ಕಾರ್ಕಳ : ಅತ್ತೂರು ಸಂತ ಲಾರೆನ್ಸ್ ಬಸಿಲಿಕದಲ್ಲಿ ಕನ್ಯಾ ಮರಿಯಮ್ಮನವರ ಜನ್ಮದಿನವನ್ನು ಸೆ. 8ರಂದು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಚರ್ಚ್ ಪ್ರವೇಶದ್ವಾರದ ಬಳಿ ತೆನೆಗಳನ್ನಿಟ್ಟು ಧಾರ್ಮಿಕ ವಿಧಿ ವಿಧಾನ ಪೂರೈಸಲಾಯಿತು. ಅನಂತರ ಕನ್ಯಾ ಮರಿಯಮ್ಮನವರ ಮೂರ್ತಿ ಹಾಗೂ ತೆನೆಗಳೊಂದಿಗೆ ಭಕ್ತರು ಆಕರ್ಷಕ ಮೆರವಣಿಗೆ ಸಾಗಿ ಬಂದರು. ಮಂಗಳೂರಿನ ಸಂತ ಜೋಸೆಫ್ ಸೆಮಿನರಿಯ ಪ್ರಾಧ್ಯಾಪಕ ವಂ. ಡಾ. ಜೆನ್ಸಿಲ್ ಆಳ್ವ ಅವರು ಪ್ರಧಾನ ಧರ್ಮ ಗುರುಗಳಾಗಿ ಬಲಿ ಪೂಜೆ ನೆರವೇರಿಸಿ, ಕನ್ಯಾ ಮರಿಯಮ್ಮನವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಾವೆಲ್ಲರೂ ಪಾವನರಾಗೋಣ ಎಂದು ಸಂದೇಶ ಸಾರಿದರು. ಬಲಿ ಪೂಜೆಯ ನಂತರ ಭಕ್ತಾದಿಗಳಿಗೆ ಪಾಯಸ ಹಾಗೂ ಕಬ್ಬನ್ನು ವಿತರಿಸಲಾಯಿತು. ಬಸಿಲಿಕದ ನಿರ್ದೇಶಕರಾದ ವಂದನೀಯ ಆಲ್ಬನ್ ಡಿʼಸೋಜಾ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು.






























