ಪಾಟ್ನಾ : ಬಿಹಾರ ರಾಜಕೀಯದಲ್ಲಿ ಹೊಸ ಪರ್ವ ಆರಂಭವಾಗಿದೆ. ಸಾಮ್ರಾಟ್ ಚೌಧರಿ ನೇತೃತ್ವದ ಬಿಜೆಪಿ-ಎನ್‌ಡಿಎ ಸರ್ಕಾರವು ನೂತನ ಸಂಪುಟ ವಿಸ್ತರಿಸಿದ್ದು 31 ಎನ್‌ಡಿಎ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಮಾಜಿ ಸಿಎಂ ನಿತೀಶ್ ಕುಮಾರ್ ಪುತ್ರ ನಿಶಾಂತ್ ಕುಮಾರ್, ಬಿಜೆಪಿ, ಜೆಡಿಯು, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಮತ್ತು ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ನೇತೃತ್ವದ ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ)ದ 31 ನಾಯಕರೊಂದಿಗೆ ಇಂದು ಸಚಿವದಾಗಿ ಪದಗ್ರಹಣ ಮಾಡಿದ್ದಾರೆ. ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ಅವರು ಪ್ರಮಾಣ ವಚನ ಬೋಧಿಸಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ನಿತೀಶ್ ಕುಮಾರ್ ಸಾಕ್ಷಿಯಾದರು.
ನೂತನ ಸಂಪುಟದಲ್ಲಿ ಅನುಭವ ಮತ್ತು ಯುವ ಉತ್ಸಾಹಕ್ಕೆ ಆದ್ಯತೆ ನೀಡಲಾಗಿದೆ. ನಿಶಾಂತ್ ಕುಮಾರ್ ಸಂಪುಟ ಸೇರಿರುವುದು ಬಿಹಾರ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಜಿ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ, ಅನುಭವಿಗಳಾದ ಶ್ರಾವಣ್ ಕುಮಾರ್ ಮತ್ತು ಅಶೋಕ್ ಚೌಧರಿ ಅವರು ಮತ್ತೆ ಸಂಪುಟ ಸೇರಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಐದೂ ಪಕ್ಷಗಳಾದ ಬಿಜೆಪಿ, ಜೆಡಿ(ಯು), ಎಲ್‌ಜೆಪಿ (ರಾಮ್ ವಿಲಾಸ್), ಹ್ಯಾಮ್ ಮತ್ತು ಆರ್‌ಎಲ್‌ಎಂ ನಾಯಕರಿಗೆ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗಿದೆ.

ನಿತೀಶ್ ಕುಮಾರ್ ಅವರು ರಾಜ್ಯಸಭೆಗೆ ಆಯ್ಕೆಯಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಕಳೆದ ತಿಂಗಳು ಬಿಹಾರದಲ್ಲಿ ದೊಡ್ಡ ಬದಲಾವಣೆ ಉಂಟಾಗಿತ್ತು. ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಅವರು ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದೀಗ ಚೌಧರಿ ಅವರ ನೇತೃತ್ವದಲ್ಲಿ ಹೊಸ ಸಂಪುಟ ರಚನೆಯಾಗಿದ್ದು ಆಡಳಿತ ನಡೆಸಲು ಎನ್‌ಡಿಎ ಮುಂದಾಗಿದೆ.

















