ಉಡುಪಿ: ಇಂದ್ರಾಳಿ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನಿಂದ ಕೆಳಕ್ಕೆ ಬಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ನವದೆಹಲಿ – ಎರ್ನಾಕುಳಂ ನಡುವೆ ಸಂಚರಿಸುವ ರೈಲಿನಲ್ಲಿ ಈ ಘಟನೆ ನಡೆದಿದೆ. ಇಂದ್ರಾಳಿ ರೈಲು ನಿಲ್ದಾಣದ ಸಮೀಪ ಟ್ರೈನ್ ನಿಧಾನವಾಗಿ ಚಲಿಸುತ್ತಿದ್ದ ವೇಳೆ ಎರಡನೇ ಭೋಗಿಯಲ್ಲಿದ್ದ ವ್ಯಕ್ತಿ ಕೆಳಕ್ಕೆ ಬಿದ್ದು ಮೃತಪಟ್ಟಿರುವುದಾಗಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ರೈಲ್ವೆ ಆರ್‌ಪಿಎಫ್ ಸಿಬ್ಬಂದಿಯು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದಾರೆ. ಅವರು ಸ್ಥಳಕ್ಕೆ ಧಾವಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ತಕ್ಷಣ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.

ಮೃತರ ಬಳಿ ಪತ್ತೆಯಾದ ಮತದಾರರ ಗುರುತಿನ ಚೀಟಿಯಲ್ಲಿ ದಿನೇಶ್, ಬೆಳ್ತಂಗಡಿ ತಾಲೂಕಿನ ಹೊಸಂಗಡಿ ನಿವಾಸಿ ಎಂಬ ವಿಳಾಸ ಮಾಹಿತಿ ಇದೆ ಎಂದು ತಿಳಿದು ಬಂದಿದೆ.




















