ನಾನಾ ಪಾಟೇಕರ್‌ – ಅಭಿಮಾನದ ನಾನಾ ಮುಖಗಳು

ತುಳುನಾಡಿನ ಜೊತೆ ಆತ್ಮೀಯ ನಂಟು ಹೊಂದಿದ್ದ ನಟ

ಕೋರಿ ರೊಟ್ಟಿ ಎಂದರೆ ಪಂಚಪ್ರಾಣ

ಮುಂಬಯಿಯ ಮಾಟುಂಗದಲ್ಲಿರುವ ಕರ್ನಾಟಕ ಸಂಘದ ಸಭಾಗೃಹದಲ್ಲಿ ಮರಾಠಿ ನಾಟಕವೊಂದರ ಪ್ರೀಮಿಯರ್‌ ಶೋ. ಮರಾಠಿಗರು ಸಿನಿಮಾದಷ್ಟೇ ನಾಟಕವನ್ನು ಪ್ರೀತಿಸುತ್ತಾರೆ. ಅಂದು ಸುಮಾರು ಒಂದು ಸಾವಿರದಷ್ಟು ಆಸನಗಳಿರುವ ಸಭಾಗೃಹ ಹೌಸ್‌ಫುಲ್‌ ಆಗಿ ಪ್ರೇಕ್ಷಕರು ಜಾಗ ಸಿಕ್ಕಿದಲ್ಲೆಲ್ಲ ನಿಂತಿದ್ದರು. ಪಿನ್‌ಡ್ರಾಪ್‌ ಸೈಲೆನ್ಸ್‌ನಲ್ಲಿ ನಾಟಕ ಶುರುವಾಯಿತು. ಬಹಳ ಗಂಭೀರವಾದ ನಾಟಕ, ಮಧ್ಯಂತರದ ವಿರಾಮವೂ ಇಲ್ಲದೆ ಬರೋಬ್ಬರಿ ಎರಡೂವರೆ ಗಂಟೆ ಸಾಗಿದ ನಾಟಕ ಮುಗಿದು ಕಿವಿಗಡಚಿಕ್ಕುವ ಚಪ್ಪಾಳೆಯೊಂದಿಗೆ ಪರದೆ ಮೇಲೇರಿ ಹಾಲ್‌ನಲ್ಲಿ ಬೆಳಕು ಚೆಲ್ಲಿದಾಗ ಅಲ್ಲಿದ್ದವರಿಗೆ ಅಚ್ಚರಿಯೊಂದು ಕಾದಿತ್ತು. ನಡುವಯಸ್ಕ ವ್ಯಕ್ತಿಯೊಬ್ಬರು ನಿಧಾನವಾಗಿ ಸೀಟೊಂದರ ಅಂಚು ಹಿಡಿದು ನೆಲದಲ್ಲಿ ಕುಳಿತಲ್ಲಿಂದ ಮೇಲೇಳುತ್ತಿದ್ದರು. ಅದು ಬೇರೆ ಯಾರೂ ಅಲ್ಲ ಆಗಲೇ ಲೆಜೆಂಡ್‌ ನಟರಾಗಿದ್ದ ನಾನಾ ಪಾಟೇಕರ್‌! ನಾಟಕ ಶುರುವಾಗುವ ಹೊತ್ತಿಗೆ ಬಂದಿದ್ದ ನಾನಾ ಪಾಟೇಕರ್‌ ಸೀಟು ಸಿಗದಾಗ ಅಲ್ಲೇ ನೆಲದ ಮೇಲೆ ಕುಳಿತು ಪೂರ್ತಿ ನಾಟಕವನ್ನು ನೋಡಿದ್ದರು. ಜನರಿಗೆ ಒಂದು ಕ್ಷಣ ತಮ್ಮ ಕಣ್ಣನ್ನೇ ನಂಬಲು ಸಾಧ್ಯವಾಗಲಿಲ್ಲ.

