ಅಭಿನಂದನ್ ವರ್ಧಮಾನ್ ವಾಯುಸೇನೆಯಿಂದ ನಿವೃತ್ತಿ ಗೋವಾ ಮೂಲದ ಖಾಸಗಿ ಏರ್‌ಲೈನ್ಸ್ ಪೈಲಟ್ ಆದ 2019ರ ವಾರ್ ಹೀರೋ
ಹೊಸದಿಲ್ಲಿ: ಫೆಬ್ರವರಿ 2019ರಲ್ಲಿ ಪಾಕಿಸ್ತಾನ ವಾಯುಪಡೆಯ ಜೆಟ್‌ನೊಂದಿಗಿನ ವೈಮಾನಿಕ ಕದನದಲ್ಲಿ ತಮ್ಮ ವಿಮಾನವು ಹೊಡೆದುರುಳಿಸಲ್ಪಟ್ಟ ನಂತರ, ಮೂರು ದಿನಗಳ ಕಾಲ ಪಾಕಿಸ್ತಾನ ಸೇನೆ ವಶದಲ್ಲಿದ್ದ ಅಭಿನಂದನ್ ವರ್ಧಮಾನ್ ಭಾರತೀಯ ವಾಯುಪಡೆ (ಐಎಎಫ್)ಯ ಫೈಟರ್ ಪೈಲಟ್ ಹುದ್ದೆಯಿಂದ ನಿವೃತ್ತಿ ಘೋಷಿಸಿದ್ದಾರೆ. ಅಭಿನಂದನ್ ವರ್ಧಮಾನ್ ಖಾಸಗಿ ವಿಮಾನಯಾನ ಸಂಸ್ಥೆಯೊಂದರಲ್ಲಿ ವಾಣಿಜ್ಯ ಪೈಲಟ್ ಆಗಿ ತಮ್ಮ ಹೊಸ ವೃತ್ತಿಜೀವನವನ್ನು ಆರಂಭಿಸಲಿದ್ದಾರೆ.
ವಾಯುಪಡೆಯಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ ಮಾಜಿ ಗ್ರೂಪ್ ಕ್ಯಾಪ್ಟನ್ ಮತ್ತು ವೀರ್ ಚಕ್ರ ಪ್ರಶಸ್ತಿ ಪುರಸ್ಕೃತರಾದ ಅಭಿನಂದನ್ ವರ್ಧಮಾನ್ ಗೋವಾ ಮೂಲದ ಪ್ರಾದೇಶಿಕ ವಿಮಾನಯಾನ ಸಂಸ್ಥೆ FLY91ಗೆ ಪೈಲಟ್ ಆಗಿ ಸೇರ್ಪಡೆಗೊಂಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಮಹತ್ವದ ಬೆಳವಣಿಗೆಯೊಂದರಲ್ಲಿ 2019ರಲ್ಲಿ ಪಾಕಿಸ್ತಾನ ವಾಯುಸೇನೆಯ ಜೆಟ್ ವಿರುದ್ಧ ಹೋರಾಡಿ ಪಾಕಿಸ್ತಾನ ಭೂಪ್ರದೇಶದಲ್ಲಿ ಸೆರೆಸಿಕ್ಕಿದ್ದ ಭಾರತೀಯ ವಾಯುಪಡೆ (ಐಎಎಫ್)ಯ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ ವಾಯುಸೇನೆಯಿಂದ ಸ್ವಯಂ ನಿವೃತ್ತಿ ಘೋಷಿಸಿದ್ದಾರೆ. ಈ ಕುರಿತು ಖುದ್ದು ಅಭಿನಂದನ್ ವರ್ಧಮಾನ್ ಯಾವುದೇ ಹೇಳಿಕೆ ನೀಡಿಲ್ಲವಾದರೂ ಗೋವಾ ಮೂಲದ ಖಾಸಗಿ ವಿಮಾನಯಾನ ಸಂಸ್ಥೆ FLY91ಗೆ ಪೈಲಟ್ ಆಗಿ ಸೇರ್ಪಡೆಗೊಂಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಭಾರತೀಯ ವಾಯುಸೇನೆಯಿಂದ ಸ್ವಯಂ ನಿವೃತ್ತಿ ಪಡೆದ ಅಭಿನಂದನ್ ವರ್ಧಮಾನ್.
ಗೋವಾ ಮೂಲದ ಖಾಸಗಿ ವಿಮಾನಯಾನ ಸಂಸ್ಥೆಗೆ ಪೈಲಟ್ ಆಗಿ ಸೇರಿದ ಮಾಜಿ ಗ್ರೂಪ್ ಕ್ಯಾಪ್ಟನ್.
2019ರಲ್ಲಿ ಪಾಕ್ ಜೆಟ್ ಹೊಡೆದುರುಳಿಸಿ ಅಲ್ಲಿನ ಸೇನೆಗೆ ಸೆರೆಸಿಕ್ಕು ಸುರಕ್ಷಿತವಾಗಿ ಮರಳಿದ್ದ ಹೀರೋ.
ಅಭಿನಂದನ್ ವರ್ಧಮಾನ್ ಅವರು ಕಳೆದ ಆಗಸ್ಟ್‌ನಲ್ಲೇ ಖಾಸಗಿ ವಿಮಾನಯಾನ ಸಂಸ್ಥೆಗೆ ಸೇರಿದ್ದಾರಾದರೂ ಅವರಾಗಲಿ FLY91 ವಿಮಾನ ಸಂಸ್ಥೆಯ ವಕ್ತಾರರಾಗಲಿ ಈ ಕುರಿತು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ತನ್ನ ನೌಕರರ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಲು ಖಾಸಗಿ ವಿಮಾನಯಾನ ಸಂಸ್ಥೆ ನಿರಾಕರಿಸಿದೆ.
