ಯುಡಿಯೂರಪ್ಪ ಬ್ಲಾಕ್ ಮೇಲ್ ಮಾಡಿದ ಎಡಬಿಡಂಗಿ ಗಿರಾಕಿ ನೀನು – ರೆಡ್ಡಿಗೆ ತಂಗಡಗಿ ತಿರುಗೇಟು
ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ಬಳ್ಳಾರಿ ಚಲೋ ಪಾದಯಾತ್ರೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಗಂಗಾವತಿ ಶಾಸಕ ಜನಾರ್ದನ ರೆಡ್ಡಿಯವರ ಹೇಳಿಕೆಗೆ, ಹಾಲಿ ಸಚಿವ, ಕನಕಗಿರಿ ಶಾಸಕ ಶಿವರಾಜ್ ತಂಗಡಗಿ ಟ್ವೀಟ್ ಮೂಲಕ ದಾಳಿ ಮಾಡಿದ್ದಾರೆ.
“ಲೇ ತಮ್ಮಾ ತಂಗಡಗಿ, ನಿನ್ನನ್ನು ಸಚಿವನನ್ನಾಗಿ ಮಾಡಲು ಹೆಲಿಕಾಪ್ಟರ್’ನಲ್ಲಿ ಕರೆದುಕೊಂಡು ಹೋಗಿದ್ದು, ಚೀಲದಲ್ಲಿ ಹಣ ತುಂಬಿಕೊಂಡು ಹೋಗಿದ್ದು ಮರೆತೆಯಾ ? ನೀವು ಮೊದಲು ಸಚಿವನಾಗಿದ್ದು ಹೇಗೆ ಎನ್ನುವುದು ನೆನಪಿದೆಯಾ” ಎಂದು ಜನಾರ್ದನ ರೆಡ್ಡಿ, ಶಿವರಾಜ್ ತಂಗಡಗಿ ಅವರನ್ನು ಪ್ರಶ್ನಿಸಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಟ್ವಿಟ್ಟರ್‌ನಲ್ಲಿ ಸವಾಲೆಸೆದಿರುವ ತಂಗಡಗಿ ಲೇ ಜನಾರ್ದನರೆಡ್ಡಿ. ಚಂಚಲಗುಡ ಕೈದಿ ನಂ. 697, ಜೈಲಿನಲ್ಲಿ ಮುದ್ದೆ ಮುರಿದ ಗಣಿ ಲೂಟಿಕೋರ. ಹೀಗೆಲ್ಲಾ ನಾನೂ ಕೂಡ ‘ಲೇ’ ಎನ್ನಬಲ್ಲೆ. ಘನತೆ, ನಡತೆಯಲ್ಲಿ ಅಲ್ಲದಿದ್ದರೂ ವಯಸ್ಸಿನಲ್ಲಿ ನೀವು ಹಿರಿಯ. ಜೊತೆಗೆ ನನ್ನ ಹಿರಿಯರು ಸಂಸ್ಕಾರ ಕಲಿಸಿರುವುದರಿಂದ ‘ಲೇ’ ಎನ್ನುವ ಮಟ್ಟಕ್ಕೆ ನಾ ಇಳಿಯಲಾರೆ. ನಾನು ಮೊದಲ ಬಾರಿಗೆ ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದಾಗ ತಮ್ಮುಡು ಎಂದು ಗೋಗರೆದು ಬೆಂಬಲ ಕೇಳಿದವನು ನೀನು. ಈಗ ಸುಳ್ಳುಗಳ ಸರಮಾಲೆಯನ್ನೇ ಹೆಣೆದು ಬೊಗಳೆ ಬಿಡುತ್ತಿದ್ದೀಯಾ?
ಬೊಗಳೆ ವೀರ, ‘ನಿನಗೆ ತಾಕತ್ತು ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಾ. ನೀನು ರಾಜೀನಾಮೆ ಕೊಟ್ಟ 24 ಗಂಟೆಯಲ್ಲಿ ನಾನೂ ರಾಜೀನಾಮೆ ಕೊಡುವೆ. ಗಂಗಾವತಿಯಲ್ಲಿ ನನ್ನ ವಿರುದ್ಧ ಉಪ ಚುನಾವಣೆ ಎದುರಿಸಿ ನಿನ್ನ ಬಲಾಬಲ ತೋರಿಸು. ಪ್ರಚಾರ ಶೋಕಿಗೆ ವ್ಯರ್ಥ ಪ್ರಲಾಪ ಬೇಡ’. ನಿನಗೆ ನೇರ ಸವಾಲು ಹಾಕಿ ಪಂಥಾಹ್ವಾನ ನೀಡುತ್ತಿದ್ದೇನೆ. ನೀನು ‘ಎಸ್’ ಎಂದರೆ ನಾಳೆಯೇ ರಾಜೀನಾಮೆ ನೀಡುತ್ತೇನೆ. ಜನಾದೇಶ ಲೂಟಿಕೋರನಿಗೋ? ಜನ ಸೇವಕನಿಗೋ? ನೋಡೇ ಬಿಡೋಣ ಎಂದು ಸುದೀರ್ಘವಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಪ್ಯಾಕೇಜ್ ಮೇಲೆ ಹೋಗಿದ್ದೀಯಾ ?