ಬೆಳ್ಳಂಬೆಳಗ್ಗೆ ಅವರು ಇನ್ನಿಲ್ಲ ಎಂಬ ಸುದ್ದಿ ಬಂದು ಅಪ್ಪಳಿಸಿದಾಗ ಮನಸ್ಸು ಯಾಕೋ ವಿಲವಿಲನೆ ಒದ್ದಾಡಿತು. ಅದು ಇಷ್ಟಪಟ್ಟ ಓರ್ವ ನಟ ತೀರಿಕೊಂಡಾಗ ಆಗುವ ನೋವಲ್ಲ. ಕುಟುಂಬದ ಹಿರಿಯ ಸದಸ್ಯನೊಬ್ಬ ಇನ್ನಿಲ್ಲವಾದಾಗ ಉಂಟಾಗುವ ಶೂನ್ಯಭಾವ. ನಾನಾ ಪಾಟೇಕರ್‌ ಸಿನಿಮಾಗಳ ಬಗ್ಗೆ, ಅವರ ಅಭಿನಯ ಪ್ರತಿಭೆಯ ಬಗ್ಗೆ ಪುಟಗಟ್ಟಲೆ ಬರೆಯಬಹುದು. ಅವರ ಒಂದೊಂದು ಚಿತ್ರವೂ ಮಾಸ್ಟರ್‌ಪೀಸ್‌ ಇದ್ದ ಹಾಗೆ. ಹಾಗೆಂದು ನಟಿಸಿದ ಎಲ್ಲ ಚಿತ್ರಗಳು ಸೂಪರ್‌ ಹಿಟ್‌ ಅಗಿವೆ ಎಂದಲ್ಲ. ಗಲ್ಲಾಪೆಟ್ಟಿಗೆಯಲ್ಲಿ ಕೆಲವು ಚಿತ್ರ ಗೆದ್ದಿರಬಹುದು ಕೆಲವು ಗೆಲ್ಲದಿರಬಹುದು, ಆದರೆ ನಾನಾ ಪಾಟೇಕರ್‌ ಅಭಿನಯ ಮಾತ್ರ ಗೆದ್ದೇ ಗೆದ್ದಿದೆ ಎಂದು ಅಭಿಮಾನದಿಂದ ಹೇಳಬಹುದು.

ನಾನಾ ಪಾಟೇಕರ್‌ಗೆ ಅಭಿನಯ ಮಾತ್ರವಲ್ಲದೆ ಇನ್ನೊಂದು ಮುಖವೂ ಇದೆ. ಅವರು ಅಪ್ಪಟ ಕೃಷಿಕ, ಮೊನ್ನೆ ಮೊನ್ನೆಯ ತನಕ ತಾನೇ ಕೈಯಾರೆ ಉತ್ತು-ಬಿತ್ತು ಕೃಷಿ ಮಾಡುತ್ತಿದ್ದರು. ಅಂತೆಯೇ ದೊಡ್ಡ ದೈವಭಕ್ತ. ಹಾಗೆಯೇ ಬಡವರ ಕಷ್ಟಗಳಿಗೆ ಮರುಗುವ ಕರುಣಾಮಯಿ. ನಾನಾ ಪಾಟೇಕರ್‌ ಮೂಲತಃ ಮರಾಠಿ ರಂಗಭೂಮಿಯವರು. ನಂತರ ಮರಾಠಿ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದರು, ಹಿಂದಿಗೆ ಬರುವಾಗ ಅವರು ಯೌವನದ ಇಳಿಗಾಲದಲ್ಲಿದ್ದರು. ತಡವಾಗಿ ಬಂದರೂ ಬಾಲಿವುಡ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ ಪರಿ ಮಾತ್ರ ಅದ್ಭುತ. ಭಾರತೀಯ ಚಿತ್ರರಂಗ ಕಂಡ ಮೇರು ಪ್ರತಿಭೆ ನಾನಾ ಪಾಟೇಕರ್‌ ನಮ್ಮ ತುಳುನಾಡಿನ ಜೊತೆ ಅವಿನಾಭಾವವಾದ ಒಂದು ನಂಟನ್ನು ಹೊಂದಿದ್ದರು.

