ಶ್ರೀ ಗುರುಭ್ಯೋ ನಮಃ

ಗುರು ಬ್ರಹ್ಮ ಗುರು ವಿಷ್ಣು
ಗುರು ದೇವೋ ಮಹೇಶ್ವರಃ|
ಗುರು ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರುವೇ ನಮಃ||

“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ, ಗುರುದೇವ ಪರಿಪೂರ್ಣ ಶರಣಾದೆನು ರಕ್ಷಿಸು ನೀ ಎನ್ನ” ಎಂಬ ಹತ್ತಾರು ಮಾತುಗಳು ಗುರುವಿನ ಮಹತ್ವವನ್ನು ಸಾರಿ ಹೇಳುತ್ತವೆ. ಸ್ಪಷ್ಟ ಗುರಿಯಿದ್ದು ದಾರಿ ತೋರಲು ಗುರು ಇದ್ದರೆ ಜಗತ್ತಿನಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ರಾಮಾಯಣ, ಮಹಾಭಾರತದಂತಹ ಪುರಾಣಗಳಲ್ಲಿ ಬರುವ ದ್ರೋಣ, ಅಶ್ವತ್ಥಾಮ, ವಿಶ್ವಾಮಿತ್ರ, ವಸಿಷ್ಠ ಮುಂತಾದ ಮಹಾನ್ ಗುರುಗಳು ಸಾಕ್ಷಿ ಆಗುತ್ತಾರೆ. ಈ ಕಲಿಯುಗದಲ್ಲಿ ಅಂತಹ ಅಮೂಲ್ಯ ಶಿಕ್ಷಣ ರಂಗದಲ್ಲಿ ಮಹತ್ವದ ಪಾತ್ರವಹಿಸಿದ ನನ್ನ ಗುರು ಪರಂಪರೆಯನ್ನು ನೆನಪಿನಂಗಳಕ್ಕೆ ಆಹ್ವಾನಿಸಿದರೆ ನಾನು ಯಾರ ಬಗ್ಗೆ ಬರೆಯಲಿ ಯಾರನ್ನು ಬಿಡಲಿ ಎಂಬ ಸಂದಿಗ್ಧಕ್ಕೆ ಒಳಗಾಗುತ್ತೇನೆ. ಮನೆ ಮೊದಲ ಪಾಠ ಶಾಲೆ, ಜನನಿ ತಾನೇ ಮೊದಲ ಗುರು ಎಂಬಂತೆ ಹೆತ್ತ ತಾಯಿಯಿಂದ ಐದು ವರ್ಷಗಳವರೆಗೆ ಕಲಿತ ಜ್ಞಾನ ಮೂರರಲ್ಲಿ ಕಲಿತದ್ದು ನೂರರವರೆಗೆ ಎಂಬಂತೆ ಜೀವನಕ್ಕೆ ದಾರಿದೀಪವಾಗುತ್ತಿದೆ.
ತಂದೆಯಿಂದ ಕಲಿತ ಸಾಮಾಜಿಕ ಪ್ರಜ್ಞೆ, ಧೈರ್ಯ, ಪ್ರಾಮಾಣಿಕತೆ, ಸತ್ಯ ಸಂದತೆ ಬದುಕಿನ ದಾರಿದೀಪಗಳಾಗಿ ಮಾರ್ಗದರ್ಶನ ಮಾಡುತ್ತಿವೆ. ನಂತರ ಕಳಸದ ಪ್ರಾಥಮಿಕ ಶಾಲೆಯಲ್ಲಿ ನನಗೆ ಅ ಆ ಇ ಈ ಕಲಿಸಿದ ಶಾಮಣ್ಣ ಮಾಸ್ಟರ್, ಗುಂಡ ಭಟ್ರು, ಸಂಜೀವ ಮಾಸ್ಟರ್ ಅವರಿಂದ ಆರಂಭಿಸಿ ಮೊನ್ನೆ ಮೊನ್ನೆ ಯಕ್ಷಗಾನ ತಾಳಮದ್ದಲೆ ಕಲಿಸಿದ ಗುರು ಮಹಾವೀರ ಪಾಂಡಿಯವರೆಗೆ ಪ್ರತಿಯೊಬ್ಬರು ನನ್ನ ಮೇಲೆ ಒಂದಲ್ಲ ಒಂದು ರೀತಿಯ ಪ್ರಭಾವ ಬೀರಿದ್ದಾರೆ ಎಂಬುದು ಅಕ್ಷರಶಃ ಸತ್ಯ.

