ಚುನಾವಣಾ ರಾಜಕೀಯದಿಂದ ಮಾತ್ರ ಹಿಂದೆ ಸರಿದಿದ್ದೇನೆ, ಸಕ್ರಿಯ ರಾಜಕಾರಣದಿಂದಲ್ಲ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಪ್ರಸ್ತುತ ಚುನಾವಣಾ ವ್ಯವಸ್ಥೆ ಬಹಳ ಹದಗೆಟ್ಟಿದೆ ವ್ಯವಸ್ಥೆ ಸುಧಾರಣೆಯಾಗಬೇಕು ಸಾಮಾಜಿಕ, ಶೈಕ್ಷಣಿಕ ವರದಿ ಜಾರಿಯಾಗಲೇಬೇಕು.

ಬೆಂಗಳೂರು : ಚುನಾವಣಾ ರಾಜಕೀಯದಿಂದ ಮಾತ್ರ ಹಿಂದೆ ಸರಿದಿದ್ದೇನೆ ಸಕ್ರಿಯ ರಾಜಕೀಯದಿಂದ ನಾನು ಹಿಂದೆ ಸರಿದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ರವಿವಾರ (ಸೆ.6) ನಗರದ ಅರಮನೆ ಮೈದಾನದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಒಕ್ಕೂಟದ ರಜತ ಮಹೋತ್ಸವ, ಹಿಂದುಳಿದ ಜಾತಿಗಳ ಬೃಹತ್ ಜನ ಜಾಗೃತಿ ಸಮಾವೇಶದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಪ್ರಸ್ತುತ ಚುನಾವಣಾ ವ್ಯವಸ್ಥೆ ಬಹಳ ಹದಗೆಟ್ಟಿದೆ. ಆದ್ದರಿಂದ ಚುನಾವಣಾ ರಾಜಕೀಯದಿಂದ ನಾನು ಹಿಂದೆ ಸರಿದಿದ್ದೇನೆ. ಚುನಾವಣಾ ವ್ಯವಸ್ಥೆ ಸುಧಾರಣೆಯಾಗಬೇಕು. ಎಲ್ಲರಿಗೂ ನ್ಯಾಯ ಸಿಗುವವರೆಗೆ, ಸಮಾನ ಅವಕಾಶಗಳು ಸಿಗುವವರೆಗೆ, ಸಮಾಜದಲ್ಲಿ ಜಾತಿ ವ್ಯವಸ್ಥೆ ತೊಲಗುವವರೆಗೆ ನಿಮ್ಮೊಂದಿಗೆ ಇದ್ದು, ಹೋರಾಟ ಮಾಡುತ್ತೇನೆ. ಹೀಗಾಗಿ ಯಾರೂ ಆತಂಕಕ್ಕೆ ಒಳಪಡುವ ಅವಶ್ಯಕತೆಯಿಲ್ಲ ಎಂದು ಅವರು ಭರವಸೆ ನೀಡಿದರು.
ನಾನು ಹಿಂದುಳಿದ ಜಾತಿಗೆ ಸೇರಿದವನು ಎಂದು ಹೇಳಲು ಯಾವುದೇ ಮುಜಗರವಿಲ್ಲ. ಯಾಕೆಂದರೆ ಈ ದೇಶದಲ್ಲಿ ಬಹಳ ವರ್ಷಗಳ ಕಾಲ ಜಾತಿ ವ್ಯವಸ್ಥೆಯಿತ್ತು. ಚಾತುರ್ವರ್ಣ ವ್ಯವಸ್ಥೆಯಿತ್ತು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಶೂದ್ರ ಎಂಬ ವರ್ಣಗಳ ವ್ಯವಸ್ಥೆಯಿತ್ತು. ನಾನು ಶೂದ್ರ ವರ್ಗಕ್ಕೆ ಸೇರಿದವನು. ಲಿಂಗಾಯತ, ಒಕ್ಕಲಿಗ ಆದಿಯಾಗಿ ನಾವೆಲ್ಲರೂ ಶೂದ್ರರೆ ಎಂದು ಸಿದ್ದರಾಮಯ್ಯ ನುಡಿದರು.

