ಮಂಗಳೂರು : ಪ್ರಜ್ವಲ್ ಫಿಲಂಸ್ ಲಾಂಛನದಲ್ಲಿ ತಯಾರಾದ ಪ್ರಜ್ವಲ್ ಶೆಟ್ಟಿ ನಿರ್ಮಾಣ ಹಾಗೂ ಕೀರ್ತನ್ ಭಂಡಾರಿ ನಿರ್ದೇಶನದ `ಗಜಾನನ ಕ್ರಿಕೆಟರ್ಸ್ (ಜಂತೊಟ್ಟು ಸಿನ್ಸ್ 1983)’ ತುಳು ಚಲನಚಿತ್ರವು ಮೇ 22 ರಂದು ತೆರೆಕಾಣಲಿದೆ.
ಇದು ತುಳು ಭಾಷೆಯಲ್ಲಿನ ದೊಡ್ಡ ಬಜೆಟ್ ಚಿತ್ರವಾಗಿದ್ದು, ಕ್ರಿಕೆಟ್ ಮತ್ತು ಆಟಗಾರರ ಬದುಕಿನ ಹಿನ್ನಲೆ ಆಧಾರಿತ ಕತೆ ಹೊಂದಿದೆ. ಚಿತ್ರದಲ್ಲಿ ಹಾಸ್ಯ, ಪ್ರೇಮಪೂರಿತ ಭಾವನೆಗಳು ಮತ್ತು ಸಮಾಜಮುಖಿ ಸಂದೇಶವಿರುವ ಕತೆ ಒಳಗೊಂಡಿದೆ.
ಕೀರ್ತನ್ ಭಂಡಾರಿ ಅವರು ಕಥೆ, ಚಿತ್ರಕಥೆ ಬರೆದು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಮಂಗಳೂರು ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದೆ. ಈ ಚಿತ್ರದಲ್ಲಿ ನಿರ್ಮಾಪಕರಾದ ಪ್ರಜ್ವಲ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಚಿತ್ರದ ತಾರಾಗಣದಲ್ಲಿ ವಿನೀತ್ ಕುಮಾರ್, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ಪ್ರಕಾಶ್ ತುಮಿನಾಡು, ಉಮೇಶ್ ಮಿಜಾರು, ಸಮತಾ ಅಮೀನ್, ಅನ್ವಿತಾ ಸಾಗರ್, ಸರ್ವೋತ್ತಮ ಶೆಟ್ಟಿ, ವಾಲ್ಟರ್ ನಂದಳಿಕೆ, ರೂಪಾ ವರ್ಕಾಡಿ, ಲಂಚೂ ಲಾಲ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪುಷ್ಪರಾಜ್ ಬೊಳ್ಳಾರು, ಸಚಿನ್ ಮಾಡ, ಜೇಮ್ಸ್ ಮೆಂಡೋನ್ಸಾ, ಕರಣ್ ಪೂಜಾರಿ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.
ವಿನುತ್ ಕೆ. ಸುವರ್ಣ ಅವರ ಛಾಯಾಗ್ರಹಣ, ಸುಜಯ್ ಶಿವರಾಮ್ ಹಾಗೂ ಕೌಶಿಕ್ ಭಂಡಾರಿ ಅವರ ಸಂಕಲನ ಚಿತ್ರಕ್ಕಿದೆ. ಗೀತಾ ಸಾಹಿತ್ಯವನ್ನು ಕೀರ್ತನ್ ಭಂಡಾರಿ, ಸೃಜನ್ ಮಾನವ್, ಶ್ರೀನಿಧಿ ಶೆಟ್ಟಿ ರಚಿಸಿದ್ದಾರೆ.
ವಿದೇಶಗಳಲ್ಲಿ ಪ್ರೀಮಿಯರ್ ಶೋ
ದುಬೈನಲ್ಲಿ ಚಿತ್ರದ ಆಡಿಯೋ ಲಾಂಚ್ ಅಗಿದೆ. ಯುಎಇ, ಸೌದಿ ಅರೇಬಿಯಾ, ಕತಾರ್, ಓಮಾನ್, ಬಹ್ರೇನ್, ಕುವೈತ್ ಹಾಗೂ ಇತರ ದೇಶಗಳಲ್ಲಿ ಚಿತ್ರವು ಪ್ರೀಮಿಯರ್ ಶೋ ಮೂಲಕ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ ಎಂದು ಚಿತ್ರತಂಡ ತಿಳಿಸಿದೆ.

