ನಾನು 7ನೇ ತರಗತಿಯಲ್ಲಿದ್ದಾಗ ನಮ್ಮ ಮುಖ್ಯ ಶಿಕ್ಷಕಿ ಜಾನಕಮ್ಮ ನನ್ನನ್ನು ಅಯಸ್ಕಾಂತದಂತೆ ಸೆಳೆದಿದ್ದರು. ಅವರ ಶಿಸ್ತು, ಸಮಯಪ್ರಜ್ಞೆ, ಪಾಠ ಮಾಡುವ ಆಕರ್ಷಕ ಭಂಗಿ ನನಗೆ ತುಂಬಾ ಖುಷಿ ಕೊಡುತ್ತಿತ್ತು. ಅವರ ಆ ಶ್ವೇತವರ್ಣದ ಎತ್ತರದ ನಿಲುವು ಪಾಠ ಮಾಡುವಾಗ ಕೈ ಬಳೆಗಳು ಸದ್ದಾಗದಂತೆ ಮೇಲೆ ಒತ್ತಿ ನಿಲ್ಲಿಸಿ ಪಾಠ ವಿವರಿಸುತ್ತಾ ಕರಿಹಲಗೆ ಮೇಲೆ ಬರಿತಾ ಇದ್ದಾಗ ನಾನು ಅವರ ಕೈಯನ್ನು ನಗು ಮುಖವನ್ನು ಗಮನಿಸುತ್ತಿದ್ದೆ. ಅವರಂತೆ ನಾನು ಕೂಡ ಟೀಚರ್ ಆಗಬೇಕೆಂಬ ಆಸೆ ಆಗಲೇ ಮನದಲ್ಲಿ ಮೊಳಕೆಯೊಡೆದಿತ್ತು ಆ ಆಸೆ ದಿನದಿಂದ ದಿನಕ್ಕೆ ನನ್ನ ಮನದೊಳಗೆ ಚಿಗುರೊಡೆಯುತ್ತಿತ್ತು.
ನಾನು ಮೈಸೂರಿನಲ್ಲಿ ಬಿ.ಎಡ್ ಮಾಡುತ್ತಿದ್ದಾಗ 1973ರಲ್ಲಿ ಸಿಕ್ಕಿದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಕೆಲಸ ಬಿಟ್ಟು ಪ್ರೌಢಶಾಲಾ ಶಿಕ್ಷಕಿಯಾದೆ. ಆ ವಿಷಯವನ್ನು ತಿಳಿಸಬೇಕೆಂದು ಸಂಭ್ರಮದಿಂದ ಕಳಸಕ್ಕೆ ಹೋದಾಗ ನನ್ನ ಆದರ್ಶ ಶಿಕ್ಷಕಿ ಜಾನಕಮ್ಮ ನಿವೃತ್ತರಾಗಿ ಅವರ ತವರೂರಿಗೆ ಹೋಗಿಯಾಗಿತ್ತು. ಆದರೆ, ಅವರ ವ್ಯಕ್ತಿತ್ವ ನನ್ನ ಮನದಲ್ಲಿ ಅಚ್ಚುತ್ತಿದೆ. ಶಾಲಾ ಜೀವನದ ಮೊದಲ ಆದರ್ಶ ಶಿಕ್ಷಕಿ ಅವರು. ನಾನು 6ನೇ ತರಗತಿಯಲ್ಲಿದ್ದಾಗ ಹಿಂದಿ ಟೀಚರ್ ಮೀನಾಕ್ಷಮ್ಮ ಅಲ್ಲದೇ ನಮಗೆ ಹೊಸದಾಗಿ ಬಂದ ಪುಟ್ಟಪ್ಪ ಮಾಸ್ಟರ್ ನಾಟಕ ಅಭಿನಯ ಹೇಳಿಕೊಟ್ಟಿದ್ದರಿಂದ ನಾನು ಉತ್ತಮ ಅಭಿನಯಕ್ಕಾಗಿ ನೂರಾರು ಬಹುಮಾನ ಪಡೆಯುವಂತಾಗಿತ್ತು.

