ಗುರು–ಶಿಷ್ಯರ ಸಂಬಂಧ : ಜ್ಞಾನದಿಂದ ಸಮಾಜ ನಿರ್ಮಾಣದವರೆಗೆ

ಮಾನವನ ಬದುಕಿನಲ್ಲಿ ಕೆಲವು ಸಂಬಂಧ ರಕ್ತದಿಂದ ಹುಟ್ಟುತ್ತವೆ; ಆದರೆ, ಕೆಲವು ಸಂಬಂಧಗಳು ಜ್ಞಾನ, ನಂಬಿಕೆ, ಪ್ರೀತಿ, ಗೌರವ ಮತ್ತು ಸಂಸ್ಕಾರಗಳಿಂದ ರೂಪುಗೊಳ್ಳುತ್ತವೆ. ಅಂತಹ ಪವಿತ್ರ ಹಾಗೂ ಶ್ರೇಷ್ಠಗಳಲ್ಲಿ ಗುರು–ಶಿಷ್ಯರ ಸಂಬಂಧವೂ ಹೌದು.
ತಾಯಿ ನಮಗೆ ಬದುಕನ್ನು ನೀಡಿದರೆ ಗುರು ಆ ಬದುಕಿಗೆ ದಿಕ್ಕನ್ನು ನೀಡುತ್ತಾರೆ. ತಂದೆ ನಮ್ಮ ಬೆರಳನ್ನು ಹಿಡಿದು ನಡೆಯಲು ಕಲಿಸಿದರೆ, ಗುರು ಜೀವನದ ಕಠಿಣ ದಾರಿಯಲ್ಲಿ ಸ್ವತಂತ್ರವಾಗಿ ನಡೆಯುವ ಧೈರ್ಯ, ಆತ್ಮವಿಶ್ವಾಸ ಮತ್ತು ವಿವೇಚನೆಯನ್ನು ಕಲಿಸುತ್ತಾರೆ. ಆದ್ದರಿಂದಲೇ ಭಾರತೀಯ ಪರಂಪರೆಯಲ್ಲಿ ಗುರುಗಳಿಗೆ ಅತ್ಯುನ್ನತ ಸ್ಥಾನವಿದೆ. ಭಾರತದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಭಾರತದ ಶ್ರೇಷ್ಠ ತತ್ವಜ್ಞಾನಿ, ಶಿಕ್ಷಣತಜ್ಞ ಹಾಗೂ ಮಾಜಿ ರಾಷ್ಟ್ರಪತಿ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನದ ಸ್ಮರಣಾರ್ಥ ಈ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ.
ನಮ್ಮ ಬದುಕಿನ ಪ್ರತಿಯೊಂದು ಯಶಸ್ಸಿನ ಹಿಂದೆ ಯಾವುದೋ ಒಬ್ಬ ಶಿಕ್ಷಕರ ಮಾರ್ಗದರ್ಶನ, ಪ್ರೇರಣೆ, ಆಶೀರ್ವಾದ ಅಥವಾ ಪ್ರೋತ್ಸಾಹ ಇದ್ದೇ ಇರುತ್ತದೆ. ಶಿಕ್ಷಕರು ತಮ್ಮ ಜ್ಞಾನ, ಸಮಯ ಮತ್ತು ಅನುಭವವನ್ನು ವಿದ್ಯಾರ್ಥಿಗಳಿಗಾಗಿ ಮೀಸಲಿಟ್ಟು ಅವರ ಬದುಕನ್ನು ರೂಪಿಸುತ್ತಾರೆ. ತಮ್ಮ ಶಿಷ್ಯರು ಯಶಸ್ಸಿನ ಶಿಖರಕ್ಕೇರಿದಾಗ ಸಂತೋಷಪಡುವ ಅವರು ಪ್ರತಿಯಾಗಿ ತಮ್ಮ ಶಿಷ್ಯರಿಂದ ಏನನ್ನೂ ನಿರೀಕ್ಷಿಸುವುದಿಲ್ಲ. ತಾವು ಬೆಳಗುತ್ತಾ, ಇತರರ ಬದುಕನ್ನು ಬೆಳಗಿಸುವ ದೀಪಗಳೇ ಶಿಕ್ಷಕರು.

