ಪ್ರಶಸ್ತಿ ಆಕಾಂಕ್ಷಿಗಳಿಗೆ ಆಗಲಿದೆಯಾ ನಿರಾಸೆ.!
ಉಡುಪಿ: ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆ ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸುವ ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ ಪರಂಪರೆಗೆ ಈ ಬಾರಿ ತಡೆ ಬೀಳುವ ಸಾಧ್ಯತೆ ವ್ಯಕ್ತವಾಗಿದ್ದು, ಈ ಸಂಗತಿ ಸಾರ್ವಜನಿಕ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ.
ಹಲವು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿರುವ ಪ್ರಶಸ್ತಿ ಪ್ರದಾನ ಪ್ರಕ್ರಿಯೆಯನ್ನು ಈ ಬಾರಿ ಕೈಬಿಡಲು ಜಿಲ್ಲಾಡಳಿತ ನಿರ್ಧರಿಸಿದೆ ಎಂಬ ಮಾಹಿತಿ ಹೊರಬಿದ್ದಿದ್ದು, ಪ್ರಶಸ್ತಿಗೆ ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಸಾಹಿತ್ಯ, ಶಿಕ್ಷಣ, ಲಲಿತಕಲೆ, ಸಮಾಜಸೇವೆ, ಜನಪದ, ಕೃಷಿ, ದೈವಾರಾಧನೆ, ಪರಿಸರ ಮತ್ತು ವಿಜ್ಞಾನ, ವೈದ್ಯಕೀಯ, ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ಹಲವರು ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಸಾಧನೆಗಳನ್ನು ದಾಖಲಿಸುವ ಸಮಗ್ರ ಕಡತಗಳನ್ನು ಸಿದ್ಧಪಡಿಸಿ, ಸಂಸದರು, ಶಾಸಕರು ಹಾಗೂ ಇತರ ಜನಪ್ರತಿನಿಧಿಗಳ ಶಿಫಾರಸು ಪತ್ರಗಳನ್ನೂ ಪಡೆದುಕೊಂಡು ಪ್ರಶಸ್ತಿಗಾಗಿ ಪ್ರಯತ್ನ ನಡೆಸಿದ್ದಾರೆ.
ಲಭ್ಯ ಮಾಹಿತಿಯ ಪ್ರಕಾರ, ಹಲವು ಶಾಸಕರು ಹಾಗೂ ಜನಪ್ರತಿನಿಧಿಗಳು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಶಿಫಾರಸು ಪತ್ರಗಳನ್ನು ಸಲ್ಲಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಗೆ 250ಕ್ಕೂ ಅಧಿಕ ಅರ್ಜಿಗಳು ತಲುಪಿವೆ ಎನ್ನಲಾಗಿದೆ. ಇಷ್ಟೆಲ್ಲ ಸಿದ್ಧತೆಗಳು ನಡೆದಿರುವ ನಡುವೆಯೇ, ಕೊನೆಯ ಹಂತದಲ್ಲಿ ಜಿಲ್ಲಾ ರಾಜ್ಯೋತ್ಸವ ಸಮಾರಂಭದಲ್ಲಿ ಸಾಧಕರಿಗೆ ಪುರಸ್ಕಾರ ನೀಡುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ ಎಂಬ ಮಾಹಿತಿ ಜಿಲ್ಲಾಧಿಕಾರಿ ಕಚೇರಿಯ ಮೂಲಗಳಿಂದ ಹೊರಬಿದ್ದಿದೆ.
