ಬೆಂಗಳೂರು: 2026-27ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಲಾಗಿದೆ.
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನ. 16 ಕೊನೆಯ ದಿನವಾಗಿದ್ದು, ಅರ್ಜಿ ಶುಲ್ಕ ಪಾವತಿಯನ್ನು ಖಚಿತಪಡಿಸಿಕೊಳ್ಳಲು ನ. 18ರವರೆಗೆ ಅವಕಾಶ ನೀಡಲಾಗಿದೆ.
ಈ ಹಿಂದೆ ಅರ್ಜಿ ಸಲ್ಲಿಸಲು ಅ. 26 ಕೊನೆಯ ದಿನಾಂಕ ಎಂದು ನಿಗದಿಪಡಿಸಲಾಗಿತ್ತು. ಇದೀಗ ಈ ಗಡುವು ವಿಸ್ತರಿಸಿ ಶಾಲಾ ಶಿಕ್ಷಣ ಇಲಾಖೆ ಹೊಸ ದಿನಾಂಕ ಪ್ರಕಟಿಸಿದೆ.

2026-27ನೇ ಸಾಲಿನ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಆಗಸ್ಟ್ 11 ಮತ್ತು 12ರಂದು ಜಿಲ್ಲಾವಾರು ಹಾಗೂ ವಿಭಾಗವಾರು ಅಧಿಸೂಚನೆಗಳನ್ನು ಹೊರಡಿಸಿ, ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಲು ಇನ್ನಷ್ಟು ಕಾಲಾವಕಾಶ ನೀಡಿರುವುದರಿಂದ ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.









