ಕಪ್ಪು ಹಲಗೆಯ ಮೇಲೆ ಬಿಳಿ ಅಕ್ಷರಗಳನ್ನು ಬರೆಯುವ ಶಿಕ್ಷಕರ ಕೈಗಳು, ವಿದ್ಯಾರ್ಥಿಗಳ ಕನಸುಗಳಿಗೆ ಬಣ್ಣ ತುಂಬುವ ಕುಂಚಗಳಾಗುತ್ತವೆ. ಪಾಠದ ಪುಟಗಳನ್ನು ತಿರುವುವ ಅವರ ಬೆರಳುಗಳು, ವಿದ್ಯಾರ್ಥಿಗಳ ಭವಿಷ್ಯದ ಪುಟಗಳನ್ನು ಬರೆಯುತ್ತವೆ. ತರಗತಿಯ ನಾಲ್ಕು ಗೋಡೆಗಳ ನಡುವೆ ನಡೆಯುವ ಅವರ ಬೋಧನೆ, ವಿದ್ಯಾರ್ಥಿಗಳ ಭವಿಷ್ಯದ ಅನೇಕ ಬಾಗಿಲುಗಳನ್ನು ತೆರೆಯುತ್ತದೆ. ಒಬ್ಬ ವಿದ್ಯಾರ್ಥಿ ಮುಂದೆ ವಿಜ್ಞಾನಿಯಾಗಬಹುದು, ವೈದ್ಯನಾಗಬಹುದು, ಇಂಜಿನಿಯರ್, ಕಲಾವಿದ, ಆಡಳಿತಗಾರ, ಉದ್ಯಮಿ ಅಥವಾ ಸಮಾಜಸೇವಕನಾಗಬಹುದು. ಆದರೆ, ಆ ಯಶಸ್ಸಿನ ಪಯಣದ ಆರಂಭಿಕ ಹಂತಗಳಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ವಿದ್ಯಾರ್ಥಿಯಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅದನ್ನು ಬೆಳೆಸಿ, ತಪ್ಪುಗಳನ್ನು ತಿದ್ದಿ, ಆತ್ಮವಿಶ್ವಾಸ ತುಂಬಿ, ಗುರಿಯತ್ತ ಸಾಗಲು ಪ್ರೇರೇಪಿಸುವವರು ಶಿಕ್ಷಕರು. ಆದ್ದರಿಂದ ಸಮಾಜದ ಭವಿಷ್ಯವನ್ನು ರೂಪಿಸುವ ನಿಜವಾದ ಶಿಲ್ಪಿಗಳು ಶಿಕ್ಷಕರು ಎಂದರೆ ಅತಿಶಯೋಕ್ತಿಯಲ್ಲ.

ತಂತ್ರಜ್ಞಾನಕ್ಕಿಂತ ಮಿಗಿಲಾದ ಶಿಕ್ಷಕರ ಪಾತ್ರ
ಇಂದಿನದು ತಂತ್ರಜ್ಞಾನ ಯುಗ. ಮೊಬೈಲ್, ಇಂಟರ್ನೆಟ್ ಮತ್ತು ಕೃತಕ ಬುದ್ಧಿಮತ್ತೆಯಂತಹ ಆಧುನಿಕ ತಂತ್ರಜ್ಞಾನಗಳ ಮೂಲಕ ಕ್ಷಣಾರ್ಧದಲ್ಲಿ ಅಪಾರ ಮಾಹಿತಿಯನ್ನು ಪಡೆಯಬಹುದಾಗಿದೆ. ಆದರೆ ಮಾಹಿತಿ ಮತ್ತು ಜ್ಞಾನ ಒಂದೇ ಅಲ್ಲ. ಯಾವುದು ಸರಿ? ಯಾವುದು ತಪ್ಪು? ಪಡೆದ ಜ್ಞಾನವನ್ನು ಹೇಗೆ ಬಳಸಬೇಕು? ಬದುಕಿನಲ್ಲಿ ಮಾನವೀಯತೆ, ಪ್ರಾಮಾಣಿಕತೆ, ಶಿಸ್ತು