ಕಾರ್ಕಳ : ಕಾರ್ಕಳ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾದ ಡಿ. ಆರ್. ರಾಜು ಅವರನ್ನು ಹೈಕಮಾಂಡ್ ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷರಾಗಿ ನೇಮಿಸಿದೆ. ಕಾರ್ಕಳದಿಂದ ನಾಲ್ವರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದು, ಹೆಬ್ರಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಂಜುನಾಥ ಪೂಜಾರಿ, ಡಿ. ಆರ್. ರಾಜು ಮತ್ತು ಉದ್ಯಮಿ ಉದಯ್ ಕುಮಾರ್ ಶೆಟ್ಟಿ ಹೆಸರು ಮುಂಚೂಣಿಯಲ್ಲಿತ್ತು. ಆದರೆ ಅಭ್ಯರ್ಥಿ ಯಾರೆಂದು ಘೋಷಿಸುವ ಮೊದಲೇ ಪಕ್ಷ ಈ ರೀತಿಯಾಗಿ ಟಿಕೆಟ್ ಆಕಾಂಕ್ಷಿ ಒಬ್ಬರಿಗೆ ದಿಢೀರ್ ಹುದ್ದೆ ನೀಡಿರುವುದು ಗೊಂದಲಕ್ಕೆ ಕಾರಣವಾಗಿದೆ. ಇದೀಗ ಮಂಜುನಾಥ ಪೂಜಾರಿ ಅಥವಾ ಉದಯ್ ಕುಮಾರ್ ಶೆಟ್ಟಿ ಅವರಲ್ಲಿ ಒಬ್ಬರನ್ನು ಅಭ್ಯರ್ಥಿ ಎಂದು ಘೋಷಿಸುತ್ತದೆಯೋ ಅಥವ ಮತ್ತೇ ಹೊಸ ಹೆಸರನ್ನು ಸೂಚಿಸುತ್ತದೆಯೋ ಎಂಬ ನಿರೀಕ್ಷೆಯಿದೆ.
ಉದ್ಯಮಿಯಾಗಿರುವ ಡಿ.ಆರ್. ರಾಜು ಅವರು ರಾಜಕೀಯದ ಬಗ್ಗೆ ಅಪಾರ ಅನುಭವವುಳ್ಳವರಾಗಿದ್ದಾರೆ. ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿರುವ ಇವರು ರಶ್ಮಿ ಚಾರಿಟೇಬಲ್ ಟ್ರಸ್ಟ್ ಮೂಲಕ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಹತ್ತಾರು ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬಂದವರು. ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೂ ಕೊಡುಗೆ ನೀಡಿದವರು. ಇವರು ಈ ಹಿಂದೆ ಚಿಕ್ಕಮಗಳೂರು ಕ್ಷೇತ್ರದಿಂದ ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಹಾಗೂ ಮೂಡುಬಿದಿರೆ ಕ್ಷೇತ್ರದಿಂದ ಒಂದು ಬಾರಿ ಎಂಎಲ್‌ಎ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 2023ರ ವಿಧಾನ ಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್‌ನಿಂದ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿರುತ್ತಾರೆ.
























