ ಮನೆ ವಿತರಣೆ ಬಗ್ಗೆ ತಮ್ಮ ರಾಜಕೀಯದ ಬೀದಿ ನಾಟಕ ಆರಂಭಿಸಿರುವುದಾಗಿ ಎಂದು ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ಕಿಡಿಕಾರಿದ್ದಾರೆ.

ಕೇಂದ್ರ ಸರಕಾರದ ಪ್ರಧಾನ ಮಂತ್ರಿಗಳ ಆವಾಸ್ ಯೋಜನೆ (ನಗರ) ಸರ್ವರಿಗೂ ಸೂರು ಅಭಿಯಾನದಡಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಬೆಂಗಳೂರು ಇದರ ಮುಖೇನ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ವಸತಿ ರಹಿತರಿಗೆ ಸೂರು ಕಲ್ಪಿಸುವ ಯೋಜನೆ ಮಂಜೂರಾಗಿದೆ. ಈ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಅನುದಾನ ಒದಗಿಸಿದೆ. ಫಲಾನುಭವಿಗಳಿಂದಲೂ ಹಣ ಪಡೆಯಲಾಗುತ್ತಿದೆ. ಅಂತೆಯೇ ರಾಜ್ಯ ಸರಕಾರ ಪ್ರತೀ ಫಲಾನುಭವಿಯಿಂದ 1 ಲಕ್ಷ ರೂ. ಸಂಗ್ರಹಿಸಲು ಆದೇಶ ನೀಡಿರುತ್ತದೆ. ಈ ಯೋಜನೆಯಡಿಯಲ್ಲಿ ಕಾರ್ಕಳ ಪತ್ತೊಂಜಿಕಟ್ಟೆಯ ಗುಂಡ್ಯ ಪ್ರದೇಶದಲ್ಲಿ ಸುಮಾರು 250 ಮನೆಗಳಿರುವ ವಸತಿ ಸಮುಚ್ಚಯ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಸುಮಾರು 95% ಕಾಮಗಾರಿ ಪೂರ್ಣಗೊಂಡು ಅಂತಿಮ ಹಂತದಲ್ಲಿದೆ ಎಂದರು.
150 ಅರ್ಜಿ ಸಲ್ಲಿಕೆ
ಫಲಾನುಭವಿಯಾಗಲು ಕೆಲವೊಂದು ಮಾನದಂಡಗಳಿದ್ದು, ಮುಖ್ಯವಾಗಿ ಆತ ಯಾವುದೇ ಸ್ಥಿರಾಸ್ತಿ/ ವಸತಿ ಹೊಂದಿರಬಾರದು, ಬಿ.ಪಿ.ಎಲ್ ಕಾರ್ಡುದಾರನಾಗಿರಬೇಕು ಹಾಗೂ ಪುರಸಭಾ ವ್ಯಾಪ್ತಿಯ ನಿವಾಸಿಯಾಗಿರಬೇಕು. ಮೊದಲ ಹಂತದಲ್ಲಿ ಈಗಾಗಲೇ 150 ಅರ್ಜಿ ಪುರಸಭೆಗೆ ಬಂದಿದ್ದು, ಅದರ ಪರಿಶೀಲನೆಗಾಗಿ ಕಂದಾಯ ಇಲಾಖೆಗೆ ನೀಡಲಾಗಿದೆ. ಅವುಗಳಲ್ಲಿ 98 ಅರ್ಜಿ ಮಾನ್ಯತೆ ಪಡೆದಿದೆ, ಎರಡನೇ ಹಂತದಲ್ಲಿ 113 ಅರ್ಜಿಗಳು ಬಂದಿದ್ದು, ಅದನ್ನು ಕೂಡ ಕಂದಾಯ ಇಲಾಖೆಗೆ ಕಳುಹಿಸಿ ಕೊಡಲಾಗಿದೆ. ಕಂದಾಯ ಇಲಾಖೆಯ ಪರಿಶೀಲನೆಯ ಬಳಿಕ ಮುಂದಿನ ಪ್ರಕ್ರಿಯೇ ನಡೆಯಲಿದೆ. ಮಾನ್ಯ ಶಾಸಕ ಸುನೀಲ್ ಕುಮಾರ್ ಅವರು ಈ ಬಗ್ಗೆ ಕಂದಾಯ ಅಧಿಕಾರಿಗಳ ಸಭೆ ಕರೆದು ಶೀಘ್ರ ಫಲಾನುಭವಿಗಳ ಪಟ್ಟಿ ಅಂತಿಮಗೊಳಿಸಿಸುವಂತೆ ಸೂಚಿಸಿರುತ್ತಾರೆ. ಪ್ರಸ್ತುತ ಅಧಿಕಾರಿಗಳಿ ಎಸ್.ಐ.ಆರ್. ಕಾರ್ಯದಲ್ಲಿ ತೊಡಗಿದ್ದು, ಅದು ಮುಗಿದ ಕೂಡಲೇ ಫಲಾನುಭವಿಗಳ ಪಟ್ಟಿ ಅಂತಿಮವಾಗಲಿದೆ ಎಂದಿದ್ದಾರೆ.
