ಯಾವುದೇ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಸುವ ಮುಂಚೆ ಕಡ್ಡಾಯವಾಗಿ ತಾವು ಪಡೆದ ಮಾಹಿತಿ(ಪ್ರಥಮ ವರ್ತಮಾನ ವರದಿ)ಯನ್ನು ತಮ್ಮ ಠಾಣೆಯ ಎಫ್.ಐ.ಆರ್ ರಿಜಿಸ್ಟ್ರೀಯಲ್ಲಿ ನೊಂದಾಯಿಸಿಕೊಂಡು ತದನಂತರ ಅದರ ಪ್ರತಿಯನ್ನು ಸಂಬಂಧಪಟ್ಟ ಸರಹದ್ದಿನ ಪೊಲೀಸ್ ಅಧಿಕಾರಿಯವರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರಿಗೆ ಲಿಖಿತವಾಗಿ ರವಾನಿಸುವುದು ಕಡ್ಡಾಯ ನಿಯಮವಾಗಿರುತ್ತದೆ. ಇಲ್ಲವಾದಲ್ಲಿ ಅಂತಹ ವಿಚಾರಣೆಯು ಅನಧಿಕೃತ ಹಾಗೂ ಕಾನೂನಿನ ನಿಯಮಾನುಸಾರಕ್ಕೆ ವಿರುದ್ಧವಾಗಿರುತ್ತದೆ. ಭಾರತೀಯ ನಾಗರಿಕ ಸುರಕ್ಷ ಸಂಹಿತೆ ಸೆಕ್ಷನ್ 35ರ ಪ್ರಕಾರ ವಿಚಾರಣೆಯನ್ನು ನಡೆಸುವ ಪೊಲೀಸ್ ಅಧಿಕಾರಿ ಕೆಲವು ಸಂದರ್ಭಗಳಲ್ಲಿ ಆರೋಪಿತ ವ್ಯಕ್ತಿಯನ್ನು ವಾರಂಟ್ ರಹಿತವಾಗಿ ಬಂಧಿಸಬಹುದಾಗಿದೆ. ಅದೇ ಕಾನೂನಿನ ಕಲಂ 50 ಮತ್ತು 51 ರ ಪ್ರಕಾರ ಕ್ರಿಮಿನಲ್ ಪ್ರಕರಣವನ್ನು ತನಿಖೆ ಮಾಡುವ ಪೊಲೀಸ್ ಅಧಿಕಾರಿಯು ಕ್ರಿಮಿನಲ್ ಆರೋಪವನ್ನು ಎದುರಿಸುವ ವ್ಯಕ್ತಿಯನ್ನು ಬಂಧಿಸುವ ಮುಂಚಿತವಾಗಿ ಆತನಿಗೆ ಬಂಧನದ ಕಾರಣವನ್ನು ಕಡ್ಡಾಯವಾಗಿ ತಿಳಿಸಬೇಕಾಗಿರುತ್ತದೆ. ಮಾತ್ರವಲ್ಲದೇ ಈ ಬಗ್ಗೆ ಸೂಕ್ತ ಮಾಹಿತಿಯನ್ನು ಸಹ ಬಂಧಿಸಲ್ಪಡುವ ವ್ಯಕ್ತಿಯ ಕುಟುಂಬಸ್ಥರಿಗೆ ಅಥವಾ ಸ್ನೇಹಿತರಿಗೆ ತಿಳಿಸಬೇಕಾಗಿರುತ್ತದೆ.
ತನ್ನನ್ನು ಪೊಲೀಸರು ಬಂಧಿಸುವ ಸಂದರ್ಭದಲ್ಲಿ ಬಂಧಿತ ವ್ಯಕ್ತಿಯು ತನಗೆ ಅಗತ್ಯವುಳ್ಳ ವಕೀಲರನ್ನು ಸಂಪರ್ಕಿಸುವ ಮತ್ತು ಅವರೊಂದಿಗೆ ಸಮಾಲೋಚಿಸುವ ಹಕ್ಕನ್ನು ಹೊಂದಿರುತ್ತಾನೆ. ಪೊಲೀಸರು ಯಾವುದೇ ವ್ಯಕ್ತಿಯನ್ನು ಬಂಧಿಸಿ ಅನಾವಶ್ಯಕವಾಗಿ ಆತನನ್ನು ಠಾಣೆಯಲ್ಲಿ ಇರಿಸಿಕೊಳ್ಳುವ ಮತ್ತು ಆತನಿಗೆ ಯಾವುದೇ ರೀತಿಯ ದೈಹಿಕ ಹಿಂಸೆ ಅಥವಾ ಕಿರುಕುಳವನ್ನು ನೀಡುವಂತಿಲ್ಲ. ಆರೋಪಿತ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು ಆತನನ್ನು 24 ಗಂಟೆಗಳ ಒಳಗಾಗಿ ಸಂಬಂಧಪಟ್ಟ ನ್ಯಾಯಾಧಿಶರ ಮುಂದೆ ಕಡ್ಡಾಯವಾಗಿ ಹಾಜರು ಪಡಿಸಬೇಕಾಗುತ್ತದೆ. ಒಂದು ವೇಳೆ ಆರೋಪಿತ ವ್ಯಕ್ತಿಯ ಮೇಲಿನ ಆರೋಪಗಳು ಜಾಮೀನು ನೀಡಬಹುದಾದ (ಬೈಲೇಬಲ್) ಸ್ವರೂಪವಾಗಿದ್ದರೆ ಮತ್ತು ಆತನನ್ನು ಠಾಣೆಯಲ್ಲಿಯೇ ಜಾಮೀನಿನ ಮೇಲೆ ಬಿಡುಗಡೆಗೊಳಿಸುವ ಅವಕಾಶ ಇದ್ದರೆ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸದೇ ಪೊಲೀಸ್ ಠಾಣೆಯಲ್ಲಿಯೇ ಆತನಿಂದ ಮುಚ್ಚಳಿಕೆಯನ್ನು ಪಡೆದು ತಾತ್ಕಾಲಿಕವಾಗಿ ವಿಚಾರಣೆ ಮುಗಿಯುವ ತನಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಬಹುದಾಗಿದೆ. ಆದರೆ, ಕೆಲವು ಸಂದರ್ಭಗಳಲ್ಲಿ ಅಂದರೆ ಆರೋಪಿಯ ಮೇಲಿನ ಆರೋಪವು ತೀವ್ರ ಸ್ವರೂಪದ ಕೋಗ್ನಿಜೇಬಲ್ ಅಪರಾಧವಾಗಿರುವ ಸಂದರ್ಭದಲ್ಲಿ ಮತ್ತು ಆತನನ್ನು ಬಿಡುಗಡೆಗೊಳಿಸಿದರೆ ಪರಾರಿಯಾಗುವ ಸಾಧ್ಯತೆ ಇದ್ದಾಗ, ಸಾಕ್ಷ್ಯವನ್ನು ಕೂಡಲೇ ಪಡೆಯಲು ಆತನ ಬಂಧನ ಅಗತ್ಯವಿದ್ದಾಗ, ಆತನಿಂದ ಸಾಮಾಜಿಕ ಶಾಂತಿಭಂಗ ಉಂಟಾಗುವ ಸಾಧ್ಯತೆ ಇದ್ದಾಗ, ಮಹಿಳೆಯರು, ಮಕ್ಕಳು, ವಯೋವೃದ್ದರು ಮತ್ತು ಅಸ್ವಸ್ಥರನ್ನು ರಕ್ಷಿಸುವುದಕ್ಕೊಸ್ಕರ ಆತನ ಬಂಧನವು ಅತೀ ಅಗತ್ಯವೆನಿಸಿದರೆ ಮತ್ತು ಆತನನ್ನು ಬಂಧಿಸುವ ಬಗ್ಗೆ ನ್ಯಾಯಾಲಯದ ಆದೇಶ ಇದ್ದಲ್ಲಿ ಇತ್ಯಾದಿ ಸಂದರ್ಭಗಳಲ್ಲಿ ಪೊಲೀಸರು ವಾರಂಟ್ ರಹಿತವಾಗಿ ಆರೋಪಿತ ವ್ಯಕ್ತಿಯನ್ನು ಬಂಧಿಸಬಹುದಾಗಿದೆ. ಪ್ರಕರಣದ ವಿಚಾರಣೆಯ ಸಮಯ ಪೊಲೀಸರು ಪ್ರಕರಣದ ತನಿಖೆಗಾಗಿ ಅಥವಾ ಮಾಹಿತಿ ಸಂಗ್ರಹಕ್ಕಾಗಿ ಆರೋಪಿತ ವ್ಯಕ್ತಿಯ ಮನೆಗೆ ಬರಬಹುದು. ಆದರೆ, ಆರೋಪಿತ ವ್ಯಕ್ತಿ ಮಹಿಳೆಯಾಗಿದ್ದರೆ ರಾತ್ರಿಯ ಸಮಯದಲ್ಲಿ (ಸಾಮಾನ್ಯವಾಗಿ ರಾತ್ರಿ 7 ರಿಂದ ಮುಂಜಾನೆ 6 ರ ನಡುವೆ) ವಿಶೇಷ ಕಾರಣವಿಲ್ಲದೆ ಆಕೆಯ ಮನೆಗೆ ಪೊಲೀಸರು ಪ್ರವೇಶಿಸುವಂತಿಲ್ಲ. ಮನೆಯೊಳಗೆ ಪ್ರವೇಶಿಸುವ ಮೊದಲು ಪೊಲೀಸರು ತಮ್ಮ ಗುರುತಿನ ಕಾರ್ಡ್‌ನೊಂದಿಗೆ ಪರಿಚಯವನ್ನು ತಿಳಿಸಿ ಮನೆಯವರ ಅನುಮತಿ ಪಡೆಯಬೇಕಾಗುತ್ತದೆ. ಪೊಲೀಸರು ಮನೆಯನ್ನು ಶೋಧಿಸಲು ಮತ್ತು ತಪಾಸಣೆ ನಡೆಸಲು ವಾರಂಟನ್ನು ಹೊಂದಿರಬೇಕಾಗುತ್ತದೆ. ಒಟ್ಟಾರೆಯಾಗಿ ಪ್ರತಿಯೊಬ್ಬ ಭಾರತೀಯ ಪ್ರಜೆಯು ನಮ್ಮ ಸಂವಿಧಾನದ 21ನೇ ವಿಧಿಯ ಪ್ರಕಾರ ತನ್ನ ಜೀವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಹೊಂದಿರುವುದರಿಂದ ಪೊಲೀಸರು ಕಾನೂನಿನ ನಿಯಮಾನುಸಾರವೇ ಕಾರ್ಯನಿರ್ವಹಿಸಬೇಕಾಗುತ್ತದೆ. ಮಾತ್ರವಲ್ಲದೇ ಪ್ರತಿಯೊಬ್ಬ ಪ್ರಜೆಯು ಕಾನೂನನ್ನು ಗೌರವಿಸಿ ಕ್ರಿಮಿನಲ್ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡುವುದು ಆತನ ಕರ್ತವ್ಯವಾಗಿರುತ್ತದೆ.




























