ಕಾರ್ಕಳ: ಸೆ. 7 ರಾಣೆಯಾರ್ ಸಮುದಾಯದ ಸತ್ಯದರ್ಶನ ಮಹಾಸಭೆ ಕಾರ್ಕಳದ ಹೋಟೆಲ್ ಸ್ವಾಗತ್‌ನಲ್ಲಿ ನಡೆಯಿತು. ಮಾಜಿ ಪುರಸಭಾಧ್ಯಕ್ಷೆ ಪ್ರತಿಮಾ ರಾಣೆ, ಸಮುದಾಯದ ಮಾರಿಗುಡಿಗಳ ಮುಖ್ಯಸ್ಥರು ಉದ್ಘಾಟಿಸಿದರು.
ಪ್ರಮುಖರಾದ ಪ್ರಕಾಶ್ ಎಂ.ಡಿ. ರಾಣೆಯಾರ್ ಇತಿಹಾಸದ ಸಿಂಹಾವಲೋಕನ ನಡೆಸಿ, ರಾಣೆಯಾರ್ ಸಮುದಾಯದ ಮೂಲ, ಆರಾಧನಾ ಪದ್ಧತಿ, ಸಂಪ್ರದಾಯ ಹಾಗೂ ಸಾಂಸ್ಕೃತಿಕ ಹಿನ್ನೆಲೆಯ ಕುರಿತು ವಿವರಿಸಿದರು. ಸಮುದಾಯವು ಕೇವಲ ಒಂದು ಜನಜಾತಿಯಲ್ಲ ಎಂಟು ಶತಮಾನಗಳಿಗೂ ಅಧಿಕ ಐತಿಹಾಸಿಕ ಹಿನ್ನೆಲೆ ಹೊಂದಿರುವ ಸಂಸ್ಕೃತಿ ಎಂದು ತಿಳಿಸಿದರು.
ಚಿಕ್ಕಮಗಳೂರು, ಹಾಸನ, ಉಡುಪಿ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಸಮುದಾಯದ ಬಂಧುಗಳು ಭಾಗವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ಸತೀಶ್ ಸುರತ್ಕಲ್ ಅವರು ಸಮುದಾಯದ ಪೂರ್ಣ ಇತಿಹಾಸ ಹಾಗೂ ಹಿನ್ನೆಲೆ ತಿಳಿದುಕೊಳ್ಳಲು ಮುಂದಿನ ಪ್ರಶ್ನಾ ಚಿಂತನೆಯಲ್ಲಿ ಸಮಾಜ ಬಾಂಧವರು ಸಹಕರಿಸುವಂತೆ ಮನವಿ ಮಾಡಿದರು.
ಪ್ರಮುಖರಾದ ಅವಿನಾಶ್ ಬೆಂಗಳೂರು, ಸೂರಜ್ ಶ್ರೀ ಸೋಮನಾಥ್, ಶ್ರೀಧರ ಪಾತ್ರಿ, ಚರಣ್ ಸುರತ್ಕಲ್, ಯೋಗಿನಿ, ಶ್ರೀನಿವಾಸ್, ಸುರೇಶ್, ಶಂಕರ್ ಕಾಂತವಾರ, ಪುನೀತ್ , ನಿತಿನ್ ಭಾಗವಹಿಸಿದ್ದರು. ಅಕ್ಷಯ್ ಕಾಂತಾವರ ಸ್ವಾಗತಿಸಿ, ವಕೀಲ ನಾಗಾರ್ಜುನ ಕಾಪು ಪ್ರಾಸ್ತಾವನೆಗೈದರು. ಸುಮ ಕಾಪು ವಂದಿಸಿ, ಚಂದ್ರಶೇಖರ್ ಬೈಲಂಗಡಿ ನಿರೂಪಿಸಿದರು.

























