ಶತಕ ಸಿಡಿಸಿದ ನಾಯಕ ಶ್ರೇಯಸ್ ಅಯ್ಯರ್
ಲಕ್ನೋ: ಟಿ20 ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 8 ವಿಕೆಟ್ಗಳ ಅಂತರದಿಂದ ಜಯಗಳಿಸಿದೆ.
ಲಕ್ನೋದ ಎಕಾನಾ ಸ್ಟೇಡಿಯಂನಲ್ಲಿ ಪಂದ್ಯ ನಡೆದಿದ್ದು, ತಂಡದ ನಾಯಕ ಶ್ರೇಯಸ್ ಅವರ ಶತಕದ ನೆರವಿನಿಂದ ಭಾರತಕ್ಕೆ ವಿಜಯಮಾಲೆ ಲಭಿಸಿತು. ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡವು 19.1 ಓವರ್ ಗಳಲ್ಲಿ 171 ರನ್ಗಳಿಗೆ ಆಲೌಟಾದರೆ, ಭಾರತ ತಂಡವು 14.4 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಗೆಲುವು ಸಾಧಿಸಿತು.

ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ವೆಸ್ಟ್ ಇಂಡೀಸ್ ಮೊದಲ ವಿಕೆಟ್ ಗೆ 4.3 ಓವರ್ ಗಳಲ್ಲಿ 38 ರನ್ ಕಲೆ ಹಾಕಿತು. ಆದರೆ ಬಳಿಕ ಸತತ ಎರಡು ವಿಕೆಟ್ ಕಳೆದುಕೊಂಡಿತು. ನಾಲ್ಕನೇ ವಿಕೆಟ್ ಗೆ ನಾಯಕ ಹೋಪ್ ಜೊತೆಯಾದ ರುದರ್ಫೋರ್ಡ್ 63 ರನ್ ಜೊತೆಯಾಟವಾಡಿದರು. ನಾಯಕ ಶಾಯ್ ಹೋಪ್ 37 ಎಸೆತಗಳಲ್ಲಿ 52 ರನ್ ಮಾಡಿದರೆ, ರುದರ್ಫೋರ್ಡ್ 34 ಎಸೆತಗಳಲ್ಲಿ 56 ರನ್ ಮಾಡಿದರು. ಇತರ ಬ್ಯಾಟ್ಸ್ಮನ್ಗಳು ರನ್ ಕಲೆ ಹಾಕುವಲ್ಲಿ ಸೋತರು. ಭಾರತದ ಪರವಾಗಿ ಬೌಲಿಂಗ್ ನಲ್ಲಿ ಚೊಚ್ಚಲ ಪಂದ್ಯವಾಡುತ್ತಿರುವ ನಮನ್ ಧೀರ್ ಮೂರು ವಿಕೆಟ್ ಕಿತ್ತರೆ, ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರು. ತಲಾ ಒಂದು ವಿಕೆಟ್ ಅರ್ಶದೀಪ್ ಮತ್ತು ಮಯಾಂಕ್ ಯಾದವ್ ಅವರು ಕಿತ್ತರು.
172 ರನ್ ಗುರಿ ಬೆನ್ನತ್ತಿದ ಭಾರತ 35 ರನ್ ಆಗುವಷ್ಟರಲ್ಲಿ ಆರಂಭಿಕರಿಬ್ಬರನ್ನು ಕಳೆದುಕೊಂಡಿತ್ತು. ಅಭಿಷೇಕ್ 21 ರನ್ ಮಾಡಿದರೆ, ಸಂಜು 11 ರನ್ ಗೆ ವಿಕೆಟ್ ಒಪ್ಪಿಸಿದರು. ಆದರೆ ಮೂರನೇ ವಿಕೆಟ್ ಗೆ ಜೊತೆಯಾದ ನಾಯಕ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಪ್ರದರ್ಶನ ತೋರಿದರು. ನಾಯಕ ಶ್ರೇಯಸ್ ಅಯ್ಯರ್ 43 ಎಸೆತ ಎದುರಿಸಿ ಅಜೇಯ 102 ರನ್ ಮಾಡಿದರು. ಆರು ಸಿಕ್ಸರ್ ಮತ್ತು 10 ಬೌಂಡರಿ ಬಾರಿಸಿದರು. ಇಶಾನ್ ಕಿಶನ್ ಅಜೇಯ 37 ರನ್ ಗಳಿಸಿದರು.









































