ವಾಯುಪಡೆಯ ಮುಂದಿನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ನೇಮಕ

ಅ.31 ರಿಂದ ಅಧಿಕಾರ ಸ್ವೀಕಾರ

ನವದೆಹಲಿ: ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅವರನ್ನು ಭಾರತೀಯ ವಾಯುಪಡೆಯ ಮುಂದಿನ ಮುಖ್ಯಸ್ಥರನ್ನಾಗಿ ಮಾಡಲು ರಾಷ್ಟ್ರಪತಿಗಳ ಅನುಮೋದನೆ ದೊರೆತಿದೆ.

ಅ. 31 ರಿಂದ ಅವರು ಏರ್ ಚೀಫ್ ಮಾರ್ಷಲ್ ಹುದ್ದೆಯ ಪೂರ್ಣ ಶ್ರೇಣಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದು, 2028ರ ಡಿಸೆಂಬರ್ 31ರವರೆಗೆ ಅವರಿಗೆ ಅಧಿಕಾರಾವಧಿ ಇರಲಿದೆ. ಹಾಲಿ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರ ನಂತರ ಏರ್ ಮಾರ್ಷಲ್ ದೀಕ್ಷಿತ್ ವಾಯುಪಡೆಯ ಸಾರಥ್ಯ ವಹಿಸಲಿದ್ದಾರೆ.

ವಾಯುಪಡೆಯ ಸುಮಾರು ನಾಲ್ಕು ದಶಕಗಳ ಸೇವಾ ಅನುಭವ ಹೊಂದಿರುವ ದೀಕ್ಷಿತ್ ಅವರು ಯುದ್ಧವಿಮಾನಗಳಿಂದ ಹಿಡಿದು ಸಾರಿಗೆ ಹಾಗೂ ತರಬೇತಿ ವಿಮಾನಗಳವರೆಗೆ ವಿವಿಧ ಮಾದರಿಯ ವಿಮಾನಗಳನ್ನು ಹಾರಿಸಿರುವ ವಿಶೇಷ ಅನುಭವ ಹೊಂದಿದ್ದಾರೆ. ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಎಲ್‌ಸಿಎ ತೇಜಸ್, ಮಿರಾಜ್-2000, ಮಿಗ್ ಸರಣಿಯ ವಿವಿಧ ವಿಮಾನಗಳು, ಜಾಗ್ವಾರ್, ಹಾಕ್, ಎಎನ್-32, ಕಿರಣ್, ಐಎಲ್-78 ಸೇರಿದಂತೆ ಹಲವು ಪ್ರಮುಖ ವಿಮಾನಗಳಲ್ಲಿ ಅವರು ಹಾರಾಟ ನಡೆಸಿದ್ದಾರೆ. ವೃತ್ತಿಜೀವನದಲ್ಲಿ 3,500ಕ್ಕೂ ಅಧಿಕ ಗಂಟೆಗಳ ಹಾರಾಟ ಅನುಭವ ಹೊಂದಿದ್ದಾರೆ.

1986ರ ಡಿಸೆಂಬ‌ರ್ 6ರಂದು ವಾಯುಪಡೆಯ ಫೈಟರ್ ಸ್ಟ್ರೀಮ್‌ಗೆ ನಿಯೋಜಿತರಾದ ದೀಕ್ಷಿತ್, ಬಳಿಕ ವಿವಿಧ ಮಹತ್ವದ ಕಾರ್ಯಾಚರಣೆಗಳು ಮತ್ತು ಅಂತಾರಾಷ್ಟ್ರೀಯ ಮಟ್ಟದ ಸೇನಾ ಅಭ್ಯಾಸಗಳಲ್ಲಿ ಭಾಗವಹಿಸಿದ್ದಾರೆ. ಆಪರೇಷನ್‌ ಸಫೇದ್ ಸಾಗರ್, ಆಪರೇಷನ್ ರಕ್ಷಕ್, ಕೋಪ್ ಇಂಡಿಯಾ ಹಾಗೂ ಇತ್ತೀಚಿನ ಆಪರೇಷನ್ ಸಿಂಧೂ‌ರ್ ಸೇರಿದಂತೆ ಹಲವು ಪ್ರಮುಖ ಕಾರ್ಯಾಚರಣೆಗಳ ಅನುಭವ ಅವರಿಗಿದೆ.

ಪ್ರಾಯೋಗಿಕ ಪರೀಕ್ಷಾ ಪೈಲಟ್ ಹಾಗೂ ತರಬೇತಿ ವಿಮಾನ ಚಾಲಕರಾಗಿ ಪರಿಣತಿ ಹೊಂದಿರುವ ಅವರು, ವಾಯುಪಡೆಯ ಕಾರ್ಯಾಚರಣಾ ಸಾಮರ್ಥ್ಯ ಮಾತ್ರವಲ್ಲದೆ ತಾಂತ್ರಿಕ ಕ್ಷೇತ್ರದಲ್ಲೂ ಆಳವಾದ ಅನುಭವ ಹೊಂದಿದ್ದಾರೆ. ವಿಶೇಷವಾಗಿ ತೇಜಸ್ ಸೇರಿದಂತೆ ಸ್ವದೇಶಿ ವಿಮಾನ ಯೋಜನೆಗಳಿಗೆ ನೀಡಿರುವ ಒತ್ತು ಅವರ ಮುಂದಿನ ಜವಾಬ್ದಾರಿಯಲ್ಲೂ ಮಹತ್ವ ಪಡೆಯುವ ಸಾಧ್ಯತೆಯಿದೆ ಎನ್ನುವುದನ್ನು ಅಲ್ಲಗಳೆಯುವ ಹಾಗಿಲ್ಲ.













































error: Content is protected !!
Scroll to Top