ಪಾಕಿಸ್ತಾನದಲ್ಲಿ 100 ವರ್ಷ ಹಳೆಯ ಹಿಂದೂ ದೇವಾಲಯ ಧ್ವಂಸ – ಭಾರತದಿಂದ ಖಂಡನೆ

ನವದೆಹಲಿ: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನರೋವಾಲ್ ಜಿಲ್ಲೆಯಲ್ಲಿ ಶತಮಾನಕ್ಕೂ ಹೆಚ್ಚು ಹಳೆಯ ಹಿಂದೂ ದೇವಾಲಯವನ್ನು ಧ್ವಂಸ ಮಾಡಿರುವ ಬಗ್ಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಕೃತ್ಯವನ್ನು ಖಂಡನೀಯ ವಿಧ್ವಂಸಕ ಕೃತ್ಯ ಎಂದು ಭಾರತ ಖಂಡಿಸಿದ್ದು, ಘಟನೆ ಕುರಿತು ತಕ್ಷಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನ ಸರ್ಕಾರವನ್ನು ಒತ್ತಾಯಿಸಿದೆ.
ನರೋವಾಲ್ ಜಿಲ್ಲೆಯ ಸಿರಾಜ್ ಗ್ರಾಮದಲ್ಲಿ 100 ವರ್ಷಕ್ಕೂ ಹೆಚ್ಚು ಹಳೆಯದಾದ ಹಿಂದೂ ದೇವಾಲಯವನ್ನು ಆಗಸ್ಟ್ 21ರಂದು ಧ್ವಂಸ ಮಾಡಲಾಗಿದೆ ಎಂದು ವರದಿಯಾಗಿದೆ. ಈ ಸ್ಥಳವು ಲಾಹೋರ್‌ನಿಂದ ಸುಮಾರು 130 ಕಿಲೋಮೀಟರ್ ದೂರದಲ್ಲಿದೆ. ಈ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಘಟನೆಯ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದು ತಿಳಿಸಿದ್ದಾರೆ.

ಸಿರಾಜ್ ಗ್ರಾಮದಲ್ಲಿರುವ ಐತಿಹಾಸಿಕ ಹಿಂದೂ ದೇವಾಲಯ ಧ್ವಂಸಗೊಂಡಿರುವ ಕುರಿತು ಬಂದಿರುವ ವರದಿಗಳನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ. ಶತಮಾನ ಹಳೆಯ ಅಲ್ಪಸಂಖ್ಯಾತರ ಆರಾಧನಾ ಸ್ಥಳವನ್ನು ಧ್ವಂಸ ಮಾಡಿರುವ ಈ ಖಂಡನೀಯ ಕೃತ್ಯವನ್ನು ಭಾರತ ಯಾವುದೇ ಮುಚ್ಚುಮರೆಯಿಲ್ಲದೆ ಖಂಡಿಸುತ್ತದೆ ಎಂದು ಅವರು ಹೇಳಿದ್ದಾರೆ. ಈ ಘಟನೆ ಅಲ್ಪಸಂಖ್ಯಾತರ ಆರಾಧನಾ ಸ್ಥಳದ ಮೇಲಿನ ಗಂಭೀರ ದಾಳಿ ಮಾತ್ರವಲ್ಲದೆ ಧಾರ್ಮಿಕ ಪರಂಪರೆಯನ್ನು ರಕ್ಷಿಸುವಲ್ಲಿ ಅಲ್ಲಿನ ಅಧಿಕಾರಿಗಳ ವೈಫಲ್ಯವನ್ನೂ ತೋರಿಸುತ್ತದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಸಮುದಾಯಗಳ ಧಾರ್ಮಿಕ ಸ್ವಾತಂತ್ರ‍್ಯ ಮತ್ತು ಆರಾಧನಾ ಸ್ಥಳಗಳ ಸುರಕ್ಷತೆ ಕುರಿತು ಇಂತಹ ಘಟನೆಗಳು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ ಎಂದು ಜೈಸ್ವಾಲ್ ತಿಳಿಸಿದ್ದಾರೆ.

