ಮುಂಬೈ: ಭಾರತ ಪ್ರವಾಸದಲ್ಲಿರುವ ಬೆಲ್ಜಿಯಂ ಪ್ರಧಾನಿ ಬಾರ್ಟ್ ಡಿ ವೆವರ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಸ್ಥಿರ ವ್ಯಾಪಾರ ನೀತಿಗಳು ಮತ್ತು ಏಕಪಕ್ಷೀಯ ಸುಂಕ ನಿರ್ಧಾರಗಳನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ವ್ಯಂಗ್ಯವಾಡಿದ್ದಾರೆ.
ಮುಂಬೈನಲ್ಲಿ ನಡೆದ ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದದ (FTA) ಭಾರತ-ಬೆಲ್ಜಿಯಂ ಉನ್ನತ ಮಟ್ಟದ ಸಂವಾದದಲ್ಲಿ ಮಾತನಾಡಿದ ಡಿ ವೆವರ್ ಇತ್ತೀಚಿನ ದಿನಗಳಲ್ಲಿ ವ್ಯಾಪಾರಕ್ಕೆ ನಿರ್ಬಂಧಗಳನ್ನು ಹೇರಲು ಮಾರುಕಟ್ಟೆಗಳನ್ನು ಮುಚ್ಚಲು ಮತ್ತು ಸುಂಕಗಳನ್ನು ವಿಧಿಸಲು ಹೆಚ್ಚು ಹೆಚ್ಚು ಧ್ವನಿಗಳು ಕೇಳಿಬರುತ್ತಿವೆ. ಕೆಲವರು ಇದನ್ನು ಸಂಪೂರ್ಣವಾಗಿ ಮನಸೋ ಇಚ್ಛೆ ಮಾಡುತ್ತಿದ್ದಾರೆ. ಅವರು ಸೋಮವಾರ ಒಂದು ನಿರ್ಧಾರ ತೆಗೆದುಕೊಳ್ಳುತ್ತಾರೆ ಬುಧವಾರ ಅದನ್ನು ಹಿಂಪಡೆಯುತ್ತಾರೆ ಮತ್ತು ಶನಿವಾರ ಮತ್ತೆ ಜಾರಿಗೆ ತರುತ್ತಾರೆ ಎಂದು ಹೇಳಿದರು.
ಈ ಮಾತಿಗೆ ಸಭಿಕರಿಂದ ಚಪ್ಪಾಳೆಗಳ ಸುರಿಮಳೆಯಾದಾಗ, ವೆವರ್ ಅವರು ನಿಮ್ಮ ಚಪ್ಪಾಳೆಯೇ ಹೇಳುತ್ತಿದೆ ನಾನು ಯಾರ ಬಗ್ಗೆ ಮಾತನಾಡುತ್ತಿದ್ದೇನೆ ಎಂಬುದು ನಿಮಗೆ ತಿಳಿದಿದೆ ಎಂದು ಚಟಾಕಿ ಹಾರಿಸಿದರು.
ಭಾರತ ಮತ್ತು ಯುರೋಪಿಯನ್ ಯೂನಿಯನ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು ಏಕಪಕ್ಷೀಯ ಹಾಗೂ ಅನಿಶ್ಚಿತ ಸುಂಕಗಳ ವಿರುದ್ಧ ರಚನಾತ್ಮಕ ರಕ್ಷಣಾ ಕವಚವಾಗಿ ಕೆಲಸ ಮಾಡಲಿದೆ ಎಂದು ಡಿ ವೆವರ್ ಅಭಿಪ್ರಾಯಪಟ್ಟರು. ಅಲ್ಲದೆ ಈ ಒಪ್ಪಂದವು ಅಡೆತಡೆಗಳು ಮತ್ತು ಒತ್ತಡಗಳ ವಿರುದ್ಧ ಎರಡೂ ಆರ್ಥಿಕತೆಗಳನ್ನು ಸದೃಢಗೊಳಿಸಿದೆ ಎಂದು ಅವರು ಹೇಳಿದರು.
ಬೆಲ್ಜಿಯಂನಂತಹ ಮುಕ್ತ, ಮಧ್ಯಮ ಗಾತ್ರದ ವ್ಯಾಪಾರ ಆರ್ಥಿಕತೆಗಳು ಮತ್ತು ಭಾರತದಂತಹ ವೇಗವಾಗಿ ಬೆಳೆಯುತ್ತಿರುವ ಶಕ್ತಿಶಾಲಿ ದೇಶಗಳು ಆರ್ಥಿಕ ಪ್ರತ್ಯೇಕತೆ ಅಥವಾ ಅಸ್ತ್ರವಾಗಿ ಬಳಸಲಾಗುವ ವ್ಯಾಪಾರ ನಿರ್ಬಂಧಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ ಡಿ ವೆವರ್ ಮೋದಿ ಒಬ್ಬ ವಿವೇಕಿ ನಾಯಕ ಮತ್ತು ವಿಶ್ವದ ಅತ್ಯಂತ ಸ್ಪೂರ್ತಿದಾಯಕ ನಾಯಕರಲ್ಲಿ ಒಬ್ಬರು ಎಂದು ಬಣ್ಣಿಸಿದರು.
ನಾವು ಗೊಂದಲಮಯ ಜಗತ್ತಿನಲ್ಲಿ ಬದುಕುತ್ತಿದ್ದೇವೆ, ನಿಮ್ಮ ಮಾತು ನಿಜ. ಹಲವು ವಿಶ್ವ ನಾಯಕರ ಮಾತುಗಳನ್ನು ಕೇಳಿದಾಗ ನಿಮಗೆ ಭಯ, ಅಶಾಂತಿ ಅಥವಾ ಬೆದರಿಕೆಯ ಭಾವನೆ ಉಂಟಾಗುತ್ತದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದಾಗ, ಅವರು ಹೇಳುವುದನ್ನು ನಾವು ಮಾಡಬೇಕು ಎಂದು ನಿಮಗನಿಸುತ್ತದೆ. ಅವರು ಅತ್ಯಂತ ವಿವೇಕಿ ನಾಯಕ. ದೆಹಲಿಯಲ್ಲಿ ಇರುವುದು ಗೌರವದ ಸಂಗತಿಯಾಗಿತ್ತು, ಆದರೆ ಮುಂಬೈನಲ್ಲಿ ಇರುವುದು ನನಗೆ ಮತ್ತಷ್ಟು ಗೌರವ ಮತ್ತು ಅಪಾರ ಸಂತೋಷ ತಂದಿದೆ ಎಂದು ಡಿ ವೆವರ್ ಹೇಳಿದರು.




