ಮುಂದೆ ಪ್ರೌಢಶಾಲಾ ಜೀವನದಲ್ಲಿ ಮುಖ್ಯ ಶಿಕ್ಷಕರಾಗಿದ್ದ ಶ್ರೀಪತಿ ರಾವ್, ಡ್ರಿಲ್ ಮಾಸ್ಟರ್ ಹನುಮಂತ ರಾವ್, ನರಸಿಂಹಮೂರ್ತಿ, ಅನಂತರಾಮ, ಶೇಷಗಿರಿ ರಾವ್ ಅಲ್ಲದೆ ನನ್ನನ್ನು ಉಕ್ಕಿನ ಹುಡುಗಿ ಎಂದು ಕರೆಯುತ್ತಿದ್ದ ಸೂರ್ಯನಾರಾಯಣ ಶಾಸ್ತ್ರಿ, ವಿ. ಕೆ. ಹಕಾರಿ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ನನ್ನ ಟೀಚರ್ ಗಿರಿಯ ಬಯಕೆಗೆ ಪ್ರೋತ್ಸಾಹದ ನೀರೆರೆದ ಪ್ರಾತ:ಸ್ಮರಣೀಯರು.
1968ರಲ್ಲಿ ಶೃಂಗೇರಿಯ ಕಾಲೇಜಿಗೆ ಸೇರಿದಾಗ ಪ್ರಿನ್ಸಿಪಾಲ್ ಶ್ರೀರಾಮಕೃಷ್ಣರಾಯರ ಧೀರ, ಗಂಭೀರ ಶಾಂತ ವ್ಯಕ್ತಿತ್ವದಿಂದ ಪ್ರಭಾವಿತಳಾಗಿದ್ದೆನಾದರೂ ಉಪನ್ಯಾಸಕ ರಾಮೋಜಿ ರಾವ್ ಅವರ ಶಾಂತ ಸ್ವಭಾವ ಮೆಚ್ಚಿಕೊಂಡಿದ್ದೇನೆ. ಕನ್ನಡದ ಕಟ್ಟಾಳು ಗುಂಡಣ್ಣ ಪುಟ್ಟಯ್ಯರ ಅಭಿಮಾನಿಯಾಗಿ ಕನ್ನಡದಲ್ಲೇ ಸಹಿ ಮಾಡುವ ಅಭ್ಯಾಸ ಆರಂಭವಾದದ್ದು ಈ ಐದು ದಶಕದಲ್ಲೂ ಮುಂದುವರಿದಿದೆ. ಎಲ್ಲಕ್ಕಿಂತ ಮಿಗಿಲಾಗಿ ಸುಬ್ರಹ್ಮಣ್ಯ ಸರ್ ಮಾಡುತ್ತಿದ್ದ ಪಾಠದ ವೈಖರಿ ನನಗೆ ಆದರ್ಶವಾಯಿತು. ಪಾಠ ಮಾಡುತ್ತ ಇಡೀ ತರಗತಿಯ ಮಕ್ಕಳನ್ನು ಹೇಗೆ ಸಂದರ್ಭೋಚಿತ ಹಾಸ್ಯದೊಂದಿಗೆ ಆಕರ್ಷಿಸುತ್ತಿದ್ದರೆಂದು ಇಂದಿಗೂ ವಿಸ್ಮಯವಾಗುತ್ತದೆ. ಮನಸ್ಸು ಅವರಿಗೆ ನಮಸ್ಕರಿಸುತ್ತದೆ. ಅವರ ಬೋಧನಾ ಪ್ರಭಾವ ನನ್ನ ಬೋಧನಾ ಕ್ರಮಕ್ಕೆ ಭದ್ರ ಬುನಾದಿ ಎಂದರೆ ಖಂಡಿತ ಉತ್ಪ್ರೇಕ್ಷೆಯಲ್ಲ. ತರಗತಿಯ ಆರಂಭದಿಂದ ಮುಕ್ತಾಯದವರೆಗೂ ಶಿಸ್ತಿಗೆ ಭಂಗವಾಗದಂತೆ ಆದರೆ ಅತ್ಯಂತ ಲವಲವಿಕೆಯಿಂದ ಇರುವಂತೆ ಪಾಠ ಮಾಡುವ ವಿಧಾನವನ್ನು ಅವರಿಂದಲೇ ಕಲಿತುಕೊಂಡೆ. ತಾನು ಜೋಕ್ ಹೇಳಿದಾಗ ಇಡೀ ತರಗತಿ ಮಾಡಿನ ಹಂಚು ಹಾರಿಹೋಗುವಂತೆ ನಗುತ್ತಿದ್ದರೂ ತಾನು ನಕ್ಕೂ ನಗದಂತಹ ಮಂದಹಾಸ ಬೀರುತ್ತಿದ್ದ ಅವರ ಆ ಪ್ರತಿಭೆಗೆ ನಾನು ಸದಾ ತಲೆಬಾಗುವೆ. ಈ ಎಲ್ಲಾ ಸದ್ಗುರು ಪರಂಪರೆಯಲ್ಲಿ ಮಿಂಚಿ ನಮ್ಮ ಚಿತ್ತಾಪಹಾರ ಮಾಡಿ ಅಕಾಲದಲ್ಲಿ ಮರೆಯಾದ ಅನ್ನಪೂರ್ಣ ಮೇಡಂ ನನ್ನ ಜೀವನದಲ್ಲಿ ಎಂದೂ ಅಳಿಸದ ಹೆಸರು ಬರೆದು ಹೋದರೆಂದು ನೋವಿನಿಂದ ಹೇಳುತ್ತಿದ್ದೇನೆ. ನಾನು ಆರಂಭದಲ್ಲಿ ಹೇಳಿದ ಶ್ಲೋಕಗಳು ಅವರಿಗೆ ಅನ್ವಯಿಸುತ್ತವೆ. ಹಳ್ಳಿ ಶಾಲೆಯಿಂದ ಕಾಲೇಜಿಗೆ ಸೇರಿದ ಸಂಕೋಚ ಸ್ವಭಾವದ ನನ್ನ ಕನ್ನಡಬಾರದ ತಮಿಳುನಾಡಿನ ಅನ್ನಪೂರ್ಣ ಮಿಸ್ ಸಂಬಂಧ ಅವರ್ಣನೀಯ. ಅನೂಹ್ಯ ಮತ್ತು ಅನಿರ್ವಚನೀಯ.

