ಕಾನಂಗಿ ಸ್ವರ್ಣ ನದಿಗೆ ಈಜಲು ಹೋದ ಯುವಕರಿಬ್ಬರು ಮುಳುಗಿ ಸಾವು

ಕಾರ್ಕಳ : ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲಾದ ಘಟನೆ ಸೆ. 29ರಂದು ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಕಾನಂಗಿ ಸಮೀಪ ಸ್ವರ್ಣ ನದಿಯಲ್ಲಿ ಸಂಭವಿಸಿದೆ. ಹಿರ್ಗಾನ ಗ್ರಾಮದ ರತ್ನಾಕರ ಅವರ ಪುತ್ರ ಹರ್ಷನ್‌ ಆಚಾರ್ಯ (22) ಹಾಗೂ ಇದೇ ಗ್ರಾಮದ ವಿಶ್ವನಾಥ ಅವರ ಪುತ್ರ ಭರತ್‌ ಪೂಜಾರಿ (29) ನೀರುಪಾಲಾದ ಯುವಕರು. ಹರ್ಷನ್‌ ಮಂಗಳೂರಿನಲ್ಲಿ ಎಟಿಎಂ ಪಿನ್‌ ಜನರೇಟರ್‌ ಉದ್ಯೋಗ ಮಾಡಿಕೊಂಡಿದ್ದರೆ, ಭರತ್‌ ಕನ್‌ಸ್ಟ್ರಕ್ಷನ್‌ ಕೆಲಸ ಮಾಡಿಕೊಂಡಿದ್ದರು.
ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಾಲ್ವರು ಸ್ನೇಹಿತರು ಈಜಾಡಲು ಸ್ವರ್ಣ ನದಿಗೆ ಹೋಗಿದ್ದು ಈ ವೇಳೆ ಭರತ್‌ ನೀರಿನ ಸುಳಿಯಲ್ಲಿ ಸಿಲುಕಿದರು. ಭರತ್‌ ನೀರಿನ ಸುಳಿಯಿಂದ ಹೊರಬರಲು ಒದ್ದಾಡುತ್ತಿರುವುದನ್ನು ಗಮನಿಸಿದ ಹರ್ಷನ್‌ ಆತನ ರಕ್ಷಣೆಗೆ ಧಾವಿಸಿದ್ದು, ಈ ವೇಳೆ ಹರ್ಷನ್‌ ಕೂಡ ನೀರುಪಾಲಾದರು. ವಿಷಯ ತಿಳಿದ ಹಿರ್ಗಾನ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಸಂತೋಷ್‌ ಶೆಟ್ಟಿ ಅವರು ಕಾರ್ಕಳ ಪೊಲೀಸ್‌ ಠಾಣೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಕಾರ್ಕಳ ನಗರ ಠಾಣೆ ಪೊಲೀಸರು ನೀರುಪಾಲಾದವರ ಪತ್ತೆಗಾಗಿ ಶೋಧ ಕಾರ್ಯ ನಡೆಸಿದರು. ಸಂಜೆ 6 ಗಂಟೆಗೆ ಇಬ್ಬರ ಮೃತದೇಹವೂ ಪತ್ತೆಯಾಯಿತು.
ಅಗ್ನಿಶಾಮಕ ಇಲಾಖೆಯ ಠಾಣಾಧಿಕಾರಿ ಚಂದ್ರಶೇಖರ್‌, ರೂಪೇಶ್‌, ಸುರೇಶ್‌, ದಿನೇಶ್‌, ನಿತ್ಯಾನಂದ, ಶಿವಾನಂದ, ಸ್ಥಳೀಯರಾದ ರಂಜಿತ್‌, ಕೇತನ್‌ ಶೋಧ ಕಾರ್ಯಾಚರಣೆ ಭಾಗಿಯಾಗಿದ್ದರು. ಎಎಸ್‌ಪಿ ಇಷಿತಾ ಗುಪ್ತ, ವೃತ್ತ ನಿರೀಕ್ಷಕ ರಾಘವೇಂದ್ರ, ನಗರ ಠಾಣೆ ಎಸ್‌ಐ ಶಿವಕುಮಾರ್‌ ಘಟನಾ ಸ್ಥಳಕ್ಕೆ ಆಗಮಿಸಿದರು.



































error: Content is protected !!
Scroll to Top