ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರದ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಉತ್ತರ ದಾಯಿತ್ಯವನ್ನು ಹೆಚ್ಚಿಸುವ ದೃಷ್ಟಿಯಿಂದ ಸರ್ಕಾರಿ ಪ್ರಾಧಿಕಾರಗಳ ನಿಯಂತ್ರಣದಲ್ಲಿರುವ ಮಾಹಿತಿಯನ್ನು ಪಡೆಯಲು ನಾಗರಿಕರಿಗೆ ಮಾಹಿತಿ ಪಡೆಯುವ ಹಕ್ಕಿನ ಕಾರ್ಯರೂಪದ ವ್ಯವಸ್ತೆಯನ್ನು ರೂಪಿಸುವುದಕ್ಕಾಗಿ, ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆಗೆ ಹಾಗೂ ಭ್ರಷ್ಟಾಚಾರ ನಿಯಂತ್ರಣಕ್ಕೆ ಮತ್ತು ಸರ್ಕಾರಗಳು ಮತ್ತು ಅವುಗಳ ಅಂಗ ಸಂಸ್ಥೆಗಳು ನಾಗರಿಕರಿಗೆ ಜವಾಬ್ದಾರಿಯಾಗಿರುವಂತೆ ಮಾಡಲು ನಾಗರಿಕರಿಗೆ ಸೂಕ್ತ ಮಾಹಿತಿಯನ್ನು ಒದಗಿಸುವುದಕ್ಕಾಗಿ ಮತ್ತು ಪ್ರಜಾಸತ್ತಾತ್ಮಕ ಆದರ್ಶದ ಸಾರ್ವಭೌಮತೆಯನ್ನು ಸಂರಕ್ಷಿಸುವುದರ ಜೊತೆಗೆ ಸಂಘರ್ಷಕ್ಕೊಳಗಾಗುವ ಹಿತಾಸಕ್ತಿಗಳ ನಡುವೆ ಸಾಮರಸ್ಯ ಮೂಡಿಸುವುದಕ್ಕಾಗಿ ಮಾಹಿತಿಯನ್ನು ಪಡೆಯಲಿಚ್ಚಿಸುವ ನಾಗರಿಕರಿಗೆ ಸೂಕ್ತ ಮಾಹಿತಿಯನ್ನು ಒದಗಿಸುವುದಕ್ಕಾಗಿ ಮಾಹಿತಿ ಹಕ್ಕು ಅಧಿನಿಯಮ 2005 ಎಂಬ ಬಹಳ ಉಪಯುಕ್ತವಾದ ಕಾನೂನು 15-06-2005 ರಿಂದ ನಮ್ಮ ದೇಶದಲ್ಲಿ ಜ್ಯಾರಿಯಲ್ಲಿರುತ್ತದೆ.
ಈ ಕಾನೂನಿನ ಪ್ರಕಾರ ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರವು ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ಹೊಂದಿರುತ್ತದೆ. ಸಾರ್ವಜನಿಕ ಕಛೇರಿಯ ಅಥವಾ ಅದಕ್ಕೆ ಸಂಬಂಧಪಟ್ಟ ಯಾವುದೇ ಸಾರ್ವಜನಿಕ ಅಧಿಕಾರಿ ಅಥವಾ ವ್ಯಕ್ತಿಗೆ ಸಂಬಂಧಪಟ್ಟ ಮಾಹಿತಿಯನ್ನು ಪಡೆಯಲು ಇಚ್ಚಿಸುವ ವ್ಯಕ್ತಿಯು ನಿಗದಿತ ನಮೂನೆಯ ಅರ್ಜಿಯನ್ನು ನಿರ್ದಿಷ್ಟ ಶುಲ್ಕದೊಂದಿಗೆ ಸಂಬಂಧಪಟ್ಟ ಸಾರ್ವಜನಿಕ ಪ್ರಾಧಿಕಾರದ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಸಲ್ಲಿಸಿದಲ್ಲಿ ಅರ್ಜಿ ಸಲ್ಲಿಕೆಯ 30 ದಿವಸಗಳ ಒಳಗಾಗಿ ಅಗತ್ಯವುಳ್ಳ ಮಾಹಿತಿಯನ್ನು, ದಾಖಲೆಗಳನ್ನು ಅರ್ಜಿದಾರನಿಗೆ ಒದಗಿಸುವ ಹೊಣೆಗಾರಿಕೆಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿ ಹೊಂದಿರುತ್ತಾನೆ. ಆದರೆ ಅರ್ಜಿದಾರ ಕೇಳಿರುವ ಮಾಹಿತಿಯನ್ನು ಬಹಿರಂಗ ಪಡಿಸುವುದರಿಂದ ದೇಶದ ಸಾರ್ವಭೌಮತ್ವ ಮತ್ತು ಏಕತೆ, ರಾಷ್ಟ್ರದ ಭದ್ರತೆ. ಕಾರ್ಯತಂತ್ರ, ರಾಜ್ಯದ ವೈಜ್ಞಾನಿಕ ಅಥವಾ ಆರ್ಥಿಕ ಹಿತಾಸಕ್ತಿಗಳು, ವಿದೇಶದೊಂದಿಗಿನ ಸಂಬಂಧ ಇವುಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಂದರ್ಭದಲ್ಲಿ ಅಥವಾ ನೀಡುವ ಮಾಹಿತಿಯು ಅಪರಾಧಕ್ಕೆ ಪ್ರೇರಣೆ ನೀಡುವ ಸಂದರ್ಭದಲ್ಲಿ, ಯಾವುದೇ ನ್ಯಾಯಾಲಯ ಅಥವಾ ನ್ಯಾಯಾಧಿಕರಣವು ಕುರಿತಾದ ಮಾಹಿತಿಯನ್ನು ಪ್ರಕಟಿಸದಂತೆ ನಿಷೇದಿಸಿರುವ ಸಂದರ್ಭದಲ್ಲಿ ಮತ್ತು ಮಾಹಿತಿಯನ್ನು ಬಹಿರಂಗ ಪಡಿಸುವುದರಿಂದ ನ್ಯಾಯಾಲಯ ನಿಂದನೆ ಉಂಟಾಗುವ ಸಂದರ್ಭದಲ್ಲಿ, ಮಾಹಿತಿಯನ್ನು ಬಹಿರಂಗ ಪಡಿಸುವುದರಿಂದ ಮೂರನೇ ವ್ಯಕ್ತಿಯ ಸ್ಪರ್ಧಾತ್ಮಕತೆಗೆ ತೊಂದರೆ ಉಂಟಾಗ ಬಹುದಾದ ವಾಣಿಜ್ಯ ರಹಸ್ಯ, ವ್ಯಾಪಾರ ಗೌಪ್ಯತೆಗಳು, ವಿದೇಶಿ ಸರ್ಕಾರದಿಂದ ರಹಸ್ಯವಾಗಿ ಪಡೆದ ಮಾಹಿತಿ, ಮಾಹಿತಿಯನ್ನು ಬಹಿರಂಗ ಪಡಿಸುವುದರಿಂದ ಯಾವುದೇ ವ್ಯಕ್ತಿಯ ಜೀವ ಅಥವಾ ದೈಹಿಕ ಸುರಕ್ಷತೆಗೆ ಅಪಾಯ ಉಂಟಾಗುವ ಸಂದರ್ಭದಲ್ಲಿ, ಮಾಹಿತಿಯನ್ನು ಒದಗಿಸುವುದರಿಂದ ಅಪರಾಧಗಳಿಗೆ ಸಂಬಂಧಪಟ್ಟ ತನಿಖಾ ಕ್ರಮಕ್ಕೆ, ಅಪರಾಧಿಗಳ ದಸ್ತಗಿರಿಗೆ ಅಥವಾ ಪ್ರಾಸಿಕ್ಯೂಷನ್ ಕಾರ್ಯಕ್ಕೆ ಅಡಚಣೆಯನ್ನುಂಟು ಮಾಡುವ ಸಾಧ್ಯತೆ ಇದ್ದಲ್ಲಿ, ಅರ್ಜಿದಾರನು ಕೇಳಿರುವ ಮಾಹಿತಿಯನ್ನು ಕಡ್ಡಾಯವಾಗಿ ನೀಡಲೇ ಬೇಕೆಂಬ ನಿಯಮವಿರುವುದಿಲ್ಲ.