ತಕ್ಷಣ ತನಿಖೆ ನಡೆಸುವಂತೆ ಭಾರತ ಆಗ್ರಹ
ದೇವಾಲಯ ಧ್ವಂಸ ಪ್ರಕರಣದ ಕುರಿತು ಪಾಕಿಸ್ತಾನ ಸರ್ಕಾರ ತಕ್ಷಣ ಹಾಗೂ ಪಾರದರ್ಶಕ ತನಿಖೆ ನಡೆಸಬೇಕು ಎಂದು ಭಾರತ ಒತ್ತಾಯಿಸಿದೆ. ಅಲ್ಲದೆ, ಘಟನೆಗೆ ಕಾರಣರಾದವರನ್ನು ಗುರುತಿಸಿ ಅವರ ವಿರುದ್ಧ ಸಂಪೂರ್ಣ ಹೊಣೆಗಾರಿಕೆ ನಿಗದಿಪಡಿಸಬೇಕು ಎಂದು ಆಗ್ರಹಿಸಲಾಗಿದೆ. ಧ್ವಂಸಗೊಂಡ ದೇವಾಲಯವನ್ನು ಪುನಃಸ್ಥಾಪಿಸಲು ಪಾಕಿಸ್ತಾನ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದೂ ಭಾರತ ಹೇಳಿದೆ.
ಅಲ್ಪಸಂಖ್ಯಾತ ನಾಗರಿಕರ ಸುರಕ್ಷತೆ, ಭದ್ರತೆ ಮತ್ತು ಕಲ್ಯಾಣವನ್ನು ಖಚಿತಪಡಿಸುವುದು ಪಾಕಿಸ್ತಾನ ಸರ್ಕಾರದ ಮೂಲಭೂತ ಜವಾಬ್ದಾರಿಯಾಗಿದೆ. ಅಲ್ಪಸಂಖ್ಯಾತರ ಸಾಂಸ್ಕೃತಿಕ ಹಾಗೂ ಧಾರ್ಮಿಕ ಪರಂಪರೆಯನ್ನು ರಕ್ಷಿಸುವ ಕರ್ತವ್ಯವನ್ನೂ ಸರ್ಕಾರ ನಿರ್ವಹಿಸಬೇಕು ಎಂದು ಭಾರತ ಒತ್ತಿ ಹೇಳಿದೆ.
ಸ್ಥಳೀಯರ ಪ್ರಕಾರ ನಿಷೇಧಿತ ಬಲಪಂಥೀಯ ಇಸ್ಲಾಮಿಕ್ ಸಂಘಟನೆ ತೆಹ್ರೀಕ್-ಇ-ಲಬ್ಬಾಯಿಕ್ ಪಾಕಿಸ್ತಾನ್‌ಗೆ ಸೇರಿದ ಕೆಲ ಧಾರ್ಮಿಕ ಉಗ್ರಗಾಮಿಗಳು ದೇವಾಲಯವನ್ನು ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ದೇವಾಲಯಕ್ಕೆ ಸೇರಿದ ಜಾಗವನ್ನು ಸಮೀಪದಲ್ಲಿರುವ ಧಾರ್ಮಿಕ ಶಿಕ್ಷಣ ಸಂಸ್ಥೆಯ ಆವರಣಕ್ಕೆ ಸೇರಿಸುವ ಉದ್ದೇಶದಿಂದ ಈ ಕೃತ್ಯ ನಡೆಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ದೇವಾಲಯ ಮರುನಿರ್ಮಾಣಕ್ಕೆ ಆಗ್ರಹ
ಪಾಕಿಸ್ತಾನ ಮಾಸಿಹಾ ಮಿಲ್ಲತ್ ಪಾರ್ಟಿ ಕೂಡ ದೇವಾಲಯ ಧ್ವಂಸ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಂಜಾಬ್ ಸರ್ಕಾರವನ್ನು ಒತ್ತಾಯಿಸಿದೆ. ಪಿಎಂಎಂಪಿ ಅಧ್ಯಕ್ಷ ಅಸ್ಲಂ ಪರ್ವೇಜ್ ಸಹೋತ್ರಾ ಅವರು ಆಗಸ್ಟ್ 28ರಂದು ಪಂಜಾಬ್‌ನ ಹೆಚ್ಚುವರಿ ಗೃಹ ಕಾರ್ಯದರ್ಶಿಯನ್ನು ಭೇಟಿಯಾಗಿ, ದೇವಾಲಯವನ್ನು ಧ್ವಂಸ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಲಿಖಿತ ಮನವಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ದೇವಾಲಯವನ್ನು ರಕ್ಷಿಸುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಧ್ವಂಸಗೊಂಡ ದೇವಾಲಯದ ಶಿಖರಕ್ಕೆ ಬಳಸಲಾಗಿದ್ದ ಲೋಹದ ಸಾಮಗ್ರಿಗಳು, ಇತರ ಕಟ್ಟಡ ಸಾಮಗ್ರಿಗಳು ಮತ್ತು ಇಟ್ಟಿಗೆಗಳನ್ನು ಕೂಡ ನಂತರ ಸ್ಥಳದಿಂದ ತೆಗೆದುಹಾಕಲಾಗಿದೆ ಎಂದು ಸಹೋತ್ರಾ ಆರೋಪಿಸಿದ್ದಾರೆ.
ಪಾಕಿಸ್ತಾನ ರಚನೆಯಾದ ಬಳಿಕ ನರೋವಾಲ್ ಜಿಲ್ಲೆಯಲ್ಲಿ ಸುಮಾರು 45 ಹಿಂದೂ ದೇವಾಲಯಗಳು ಇದ್ದವು ಎಂದು ವರದಿಯಾಗಿದೆ. ಆದರೆ ಕಾಲಕ್ರಮೇಣ ಈ ಎಲ್ಲಾ ದೇವಾಲಯಗಳು ನಿರ್ಲಕ್ಷ್ಯಕ್ಕೆ ಒಳಗಾಗಿ ದುಸ್ಥಿತಿಗೆ ತಲುಪಿವೆ ಎಂದು ಹೇಳಲಾಗಿದೆ.

















































error: Content is protected !!
Scroll to Top