ದಕ್ಷಿಣ ಕನ್ನಡದಲ್ಲಿ ಪ್ರಶಸ್ತಿ ಪ್ರದಾನಕ್ಕೆ ಸಿದ್ಧತೆ; ಉಡುಪಿಯಲ್ಲಿ ಮಾತ್ರ ಸ್ಥಗಿತ
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸುವುದು ಕೇವಲ ಪ್ರಶಸ್ತಿ ಪ್ರದಾನಕ್ಕೆ ಸೀಮಿತವಾದ ಪ್ರಕ್ರಿಯೆಯಲ್ಲ. ಸ್ಥಳೀಯ ಮಟ್ಟದಲ್ಲಿ ಗುರುತಿಸಿಕೊಳ್ಳದೆ ಉಳಿದಿರುವ ಅನೇಕ ಪ್ರತಿಭಾವಂತರ ಸಾಧನೆಗಳನ್ನು ಸಮಾಜದ ಮುಂದೆ ಪರಿಚಯಿಸಲು ಇದು ಮಹತ್ವದ ವೇದಿಕೆಯಾಗಿದೆ. ಈ ಹಿನ್ನೆಲೆಯಲ್ಲಿ, ವರ್ಷಗಳಿಂದ ನಡೆದುಕೊಂಡು ಬಂದಿರುವ ಪುರಸ್ಕಾರ ಪರಂಪರೆಯನ್ನು ಮುಂದುವರಿಸಬೇಕೆಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ನೆರೆಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿಯೂ ಸಾಧಕರಿಂದ ಅರ್ಜಿಗಳನ್ನು ಆಹ್ವಾನಿಸಿ ಪ್ರಶಸ್ತಿ ಪ್ರದಾನಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎನ್ನಲಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಮಾತ್ರ ಏಕಾಏಕಿ ಈ ಪ್ರಕ್ರಿಯೆಯನ್ನು ಕೈಬಿಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಆಕಾಂಕ್ಷಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವುದರಿಂದ ಹಿಡಿದು ಅಗತ್ಯ ದಾಖಲೆಗಳನ್ನು ಸಂಗ್ರಹಿಸುವವರೆಗೆ ಸಮಯ ಮತ್ತು ಶ್ರಮ ವಿನಿಯೋಗಿಸಿರುವ ಸಾಧಕರಿಗೆ ಕೊನೆಯ ಕ್ಷಣದಲ್ಲಿ ಇಂತಹ ಬೆಳವಣಿಗೆ ಎದುರಾಗಿರುವುದು ನಿರಾಶೆ ಮೂಡಿಸಿದೆ. ಹಲವು ವರ್ಷಗಳಿಂದ ಯಾವುದೇ ಅಡೆತಡೆಯಿಲ್ಲದೆ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ನಿಲ್ಲಿಸುವುದಾದರೆ, ಅದಕ್ಕೆ ಸೂಕ್ತ ಕಾರಣವನ್ನು ಜಿಲ್ಲಾಡಳಿತ ನೀಡಬೇಕು ಎಂಬ ಆಗ್ರಹ ಸಾರ್ವಜನಿಕರದ್ದು.
ಉಸ್ತುವಾರಿ ಸಚಿವರು ಮಧ್ಯಪ್ರವೇಶಿಸಲು ಆಗ್ರಹ:
ಜಿಲ್ಲೆಯ ಸಾಧಕರನ್ನು ಗುರುತಿಸಿ ಗೌರವಿಸುವ ಮಹತ್ವದ ಕಾರ್ಯಕ್ರಮವನ್ನು ಈ ಬಾರಿ ಕೈಬಿಡಬಾರದು ಎಂಬ ಒತ್ತಾಯ ಸಾರ್ವಜನಿಕರು ಹಾಗೂ ಪ್ರಶಸ್ತಿ ಆಕಾಂಕ್ಷಿಗಳಿಂದ ವ್ಯಕ್ತವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಈ ವಿಚಾರದಲ್ಲಿ ತಕ್ಷಣ ಮಧ್ಯಪ್ರವೇಶಿಸಿ, ಹಿಂದಿನ ವರ್ಷಗಳಂತೆ ಈ ಬಾರಿಯೂ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ ಪ್ರದಾನ ಪ್ರಕ್ರಿಯೆ ಮುಂದುವರಿಯುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಜಿಲ್ಲಾಡಳಿತದ ನಿರ್ಧಾರ ಅಂತಿಮ
ಜಿಲ್ಲಾ, ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಂಬಂಧ ಜಿಲ್ಲಾಡಳಿತದ ನಿರ್ಧಾರವೇ ಅಂತಿಮ. ಕರ್ನಾಟಕ ರಾಜ್ಯೋತ್ಸವ ಆಚರಣೆ ಹಿನ್ನೆಲೆ ಈಗಾಗಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆದಿತ್ತು. ಸಭೆಯಲ್ಲಿ ಪ್ರಶಸ್ತಿ ನೀಡದೇ ಇರುವು ಬಗ್ಗೆ ಚರ್ಚೆ ಆಗಿಲ್ಲ. ಜಿಲ್ಲಾ ಮಟ್ಟದಲ್ಲಿ ನೀಡುವ ರಾಜ್ಯೋತ್ಸವದ ಪ್ರಶಸ್ತಿಗೆ ಸರ್ಕಾರದಿಂದ ಯಾವುದೇ ಆದೇಶ ಇಲ್ಲ. ಜಿಲ್ಲೆಯಿಂದಲೇ ಪ್ರಶಸ್ತಿ ನೀಡುವುದು ನಡೆದುಕೊಂಡು ಬಂದ ರೂಢಿ. ಈ ಬಾರಿಯೂ ಹಲವು ಅರ್ಜಿಗಳು ಬಂದಿದ್ದು, ಪರಿಶೀಲಿಸಿ ಜಿಲ್ಲಾಡಳಿತಕ್ಕೆ ನೀಡಲಿ ದ್ದೇವೆ. ಅಲ್ಲಿಂದಲೇ ಅಂತಿಮ ನಿರ್ಧಾರ ಆಗಲಿದೆ.
ಪೂರ್ಣಿಮಾ, ಸಹಾಯಕ ನಿರ್ದೇಶಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ









