ಈ ಕಾನೂನಿನ ನಿಯಮಾನುಸಾರದ ಪ್ರಕಾರ ಸಾರ್ವಜನಿಕ ಯೋಜನೆಗಳ ಜಾರಿಯಲ್ಲಿ ಭಾಗವಹಿಸಲು, ಇತ್ಯಾದಿಗಳಿಗೆ ಈ ಕಾಯ್ದೆ ಬಹಳ ಉಪಯುಕ್ತವಾಗಿದೆ. ಪ್ರತಿಯೊಬ್ಬ ನಾಗರಿಕ ಕೇಂದ್ರ/ರಾಜ್ಯ ಸರಕಾರದ ವಿವಿಧ ಇಲಾಖೆಗಳಿಂದ, ಕೇಂದ್ರ/ರಾಜ್ಯ ಸರಕಾರದ ಮಂತ್ರಿಗಳ ಕಛೇರಿಯಿಂದ, ರಾಜ್ಯಪಾಲರ ಕಛೇರಿಯಿಂದ, ಕ್ಯಾಬಿನೆಟ್‌ನಿಂದ, ವಿಧಾನಸಭೆ/ವಿಧಾನ ಪರಿಷತ್‌ಗಳಿಂದ, ಮಹಾನಗರ ಪಾಲಿಕೆ/ನಗರಸಭೆ/ಪುರಸಭೆ/ನಗರ ಪಂಚಾಯತ್/ಗ್ರಾಮ ಅಥವಾ ಜಿಲ್ಲಾ ಪಂಚಾಯತ್‌ಗಳಿಂದ/ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ, ಜೀವ ವಿಮಾ ನಿಗಮ/ ಸಾಮಾನ್ಯ ವಿಮಾ ನಿಗಮ, ಸಾರ್ವಜನಿಕ ಸಂಸ್ಥೆಗಳಿಂದ, ಸರಕಾರದಿಂದ ಅನುದಾನ ಪಡೆಯುವ/ಸಹಾಯ ಪಡೆಯುವ ಸಂಸ್ಥೆಗಳಿಂದ, ಸರಕಾರದ ಶೇರು ಬಂಡವಾಳ ಹೊಂದಿರುವ ಸಂಸ್ಥೆಯಿಂದ, ಚುನಾಯಿತ ಸದಸ್ಯರುಗಳಿಂದ ಮಾಹಿತಿ ಪಡೆಯಲು ಹಕ್ಕುಳ್ಳವನಾಗಿರುತ್ತಾನೆ. ಸರಕಾರದ ಸಹಕಾರ ಇಲಾಖೆಯ ಅಧಿಕಾರಿಗಳು ಅವರ ಇಲಾಖೆಯ ಅಧೀನದಲ್ಲಿರುವ, ನಿಯಂತ್ರಣಕ್ಕೆ ಒಳಪಟ್ಟ ಸಹಕಾರ ಸಂಘಗಳಿಗೆ/ಸಹಕಾರ ಬ್ಯಾಂಕ್‌ಗಳಿಗೆ ಸಂಬಂಧಪಟ್ಟ ವಿವರಗಳನ್ನು ನೀಡಬೇಕಾಗುವುದು, ಸಾರ್ವಜನಿಕರು ಯಾವುದೇ ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾದ ಮಾಹಿತಿಗಳನ್ನು/ ದಾಖಲೆಗಳನ್ನು ಪರಿಶೀಲಿಸಿ ಪ್ರಮಾಣೀಕೃತ ಪ್ರತಿಯನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ. ಈ ಬಗ್ಗೆ ಸಾರ್ವಜನಿಕರು/ನಾಗರೀಕರು ನಿಗದಿತ ನಮೂನೆಯ ಅರ್ಜಿಯನ್ನು ನಿರ್ದಿಷ್ಟ ಶುಲ್ಕದೊಂದಿಗೆ ಸಂಬಂಧಪಟ್ಟ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಸಲ್ಲಿಸಿದ 30 ದಿನಗಳೊಳಗೆ ಸಂಬಂಧಪಟ್ಟ ಸಾರ್ವಜನಿಕ ಮಾಹಿತಿ ಅಧಿಕಾರಿ ಅರ್ಜಿಯಲ್ಲಿ ಕೇಳಿರುವ ಮಾಹಿತಿ/ದಾಖಲೆಗಳನ್ನು ಅರ್ಜಿದಾರನಿಗೆ ನೀಡಬೇಕಾಗಿರುತ್ತದೆ. ತಪ್ಪಿದಲ್ಲಿ ಸಂಬಂಧಪಟ್ಟ ಮಾಹಿತಿ ಅಧಿಕಾರಿಯು ದಂಡ ಅಥವಾ ಶಿಕ್ಷೆಗೆ ವೈಯುಕ್ತಿಕವಾಗಿ ಬಾದ್ಯಸ್ತನಾಗುತ್ತಾನೆ.

