ನೀನೇನು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೈಲು ಸೇರಿದ ಮಹನೀಯನಾ ? ಜೈಲಿನಿಂದ ಹೊರ ಬರಲೂ ಕಳ್ಳಾಟ ಮಾಡಿದ ಭೂಪ ತಾನೇ ?’ ಗಣಿ ಲೂಟಿ ಮಾಡಿ ಜೈಲಿಗೆ ಹೋಗಿಲ್ಲ ಎಂದರೆ ‘ಫೀಲ್ ದಿ ಜೈಲ್’ ಪ್ಯಾಕೇಜ್ ಮೇಲೆ ಹೋಗಿದ್ಯಾ? ಅಥವಾ “ಜಯ ಜನಾರ್ಧನ ಕೃಷ್ಣ ರಾಧಿಕಾಪತೇ” ಅಂಥ ಕೃಷ್ಣಜನ್ಮಾಷ್ಟಮಿ ದಿನ ಕೃಷ್ಣನ ಭಜನೆ ಮಾಡಿದ್ದಕ್ಕೆ ನಿನ್ನನ್ನು ಕೃಷ್ಣ ಜನ್ಮ ಸ್ಥಾನಕ್ಕೆ ಕಳಿಸಿದರಾ? ಹೇಳಪ್ಪಾ ಕೋಳ ತೊಟ್ಟ ಗಣಿ ಕಳಂಕಿತ ಎಂದು ತಂಗಡಗಿ ತಿರುಗೇಟು ನೀಡಿದ್ದಾರೆ.
ಸುಂಕಲಮ್ಮ ದೇವಸ್ಥಾನ ಒಡೆದ ಅವಿವೇಕಿ ನೀನು. ಗಂಗಾವತಿಯಲ್ಲಿ ಗೆದ್ದರೆ ಮತದಾರರಿಗೆ ಡಬಲ್ ಬೆಡ್ ರೂಮ್ ಮನೆ ನೀಡ್ತೀನಿ. ಕ್ರಿಕೆಟ್ ಸ್ಟೇಡಿಯಂ ಮಾಡ್ತೀನಿ ಅಂದಿದ್ದೆ ಈಡೇರಿಸಿದ್ದೀಯಾ ? ಸುಳ್ಳು ಹೇಳಿಕೊಂಡು ಜೀವನ ಮಾಡೋ ನಿನಗೆ ಇಷ್ಟಿರುವಾಗ ಸ್ವಾಭಿಮಾನದಿಂದ ಬೆಳೆದವನು ನನಗೆ ಎಷ್ಟಿರಬೇಡ ? ನಿನ್ನ ಕಾಲಿಗೆ ಬಿದ್ದೆ ಎಂದು ಹೇಳಿಕೊಳ್ಳುತ್ತಾ ಇದ್ಯಾ. ನಾಚಿಕೆ ಆಗಲ್ವಾ? ನಾನು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮಾತನಾಡಿದ್ರೆ ನಿನ್ನ ಬಂಡವಾಳ ಬಟಾ ಬಯಲು ಆಗುತ್ತದೆ. ಕತ್ತಲೆ ಲೋಕದ ಕರಾಳ ಮುಖ ಕಳಚಿ ಬೀಳುತ್ತದೆ ಹುಷಾರು ಎಂದು ತಂಗಡಗಿ ಎಚ್ಚರಿಕೆ ನೀಡಿದ್ದಾರೆ.
ಎಡಬಿಡಂಗಿ ಗಿರಾಕಿ ನೀನು
ಯಡಿಯೂರಪ್ಪ ಅವರನ್ನು ಬ್ಲಾಕ್ ಮೇಲ್ ಮಾಡಿದ ಎಡಬಿಡಂಗಿ ಗಿರಾಕಿ ನೀನು. ನನಗೆ ಕರೆ ಮಾಡಿ ದಮ್ಮಯ್ಯ ಎಂದು ಬೇಡಿಕೊಂಡವನು ಈಗ ನಾನು ನಿನ್ನ ಕಾಲಿಗೆ ಬಿದ್ದೆ ಎಂದು ಬಾಲ ಬಿಚ್ಚುತ್ತಿದ್ದೀಯಾ ? ನಿನಗೆ ತಾಕತ್ತಿದ್ದರೆ ಕಳೆದ ಬಾರಿ ರಾಜ್ಯಸಭಾ ಚುನಾವಣೆಯಲ್ಲಿ ನನಗೆ ಎಷ್ಟು ಕರೆ ಮಾಡಿದ್ದೀಯ ?. ಯಾರಿಗೆ ವೋಟ್ ಹಾಕಿದ್ಯಾ? ಕಾಲ್ ಲಿಸ್ಟ್ ತೆಗೆದು ಬಹಿರಂಗ ಪಡಿಸು. ನಿನ್ನ ಯೋಗ್ಯತೆ, ಪಕ್ಷವಿರೋಧಿ ಬೂಟಾಟಿಕೆ ರಾಜ್ಯದ ಜನತೆಗೆ ಹಾಗೂ ನಿನ್ನ ಬಿಜೆಪಿ ಪಕ್ಷದವರಿಗೆ ತಿಳಿಯಲಿ. ಪುಂಗು ಅಂದ್ರೆ ಹೆಂಗ್ ಪುಂಗ್ಲಿನೇ ಮೀರಿಸೋ ಥರ ನನಗೆ ಹಣ ನೀಡಿದ್ದೇನೆ ಅಂದಿದ್ದೀಯ. ನಿನ್ನ ಮಿಥ್ಯ ಸಾಧನೆ ಜನರಿಗೆ ತಿಳಿದಿದೆ. ನಿನಗೆ ಕಿಂಚಿತ್ ಮಾನ ಮರ್ಯಾದೆ ಇದ್ದರೂ ನನ್ನ ಸವಾಲು ಸ್ವೀಕರಿಸು ಎಂದು ತಂಗಡಗಿ ತರಾಟೆಗೆತ್ತಿಕೊಂಡಿದ್ದಾರೆ.



