ಮತ್ತು ಮೌಲ್ಯಗಳನ್ನು ಹೇಗೆ ಉಳಿಸಿಕೊಳ್ಳಬೇಕು? ಎಂಬುದನ್ನು ಕಲಿಸುವಲ್ಲಿ ಶಿಕ್ಷಕರ ಪಾತ್ರ ಅನನ್ಯ. ತಂತ್ರಜ್ಞಾನವು ನಮಗೆ ಉತ್ತರಗಳನ್ನು ನೀಡಬಹುದು; ಆದರೆ ಆ ಉತ್ತರಗಳನ್ನು ಜೀವನದಲ್ಲಿ ಹೇಗೆ ಬಳಸಬೇಕು ಎಂಬ ವಿವೇಚನೆಯನ್ನು ಬೆಳೆಸುವುದು ಶಿಕ್ಷಕರ ಕಾರ್ಯ. ಯಂತ್ರಗಳು ಮಾಹಿತಿಯನ್ನು ನೀಡಬಹುದು; ಆದರೆ ಮಾನವೀಯತೆಯನ್ನು ರೂಪಿಸುವುದು ಶಿಕ್ಷಕರಿಂದ ಮಾತ್ರ ಸಾಧ್ಯ. ವಿದ್ಯೆ ಎಂಬುದು ಯಾರೂ ಕದಿಯಲಾಗದ ಸಂಪತ್ತು. ಅದನ್ನು ಇತರರಿಗೆ ಹಂಚಿದಷ್ಟೂ ಅದು ಕಡಿಮೆಯಾಗದೆ ಹೆಚ್ಚಾಗುತ್ತದೆ. ಅಂತಹ ಅಮೂಲ್ಯ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡುವ ಗುರು ನಿಜಕ್ಕೂ ಸರ್ವಶ್ರೇಷ್ಠ. ಶಿಕ್ಷಕರು ಕೇವಲ ಪಠ್ಯಪುಸ್ತಕದ ವಿಷಯಗಳನ್ನು ಬೋಧಿಸುವವರಲ್ಲ. ಅವರು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುವ ಮಾರ್ಗದರ್ಶಕರು; ಬದುಕಿನ ಮೌಲ್ಯಗಳನ್ನು ಕಲಿಸುವ ಗುರುಗಳು; ಭವಿಷ್ಯದ ಕನಸುಗಳಿಗೆ ರೆಕ್ಕೆಗಳನ್ನು ನೀಡುವ ಪ್ರೇರಣಾಶಕ್ತಿಗಳು.
ಕಲ್ಲನ್ನು ಕಡಿದು ಸುಂದರ ಶಿಲೆಯನ್ನಾಗಿ ಮಾಡುವ ಶಿಲ್ಪಿಯ ಕೈಚಳಕದಂತೆ, ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅವರ ತಪ್ಪುಗಳನ್ನು ತಿದ್ದಿ, ಅವರ ವ್ಯಕ್ತಿತ್ವವನ್ನು ರೂಪಿಸಿ, ಸಮಾಜ ಗುರುತಿಸುವಂತಹ ವ್ಯಕ್ತಿಗಳನ್ನಾಗಿ ಬೆಳೆಸುವ ಚಾಣಾಕ್ಷತನ ಶಿಕ್ಷಕರಲ್ಲಿರುತ್ತದೆ. ಒಬ್ಬ ಉತ್ತಮ ಶಿಕ್ಷಕ ಪಾಠವನ್ನು ಮಾತ್ರ ಕಲಿಸುವುದಿಲ್ಲ; ಬದುಕನ್ನು ಹೇಗೆ ಎದುರಿಸಬೇಕು ಎಂಬುದನ್ನೂ ಕಲಿಸುತ್ತಾನೆ.