ಒಂದೇ ವರ್ಷದಲ್ಲಿ ಅವರು ನಮಗೆ ಎಷ್ಟು ಆತ್ಮೀಯರಾದರೆಂದರೆ ಒಂದು ದಿನ ಅವರನ್ನು ಭೇಟಿಯಾಗಿ ಮಾತನಾಡದಿದ್ದರೆ ಏನೋ ಕಳಕೊಂಡ ಭಾವನೆ ಆವರಿಸುತ್ತಿತ್ತು. ಅಂತಹ ಉನ್ನತ ವ್ಯಕ್ತಿ ಟ್ರೈನ್ ಅಪಘಾತದಲ್ಲಿ ನಿಧನರಾದ ಸುದ್ದಿ ಕೇಳಿ ಆಘಾತವಾಯಿತು. ಅವರ ಪ್ರೋತ್ಸಾಹ, ಮಾರ್ಗದರ್ಶನದಿಂದ ಪಿಯುಸಿಯಲ್ಲಿ ಶೇಕಡ 88 ಅಂಕ ಪಡೆದಿದ್ದರೂ ಇನ್ನು ನನ್ನ ಜೀವನವೇ ವ್ಯರ್ಥ ಎಂಬಷ್ಟು ಬೇಸರ. ಜಿಗುಪ್ಸೆ ಮೂಡಿತ್ತು. ಅವರ ಅಗಲುವಿಕೆಯ ನೋವು ಕೆಲವು ತಿಂಗಳವರೆಗೆ ನನ್ನನ್ನು ಕಾಡಿ ಕಂಗೆಡಿಸಿತ್ತು. ಮತ್ತೆ ಕಾಲೇಜು ಆರಂಭವಾದಾಗ ಕಾಲೇಜಿಗೆ ಹೋಗುವ ಮನಸೇ ಬರಲಿಲ್ಲ. ಆದರೆ, ಅಮ್ಮ ಅಪ್ಪನ ಸಲಹೆ ನನ್ನನ್ನು ಕಾಲೇಜಿಗೆ ಸೇರಿವಂತೆ ಮಾಡಿತು. ಆದರೆ ಕುಳಿತಲ್ಲಿ ನಿಂತಲ್ಲಿ ಅವರ ಮಾತು, ನಗು, ಮುಗ್ಧ ಮುಖ, ಕರುಣೆ, ತುಂಬಿದ ನೋಟ ಎಲ್ಲವೂ ಕಣ್ಣ ಮುಂದೆ ಬಂದು ಕಣ್ಣು ಒದ್ದೆಯಾಗುತ್ತಿತ್ತು. ಮುಂದೆ ಪದವಿ ತರಗತಿಯಲ್ಲಿದ್ದಾಗ ಅವರ ಬಗ್ಗೆ ಬರೆದ “ಮಿಸ್ ಮತ್ತೆ ಬರಲಿಲ್ಲ” ಎಂಬ ಕಥೆಗೆ ರಾಜ್ಯಮಟ್ಟದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಥಮ ಬಹುಮಾನ ದೊರೆಯಿತು. ಅಂದು ವಿಶ್ವವಿದ್ಯಾನಿಲಯದವರು ನೀಡಿದ ಬಹುಮಾನದ ಹಣ ಖರ್ಚಾಗಿರಬಹುದು. ಆದರೆ, ಉಪಕುಲಪತಿಗಳು ನೀಡಿದ ಗಂಧದ ಮರದ ಹ್ಯಾಪಿ ಮ್ಯಾನ್ ವಿಗ್ರಹ ನನ್ನ ಕವಾಟಿನಲ್ಲಿ ಇಂದಿಗೂ ಎರಡು ಕೈಗಳನ್ನು ಮೇಲೆತ್ತಿ ಇಷ್ಟಗಲ ಬಾಯಿ ತೆರೆದು ನಗುತ್ತ ನಿಂತಿರುವುದನ್ನು ಕಂಡಾಗಲೆಲ್ಲ.. ನೀನು ರಾಜ್ಯ, ರಾಷ್ಟ್ರಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿಗಳನ್ನು ಬಾಚಿಕೊಳ್ಳಲು ನಾನೇ ಕಾರಣ ಎಂದು ಹೇಳುತ್ತಾ ಆಶೀರ್ವದಿಸುತ್ತಿರುವ ಗುರು ಶಕ್ತಿಯಂತೆ ಭಾಸವಾಗುತ್ತದೆ. ಶ್ರೀ ಗುರುಭ್ಯೋ ನಮಃ.























































error: Content is protected !!
Scroll to Top