ಮಾರ್ಚ್ 2024ರಲ್ಲಿ ಕಾರ್ಯಾಚರಣೆ ಆರಂಭಿಸಿದ FLY91, ATR 72-600 ವಿಮಾನಗಳ ಸಮೂಹವನ್ನು ನಿರ್ವಹಿಸುತ್ತಿದೆ. ಗೋವಾ ಮತ್ತು ಹೈದರಾಬಾದ್ ಈ ವಿಮಾನಯಾನ ಸಂಸ್ಥೆಯ ಎರಡು ಪ್ರಮುಖ ನೆಲೆಗಳಾಗಿವೆ.
ಫೆಬ್ರವರಿ 2019ರಲ್ಲಿ ಪುಲ್ವಾಮಾದಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಸಿಆರ್‌ಪಿಎಫ್‌ನ 40 ಸಿಬ್ಬಂದಿ ಮೃತಪಟ್ಟಿದ್ದರು. ಆ ಬಳಿಕ ಭಾರತೀಯ ಪಡೆಗಳು ಪಾಕಿಸ್ತಾನದ ಭೂಪ್ರದೇಶದಲ್ಲಿದ್ದ ಭಯೋತ್ಪಾದಕರ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದವು. ಬಾಲಕೋಟ್‌ನಲ್ಲಿರುವ ಜೈಶ್-ಎ-ಮೊಹಮ್ಮದ್ (JeM) ಸಂಘಟನೆಯ ತರಬೇತಿ ಶಿಬಿರವನ್ನು, ಈ ದಾಳಿಗಳು ಗುರಿಯಾಗಿಸಿಕೊಂಡಿದ್ದವು.
ಮರುದಿನ ಪಾಕಿಸ್ತಾನದ ವಾಯುಪಡೆಯು ನಡೆಸಿದ ಪ್ರತಿದಾಳಿಯು, ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಈ ನೆರೆಯ ರಾಷ್ಟ್ರಗಳ ನಡುವೆ ಯುದ್ಧದ ಭೀತಿಯನ್ನು ಹುಟ್ಟುಹಾಕಿತು. ಈ ಸಂದರ್ಭದಲ್ಲಿ ಐಎಎಫ್‌ನಲ್ಲಿ ವಿಂಗ್ ಕಮಾಂಡರ್ ಆಗಿದ್ದ ಅಭಿನಂದನ್ ವರ್ಧಮಾನ್ ತಮ್ಮ ಮಿಗ್-21 ಜೆಟ್ ಮೂಲಕ ಪಾಕಿಸ್ತಾನ ವಾಯುಪಡೆಯು ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದರು.
ಆದರೆ ಈ ಕಾದಾಟದಲ್ಲಿ ಅಭಿನಂದನ್ ವರ್ಧಮಾನ್ ಅವರ ಜೆಟ್ ಕೂಡ ಪಾಕಿಸ್ತಾನ ನೆಲದಲ್ಲಿ ಕ್ರಾಶ್ ಆಗಿತ್ತು. ಕೂಡಲೇ ಪಾಕಿಸ್ತಾನ ಸೇನೆಯು ಅವರನ್ನು ವಶಕ್ಕೆ ಪಡದುಕೊಂಡಿತ್ತು. ಪಾಕಿಸ್ತಾನ ಸೇನೆ ಮೂರು ದಿನಗಳ ಕಾಲ ಭಾರತೀಯ ಫೈಟರ್ ಪೈಲಟ್‌ನನ್ನು ವಶದಲ್ಲಿ ಇರಿಸಿಕೊಂಡಿತ್ತು. ಆದರೆ ಭಾರತದ ಗಂಭೀರ ಎಚ್ಚರಿಕೆಯ ಬಳಿಕ ಆಗಿನ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆ ಮಾಡುವ ತಮ್ಮ ಸರ್ಕಾರದ ನಿರ್ಧಾರವನ್ನು ಪಾಕಿಸ್ತಾನ ಸಂಸತ್ತಿನಲ್ಲಿ ಘೋಷಿಸಿದ್ದರು.
ಭಾರತಕ್ಕೆ ಮರಳಿದ ಕೆಲವು ದಿನಗಳ ನಂತರ ಅಭಿನಂದನ್ ವರ್ಧಮಾನ್ ಮತ್ತೆ ವಾಯುಸೇನೆಯಲ್ಲಿ ತಮ್ಮ ಸೇವೆಯನ್ನು ಮುಂದುವರೆಸಿದರು. ಅವರಿಗೆ ಗ್ರೂಪ್ ಕ್ಯಾಪ್ಟನ್ ಭಾರತಕ್ಕೆ ಮರಳಿದ ಕೆಲವು ದಿನಗಳ ನಂತರ ಅಭಿನಂದನ್ ವರ್ಧಮಾನ್ ಮತ್ತೆ ವಾಯುಸೇನೆಯಲ್ಲಿ ತಮ್ಮ ಸೇವೆಯನ್ನು ಮುಂದುವರೆಸಿದರು. ಅವರಿಗೆ ಗ್ರೂಪ್ ಕ್ಯಾಪ್ಟನ್ ಹುದ್ದೆಗೆ ಬಡ್ತಿ ನೀಡಲಾಗಿತ್ತು. ಅಷ್ಟೇ ಅಲ್ಲದೇ ಅಭಿನಂದನ್ ವರ್ಧಮಾನ್ ಅವರಿಗೆ ವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
