ಕಾರ್ಕಳ ಶಾಸಕರು ಮೊದಲ ಹಂತದಲ್ಲಿ ಮಾನ್ಯತೆ ಪಡೆದಿರುವ 98 ಅರ್ಜಿಗಳ ಫಲಾನುಭವಿಗಳಿಗೆ ಮನೆ ವಿತರಿಸುವ ಕುರಿತು ಅಧಿಕಾರಿಗಳೊಂದಿಗೆ ಮುಂದಿನ ಎರಡು ಮೂರು ದಿನಗಳಲ್ಲಿ ಸಭೆ ನಡೆಸಲಿದ್ದಾರೆ. ಇದನ್ನು ಅರಿತ ಕಾಂಗ್ರೆಸಿಗರು ಈಗ ಪ್ರತಿಭಟನೆಯ ನಾಟಕ ಆಡುತ್ತಿದ್ದಾರೆ. ಅಧಿಕಾರಿಗಳೊಂದಿಗೆ ಶಾಸಕರ ಮೀಟಿಂಗ್ ದಿನಾಂಕ ನಿಗದಿಯಾದಾಗ ಕಾಂಗ್ರೆಸ್ ಮತ್ತು ಅವರ ನಾಯಕ ಉದಯ ಶೆಟ್ಟಿಯವರು ನಿದ್ದೆಯಿಂದ ಎದ್ದಂತೆ ವರ್ತಿಸುತ್ತಿರುವುದು ಹೊಸತೇನಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಶಾಸಕರು ತಮ್ಮ ಪ್ರಯತ್ನದಿಂದ ಕಾರ್ಕಳ ವಿಧಾನಸಭಾ ಕ್ಷೇತ್ರದ ಯಾವುದೇ ಕೆಲಸ ಕಾರ್ಯಗಳಿಗೆ ಅನುದಾನ ತರಿಸಿದರೆ ತಕ್ಷಣವೇ ಆ ಪ್ರದೇಶಕ್ಕೆ ಹೋಗಿ ಸ್ಥಳ ಪರಿಶೀಲನೆ ಮಾಡುವ ಮೂಲಕ ರಾಜಕೀಯ ದುರ್ಲಾಭ ಪಡೆಯಲು ಕಾಂಗ್ರೆಸ್ ಪ್ರಯತ್ನ ಮಾಡುತ್ತದೆ ಎನ್ನುವುದು ಜನತೆಗೆ ಗೊತ್ತಿದೆ. ಫಲಾನುಭವಿಗಳಿಗೆ ಸೂರು ವಿತರಿಸುವ ಬಗ್ಗೆ ಮೀಟಿಂಗ್ ದಿನಾಂಕ ನಿಗಧಿಯಾದ ವಿಷಯ ತಿಳಿದು ಮತ್ತೊಮ್ಮೆ ಈ ರೀತಿಯ ಪ್ರಹಸನದಲ್ಲಿ ತೊಡಗಿಸಿರುವುದು ಕಾಂಗ್ರೆಸ್ಸಿಗರ ಭೌತಿಕ ದಿವಾಳಿತನವನ್ನು ತೋರಿಸುತ್ತದೆ ಎಂದಿದ್ದಾರೆ.
ಕಾರ್ಕಳದಲ್ಲಿ 2027 ರಲ್ಲಿ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ನಡೆಯಬೇಕಾದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಶಾಸಕರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆಗೆ ಪ್ರಯತ್ನಿಸಿರುವುದನ್ನು ಗಮನಿಸಿ ಈ ರೀತಿಯ ಪ್ರಚಾರದ ಗಿಮಿಕ್ಕಿಗೆ ಕಾಂಗ್ರೆಸ್ ತೊಡಗಿರುವುದು ನಾಚಿಕೆಗೇಡಿನ ಸಂಗತಿ. ಕಾರ್ಕಳದ ಜನ ಪ್ರಬುದ್ಧರಾಗಿದ್ದು, ಕಾಂಗ್ರೆಸ್ ನಾಟಕಗಳಿಗೆ ಮರುಳಾಗುವವರಲ್ಲ. ಇನ್ನಾದರೂ ಈ ರೀತಿಯ ರಾಜಕೀಯ ಬೀದಿ ನಾಟಕ ಬಿಟ್ಟು ಕಾರ್ಕಳದ ಅಭಿವೃದ್ಧಿಗೆ ಶಾಸಕರೊಂದಿಗೆ ಕೈ ಜೋಡಿಸಿ ಎಂದು ಆದೇಶಿಸಿದ್ದಾರೆ.

































