ಸುಧಾಕರ ಶೆಟ್ಟಿ ಎಂಬ ಬಾಲ್ಯದ ಗೆಳೆಯ

ಮುಂಬೈಯ ಮುದ್ರಣ ಕ್ಷೇತ್ರದಲ್ಲಿ ದೊಡ್ಡ ಹೆಸರಾಗಿರುವ ಮುಂಡ್ಕೂರು ಮುಲ್ಲಡ್ಕ ಸುಧಾಕರ ಶೆಟ್ಟಿ ಮತ್ತು ನಾನಾ ಪಾಟೇಕರ್‌ ಬಾಲ್ಯದ ಗೆಳೆಯರು ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಇಬ್ಬರೂ ಒಂದೇ ಗಲ್ಲಿಯಲ್ಲಿ ಆಡಿ ಬೆಳೆದವರು, ಇಬ್ಬರ ತಾಯಂದಿರೂ ಆತ್ಮೀಯ ಗೆಳತಿಯರು. ಮಾಟುಂಗಾಕ್ಕೆ ಸಮೀಪವಿರುವ ಮಾಹಿಮ್‌ನಲ್ಲಿ ವಾಸವಾಗಿದ್ದ ಕುಟುಂಬಗಳಿವು. ಬದುಕಿನಲ್ಲಿ ಇಬ್ಬರ ದಿಕ್ಕುಗಳು ಬೇರೆಯಾದರೂ ಬಾಲ್ಯದ ನಂಟು ಕಡಿದುಕೊಳ್ಳಲಿಲ್ಲ. ಈ ನಂಟು ನಾನಾ ಪಾಟೇಕರ್‌ ಅವರನ್ನು ಮುಂಡ್ಕೂರುವರೆಗೂ ಕರೆತಂದಿತು. ಮುಂಡ್ಕೂರು ದೇವಸ್ಥಾನದ ಪಕ್ಕ ಇರುವ ನಾನಾ ಪಾಟೇಕರ್‌ ಸಭಾಗೃಹ ನಾನಾ ಪಾಟೇಕರ್‌ ಕೊಡುಗೆ. ದೇವಸ್ಥಾನದ ಜೀರ್ಣೋದ್ಧಾರಕ್ಕೂ ಸಾಕಷ್ಟು ಯೋಗದಾನ ನೀಡಿದ್ದಾರೆ ನಾನಾಜೀ. ಮುಂಡ್ಕೂರಿಗೆ ಇತ್ತೀಚೆನವರೆಗೂ ಬಂದು ಹೋಗುತ್ತಿದ್ದರು. ಹಾಗೇ ಬಂದಾಗಲೆಲ್ಲ ತಂಗುತ್ತಿದ್ದದ್ದು ಸುಧಾಕರ ಶೆಟ್ಟಿಯವರ ಮಾವ ರಾಘು ಶೆಟ್ಟಿಯವರ ಮನೆಯಲ್ಲಿ.

ಕೋರಿ ರೊಟ್ಟಿ ಎಂದರೆ ಇಷ್ಟ

ತುಳುನಾಡಿನ ಜನಪ್ರಿಯ ಖಾದ್ಯ ಕೋರಿ ರೊಟ್ಟಿ ಎಂದರೆ ನಾನಾ ಪಾಟೇಕರ್‌ಗೆ ಬಲು ಇಷ್ಟ. ಮುಂಡ್ಕೂರಿಗೆ ಬಂದಾಗಲೆಲ್ಲ ಕೋರಿ ರೊಟ್ಟಿ ಔತಣ ಆಗಲೇ ಬೇಕು. ಅಲ್ಲದೆ ಸುಧಾಕರ್‌ ಶೆಟ್ಟಿಯವರು ಊರಿನಿಂದ ಮುಂಬಯಿಗೆ ಬರುವವರಲ್ಲಿ ನಾನಾ ಪಾಟೇಕರ್‌ಗಾಗಿಯೇ ಕೋರಿ ರೊಟ್ಟಿ ತರಿಸಿಕೊಡುತ್ತಿದ್ದರು.

