ಬೆಂಗಳೂರು: ಕಾರ್ಕಳ ತಾಲೂಕಿನ ಉಮಿಕಲ್ ಬೆಟ್ಟದ ಮೇಲಿನ ಪರಶುರಾಮನ ಪ್ರತಿಮೆ ಮರುಸ್ಥಾಪನೆ ವಿಷಯವನ್ನು ಹೈಕೋರ್ಟ್ ರಾಜ್ಯ ಸರಕಾರಕ್ಕೆ ವರ್ಗಾಯಿಸಿದೆ.
ಈ ಸಂಬಂಧ ಉಡುಪಿ ತಾಲೂಕಿನ ವರಂಗ ಗ್ರಾಮದ ಉದಯ ಶೆಟ್ಟಿ ಮುನಿಯಾಲು ಸಲ್ಲಿಸಿರುವ ಅರ್ಜಿಯನ್ನು ನ್ಯಾ| ಅನುಶಿವರಾಮ್ ಹಾಗೂ ನ್ಯಾ| ಟಿ.ಪಿ.ವಿವೇಕಾನಂದ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿದೆ.
ಅರ್ಜಿದಾರರ ಪರ ವಕೀಲ ವಿ.ಕೆ. ಶ್ರೀಕಾಂತ್ ವಾದ ಮಂಡನೆ ಮಾಡಿದರು.

ಪ್ರತಿಮೆಯ `ಮರುಸ್ಥಾಪನೆಗೆ ಕೋರಿ ಅರ್ಜಿದಾರರು ಸರಕಾರಕ್ಕೆ (ಪ್ರವಾಸೋದ್ಯಮ ಇಲಾಖೆ) ಮನವಿ ಸಲ್ಲಿಸಿದ್ದಾರೆ ಎಂದು ಅವರ ವಕೀಲರು ತಿಳಿಸಿದ್ದಾರೆ. ವಿಷಯವು ಸಂಪೂರ್ಣವಾಗಿ ವಾಸ್ತವಾಂಶಗಳಿಗೆ ಸಂಬಂಧಿಸಿರುವುದರಿಂದ ಅರ್ಜಿದಾರರು 2025ರ ಜುಲೈ 24ರಂದು ಸಲ್ಲಿಸಿರುವ ಮನವಿ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವುದು ಸರಕಾರ (ಪ್ರವಾಸೋದ್ಯಮ ಇಲಾಖೆ)ದ ಕರ್ತವ್ಯವಾಗಿದೆ. ಮನವಿಯನ್ನು ಪರಿಗಣಿಸುವಾಗ ಉಡುಪಿ ನಿರ್ಮಿತಿ ಕೇಂದ್ರಕ್ಕೆ ನೋಟಿಸ್ ಕೊಟ್ಟು ಅವರ ವಾದವನ್ನೂ ಆಲಿಸಬೇಕು ಎಂದು ನಿರ್ದೇಶನ ನೀಡಿ ಕೋರ್ಟ್ ಅರ್ಜಿಯನ್ನು ಇತ್ಯರ್ಥಪಡಿಸಿತು.
33 ಅಡಿ ಎತ್ತರದ ಪರಶುರಾಮ ಪ್ರತಿಮೆಯನ್ನು 2023ರ ಜ. 27ರಂದು ಉದ್ಘಾಟಿಸಲಾಗಿತ್ತು. ಕಂಚಿನ ಬದಲಿಗೆ ಹಿತ್ತಾಳೆ ಪ್ರತಿಮೆ ಅನಾವರಣ ಮಾಡಿ ಅಕ್ರಮ ಎಸಗಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಸುರಕ್ಷತೆಯ ದೃಷ್ಟಿಯಿಂದ ಪ್ರತಿಮೆಯನ್ನು ತೆರವು ಮಾಡಲಾಗಿತ್ತು.
