ಚಾತುರ್ವರ್ಣ ವ್ಯವಸ್ಥೆಯಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಿಗೆ ಅವಕಾಶಗಳಿದ್ದವು. ಆದರೆ ಶೂದ್ರರಿಗೆ ಅವಕಾಶಗಳು ಸಿಗಲಿಲ್ಲ. ಅವಕಾಶಗಳಿಂದ ವಂಚಿತರಾದರು. ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದರೆ, ಈ ಸಮಾಜದಲ್ಲಿ ಅಸಮಾನತೆ ನಿರ್ಮಾಣ ಆಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಸಾವಿರಾರು ವರ್ಷಗಳಿಂದ ಮನುಸ್ಮೃತಿ ಜಾರಿಯಲ್ಲಿತ್ತು. ಅದು ಅಲಿಖಿತ ಸಂವಿಧಾನ. ಅದರ ಪ್ರಕಾರವೇ ಜಾತಿಗಳನ್ನು ಒಡೆದು, ಪಟ್ಟಭದ್ರರು ಶ್ರೇಣೀಕೃತ ವ್ಯವಸ್ಥೆಯನ್ನು ನಿರ್ಮಾಣ ಮಾಡಿ ತಮ್ಮ ಬೇಳೆ ಬೇಯಿಸುವಂತಹ ಕೆಲಸವನ್ನು ಮಾಡಿದ್ದಾರೆ. ಇಷ್ಟು ವರ್ಷಗಳಾಗಿದ್ದರೂ ಇನ್ನೂ ಅಸಮಾನತೆ ಹೋಗಿಲ್ಲ. ಈ ದೇಶದಲ್ಲಿ ಒಂದು ದಿನ ಸಮ ಸಮಾಜ ನಿರ್ಮಾಣವಾಗುತ್ತದೆ ಎಂಬ ನಂಬಿಕೆ ನನಗಿದೆ ಎಂದರು.

ಹಿಂದುಳಿದ ಶಾಶ್ವತ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ಅವರ ನೇತೃತ್ವದ ಶೈಕ್ಷಣಿಕ, ಸಾಮಾಜಿಕ ವರದಿಯನ್ನು ನಾನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಸಂದರ್ಭದಲ್ಲಿ ಸ್ವೀಕಾರ ಮಾಡಿದ್ದೇನೆ. ಆದರೆ ಅದನ್ನು ಬಹಿರಂಗಪಡಿಸಬಾರದು ಎಂದು ನ್ಯಾಯಾಲಯದ ಆದೇಶವಿದೆ. ಈ ತಡೆಯನ್ನು ತೆರವು ಮಾಡಲು ಮನವಿ ಮಾಡುವಂತೆ ನಾನು ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಅವರಿಗೆ ಹೇಳಿರುವುದಾಗಿ ತಿಳಿಸಿದರು.
ನ್ಯಾಯಾಲಯದ ತಡೆಯಾಜ್ಞೆಯನ್ನು ತೆರವು ಮಾಡಿಸಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಇಲ್ಲಿರುವವರೆಲ್ಲರೂ ನನ್ನ ಮಾತನ್ನು ಕೇಳುತ್ತಾರೆ ಎಂಬ ನಂಬಿಕೆ ನನಗಿದೆ. ಶೈಕ್ಷಣಿಕ, ಸಾಮಾಜಿಕ ವರದಿ ಜಾರಿಯಾಗಲೇಬೇಕು. ಎಲ್ಲರಿಗೂ ಶೇ.75ರಷ್ಟು ಮೀಸಲಾತಿ ಸಿಗಲೇಬೇಕು. ಸಾಮಾಜಿಕ ನ್ಯಾಯ ಸಿಗಬೇಕು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.























































error: Content is protected !!
Scroll to Top