ದಯಾ ನಾಯಕ್‌ಗೆ ಹಿರಿಯಣ್ಣ

ನಾನಾ ಪಾಟೇಕರ್‌ ಮತ್ತು ದಯಾ ನಾಯಕ್‌ ನಡುವಿನದ್ದು ಅಣ್ಣ-ತಮ್ಮನ ಸಂಬಂಧ. ನಾನಾ ಪಾಟೇಕರ್‌ ಅವರನ್ನು ದಯಾ ನಾಯಕ್‌ ಒಡಹುಟ್ಟಿದ ಅಣ್ಣ ಎಂದೇ ಭಾವಿಸಿದ್ದರು. ದಯಾ ನಾಯಕ್‌ ಅವರ ಎನ್‌ಕೌಂಟರ್‌ ಕಾರ್ಯಾಚರಣೆಗಳು ಮತ್ತು ಅದರಿಂದಾಗಿ ಬದುಕಿನಲ್ಲಿ ಎದುರಿಸಿದ ತೊಳಲಾಟಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟ ಅಬ್‌ ತಕ್‌ ಛಪ್ಪನ್‌ ಚಿತ್ರದಲ್ಲಿ ನಾನಾ ಪಾಟೇಕರ್‌ ಅವರೇ ದಯಾ ನಾಯಕ್‌ ಪಾತ್ರದಲ್ಲಿ ನಟಿಸಿದ್ದು ವಿಶೇಷ. ಈ ಚಿತ್ರ ತನ್ನ ವೃತ್ತಿ ಬದುಕಿನ ಅತಿ ಪ್ರಮುಖ ಚಿತ್ರ ಎಂದು ನಾನಾ ಪಾಟೇಕರ್‌ ಹೇಳಿಕೊಂಡಿದ್ದರು. ಆದರೆ ಈ ಚಿತ್ರಕ್ಕೂ ಮೊದಲೇ ಅವರ ನಡುವೆ ಮಧುರ ಬಾಂಧವ್ಯವೊಂದು ಇತ್ತು. ದಯಾ ನಾಯಕ್‌ ಬಗ್ಗೆ ಮಾತನಾಡುವಾಗಲೆಲ್ಲ ನಾನಾ ಪಾಟೇಕರ್‌ ಭಾವುಕರಾಗುತ್ತಿದ್ದರು. ದಯಾ ನಾಯಕ್‌ ವ್ಯವಸ್ಥೆಯ ಕ್ರೂರ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿರುವಾಗ ಸಂತೈಸಿದವರು ನಾನಾ ಪಾಟೇಕರ್‌. ನಿವೃತ್ತಿಯ ಆದ ಬೇರೆ ನೌಕರಿ ಹುಡುಕಬೇಡ ಎಂಬ ಹಿತವಚನವನ್ನೂ ಹೇಳಿದ್ದರು. ಇವರ ಸಂಬಂಧ 25 ವರ್ಷಗಳಿಗೂ ಹೆಚ್ಚಿನದ್ದು.

‘ನಾನಿದ್ದೇನೆ ಮಗಳೇ…’ – ಅಂತಾರಾಷ್ಟ್ರೀಯ ಪವರ್‌ಲಿಫ್ಟರ್ ಅಕ್ಷತಾಗೆ ಅಭಯವಿತ್ತ ನಟ

ತುಳುನಾಡಿನ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಹಾರಿಸಿದ ಹೆಮ್ಮೆಯ ಪವರ್‌ ಲಿಫ್ಟರ್ ಬೋಳ ಅಕ್ಷತಾ ಪೂಜಾರಿ ಅವರ ಬದುಕಿನ ಹಾದಿಯಲ್ಲಿ ಬೆಳಕಾಗಿ ನಿಂತವರು ಹಿರಿಯ ನಟ ನಾನಾ ಪಾಟೇಕರ್. ಮುಂಡ್ಕೂರಿಗೆ ಬಂದಾಗ ಅನಿರೀಕ್ಷಿತವಾಗಿ ಕುದುರಿದ ಆ ಪರಿಚಯ, ಕಾಲಕ್ರಮೇಣ ತಂದೆ-ಮಗಳಂತಹ ಅವಿನಾಭಾವ, ಗಾಢವಾದ ಬಂಧವಾಗಿ ಬೆಳೆಯಿತು.