ಗುರು ಬೆಳಗಿದರೆ ಶಿಷ್ಯ ಬೆಳಗುತ್ತಾ
ನೆಶಿಷ್ಯ ಬೆಳಗಿದರೆ ಸಮಾಜ ಬೆಳಗುತ್ತದೆ
ಸಮಾಜ ಬೆಳಗಿದರೆ ನಾಡು ಬೆಳಗುತ್ತದೆ

ಶಿಕ್ಷಕರ ದಿನಾಚರಣೆ: ಕೃತಜ್ಞತೆಯ ದಿನ
ಶಿಕ್ಷಕರ ದಿನಾಚರಣೆ ಎಂದರೆ ಕೇವಲ ಶುಭಾಶಯಗಳನ್ನು ತಿಳಿಸುವ ದಿನವಲ್ಲ. ನಮ್ಮ ಜೀವನದಲ್ಲಿ ಬೆಳಕನ್ನು ಹಚ್ಚಿದ ಗುರುಗಳನ್ನು ನೆನಪಿಸಿಕೊಳ್ಳುವ ದಿನ. ಅವರ ಪರಿಶ್ರಮ, ತ್ಯಾಗ, ಸಹನೆ, ಪ್ರೀತಿ ಮತ್ತು ನಿಸ್ವಾರ್ಥ ಸೇವೆಗೆ ಕೃತಜ್ಞತೆ ಸಲ್ಲಿಸುವ ದಿನ. ವಿದ್ಯಾರ್ಥಿಯ ಸಾಧನೆಯಲ್ಲಿ ಶಿಕ್ಷಕರ ಸಂತೋಷ ಅಡಗಿರುತ್ತದೆ. ವಿದ್ಯಾರ್ಥಿಯ ಯಶಸ್ಸೇ ಶಿಕ್ಷಕರಿಗೆ ದೊರೆಯುವ ಅತ್ಯಂತ ದೊಡ್ಡ ಬಹುಮಾನ.
ಯಾವುದೇ ಸಮಾಜದ ಪ್ರಗತಿಯು ಅದರ ಶಿಕ್ಷಣ ವ್ಯವಸ್ಥೆಯ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ. ಆ ಶಿಕ್ಷಣ ವ್ಯವಸ್ಥೆಯ ಆತ್ಮವೇ ಶಿಕ್ಷಕ. ಉತ್ತಮ ಶಿಕ್ಷಕರು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುತ್ತಾರೆ; ಉತ್ತಮ ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗುತ್ತಾರೆ; ಉತ್ತಮ ನಾಗರಿಕರು ಉತ್ತಮ ಸಮಾಜವನ್ನು ನಿರ್ಮಿಸುತ್ತಾರೆ; ಉತ್ತಮ ಸಮಾಜವೇ ಬಲಿಷ್ಠ ರಾಷ್ಟ್ರದ ನಿರ್ಮಾಣಕ್ಕೆ ಕಾರಣವಾಗುತ್ತದೆ. ಹೀಗಾಗಿ ಶಿಕ್ಷಕರ ಸೇವೆ ಕೇವಲ ಒಂದು ವೃತ್ತಿಯಲ್ಲ. ಅದು ಒಂದು ಮಹತ್ತರ ಜವಾಬ್ದಾರಿ, ಒಂದು ಸಾಮಾಜಿಕ ಕರ್ತವ್ಯ ಮತ್ತು ಸಮಾಜ ನಿರ್ಮಾಣದ ಪವಿತ್ರ ಕಾರ್ಯ.
ತಮ್ಮ ಜ್ಞಾನದಿಂದ ವಿದ್ಯಾರ್ಥಿಗಳ ಬದುಕನ್ನು ಬೆಳಗಿಸುತ್ತಿರುವ, ತಮ್ಮ ಮಾರ್ಗದರ್ಶನದಿಂದ ಭವಿಷ್ಯದ ಪೀಳಿಗೆಯನ್ನು ರೂಪಿಸುತ್ತಿರುವ ಹಾಗೂ ತಮ್ಮ ಸೇವೆಯಿಂದ ಸಮಾಜದ ಪ್ರಗತಿಗೆ ಕೊಡುಗೆ ನೀಡುತ್ತಿರುವ ಎಲ್ಲ ಶಿಕ್ಷಕರಿಗೆ ಈ ಸಂದರ್ಭದಲ್ಲಿ ಹೃತ್ಪೂರ್ವಕ ನಮನಗಳು. ಎಲ್ಲಾ ಶಿಕ್ಷಕ ಬಂಧುಗಳಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.























































error: Content is protected !!
Scroll to Top