ನವದೆಹಲಿ: ಮಹಿಳೆಯರು, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ದುಷ್ಟರನ್ನು ಮಟ್ಚ ಹಾಕುವ ನಿಟ್ಟಿನಲ್ಲಿ ನವದೆಹಲಿಯಲ್ಲಿ ಪೊಲೀಸ್ ಇಲಾಖೆ ಕಠಿಣ ಮತ್ತು ಬಲವಾದ ಕಾರ್ಯತಂತ್ರ ಅಳವಡಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಹೇಳಿದೆ.
ಪುರುಷರಲ್ಲಿ ಲೈಂಗಿಕ ಅಪರಾಧ ಎಸಗಲು ಭಯ ಹುಟ್ಟುವಂತೆ ಕ್ರಮ ಕೈಗೊಳ್ಳುವಂತೆ ಕೋರ್ಟ್ ಸೂಚಿಸಿದೆ.
ವಿಕೃತರು ವಿದ್ಯಾರ್ಥಿನಿಯರನ್ನು ನಿರಂತರವಾಗಿ ಕಾಟ ನೀಡುವ ಕಾಲೇಜುಗಳ ಮೇಲೆ ಮೊದಲು ಗಮನಹರಿಸಬೇಕು. ಸಮಾಜವಿರೋಧಿ ಶಕ್ತಿಗಳು ಸೇರಿ ಮದ್ಯಪಾನ ಮಾಡುವ ದೆಹಲಿಯಾದ್ಯಂತ ಇರುವ ಸಾವಿರಾರು ಅಕ್ರಮ ತಿನಿಸಿನ ಅಂಗಡಿಗಳ ಮೇಲೆ ಗಮನಹರಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ

ಇತ್ತೀಚೆಗೆ ನವದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವರದಿಯಾದ ಅತ್ಯಾಚಾರ ಪ್ರಕರಣಗಳ (ಸ್ವೀಪರ್ ಬಸ್‌ನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವೂ ಸೇರಿದಂತೆ) ಕುರಿತು ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೊಂಡಿರುವ ಸುಪ್ರೀಂ ಕೋರ್ಟ್, ಈವರೆಗೆ ನೀಡಿರುವ ನಿರ್ದೇಶನಗಳ ಪೈಕಿ ಅತ್ಯಂತ ಸ್ಪಷ್ಟವಾದ ನಿರ್ದೇಶನವೊಂದನ್ನು ನೀಡಿರುವುದಾಗಿದೆ.
ಲೈಂಗಿಕ ಅಪರಾಧ ಎಸಗಿದರೆ ಖಂಡಿತವಾಗಿಯೂ ಸಾವನ್ನು ಎದುರಿಸಬೇಕಾಗುತ್ತದೆ ಎಂಬ ಭಯವನ್ನು ಸಮಾಜಘಾತುಕ ಶಕ್ತಿಗಳ ಮನಸ್ಸಿನಲ್ಲಿ ಪೊಲೀಸರು ಮೂಡಿಸದ ಹೊರತು ಅಂದರೆ “ಏನಾದರೂ ಮಾಡಿದರೆ ಸಾಯುತ್ತೇವೆ” ಎಂಬ ಭಾವನೆ ಬರುವಂತಾಗದ ಹೊರತು ಇಂತಹ ಅಪರಾಧಗಳು ನಡೆಯುತ್ತಲೇ ಇರುತ್ತವೆ ಎಂದು ನ್ಯಾಯಾಲಯ ತಿಳಿಸಿದೆ.
ಲೈಂಗಿಕ ಆರೋಪಿಗಳು, ಆರೋಪ ಗಳ ವಿರುದ್ಧ ಕಠಿಣ ಮತ್ತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಪೊಲೀಸರಿಗೆ ತಿಳಿಸಿದೆ.





