​ಕಡುಬಡತನದ ಬೇಗೆಯಲ್ಲೂ ಅಸಾಧಾರಣ ಪ್ರತಿಭೆ ಮೆರೆದ ಈ ಹೆಣ್ಣುಮಗಳ ಕಷ್ಟಕ್ಕೆ ಮರುಗಿದ ನಾನಾಜೀ, “ಏನೇ ತೊಂದರೆ ಬರಲಿ, ನಾನಿದ್ದೇನೆ; ನೇರವಾಗಿ ನನ್ನ ಬಳಿಗೇ ಬಾ” ಎಂದು ಭರವಸೆಯ ಅಭಯಹಸ್ತ ನೀಡಿದವರು. ಅಕ್ಷತಾರ ಕ್ರೀಡಾ ಸಾಧನೆಗೆ ಬೆನ್ನೆಲುಬಾಗಿ ನಿಂತ ಅವರು, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಾಗಲಿ, ಅಭ್ಯಾಸಕ್ಕಾಗಿ ಮನೆಯಲ್ಲೇ ಒಂದು ಜಿಮ್ ನಿರ್ಮಿಸುವ ಹಂತದಲ್ಲಾಗಲಿ, ಯಾವುದೇ ಹಿಂಜರಿಕೆಯಿಲ್ಲದೆ ಉದಾರವಾಗಿ ನೆರವಾದರು. ತರಬೇತಿಗಾಗಿ ಅಕ್ಷತಾ ಪುಣೆಗೆ ತೆರಳಿದರೆಂದರೆ ಸಾಕು, ತಾವೇ ಖುದ್ದಾಗಿ ಹೋಗಿ ಮನೆಗೆ ಕರೆತಂದು ಪ್ರೀತಿಯಿಂದ ಸತ್ಕರಿಸುತ್ತಿದ್ದರು. ತಮ್ಮ ಮನೆಯ ಗಣೇಶೋತ್ಸವದ ಸಂಭ್ರಮದಲ್ಲೂ ಅಕ್ಷತಾಗೊಂದು ಗೌರವದ ಸ್ಥಾನ ಸದಾ ಕಾದಿರುತ್ತಿತ್ತು.

​”ನಾನೂ ಬಡತನದಲ್ಲೇ ಹುಟ್ಟಿ ಬೆಳೆದವನು, ಒಂದು ಗುಟುಕು ಚಹಾ ಕುಡಿಯಲೂ ಪರರ ಮುಂದೆ ಕೈಚಾಚಿದ ದಿನಗಳನ್ನು ಕಂಡವನು. ಬಡತನದ ಕಹಿ, ಆ ನೋವು, ಅನುಭವಿಸಿದ ಅವಮಾನಗಳೆಲ್ಲವೂ ನನಗೆ ಗೊತ್ತು; ನನ್ನಂತೆ ನೀನು ಕಷ್ಟಪಡಬಾರದು ಮಗಳೇ…” ಎಂದು ನಾನಾ ಪಾಟೇಕರ್ ಆಡುತ್ತಿದ್ದ ಪ್ರೀತಿಯ ನುಡಿಗಳನ್ನು ನೆನಪಿಸಿಕೊಳ್ಳುವಾಗ ಅಕ್ಷತಾ ಕಣ್ಣಲ್ಲಿ ನೀರು ಧಾರೆಯಾಗಿ ಇಳಿಯಿತು.

ಇಷ್ಟೆಲ್ಲಾ ಮಾಡಿದರೂ, ದೇಶ ಮೆಚ್ಚಿದ ಈ ಪ್ರತಿಭೆಗೆ ಕೊನೆಗೂ ಒಂದು ಸರ್ಕಾರಿ ಉದ್ಯೋಗ ಕೊಡಿಸಲು ಸಾಧ್ಯವಾಗಲಿಲ್ಲವಲ್ಲ ಎಂಬ ಒಂದು ತೀವ್ರ ಕೊರಗು ನಾನಾ ಪಾಟೇಕರ್ ಅವರ ಮನಸ್ಸಿನಲ್ಲಿ ಸದಾ ಉಳಿದುಕೊಂಡಿತ್ತು.

✍️ ಉಮಾಭಾರತಿ

















































error: Content is protected !!
Scroll to Top