ಬೆಳ್ತಂಗಡಿಯ ಬಾಲಕ ಪಣಂಬೂರು ಬೀಚ್‌ನಲ್ಲಿ ಸಮುದ್ರಪಾಲು

ಹೆದರಿ ತಂದೆಗೆ ವಿಷಯ ತಿಳಿಸದೆ ಮುಚ್ಚಿಟ್ಟ ಸ್ನೇಹಿತರು

ಮಂಗಳೂರು: ಬೆಳ್ತಂಗಡಿ ಮೂಲದ 14 ವರ್ಷದ ಬಾಲಕನೊಬ್ಬ ಭಾನುವಾರ ಸಂಜೆ ಪಣಂಬೂರು ಬೀಚ್‌ನಲ್ಲಿ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಸಮುದ್ರಪಾಲಾಗಿದ್ದು, ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆದರೆ ಸೋಮವಾರ ರಾತ್ರಿ ತನಕ ಬಾಲಕನ ಮೃತದೇಹ ಪತ್ತೆಯಾಗಿರಲಿಲ್ಲ.

ನಾಪತ್ತೆಯಾದ ಬಾಲಕನನ್ನು ಬೆಳ್ತಂಗಡಿ ತಾಲೂಕಿನ ಕಸಬಾ ಗ್ರಾಮದ ರೆಂಕೆದ ಗುತ್ತು ನಿವಾಸಿ ಸೇಸಪ್ಪ ಎಂಬವರ ಪುತ್ರ ಶ್ರೇಯಸ್ (14) ಎಂದು ಗುರುತಿಸಲಾಗಿದೆ.

ಶ್ರೇಯಸ್ ಐವರು ಸ್ನೇಹಿತರೊಂದಿಗೆ ಬೀಚ್‌ಗೆ ಭೇಟಿ ನೀಡಿದ್ದ. ನೀರಿನಲ್ಲಿ ಆಟವಾಡುತ್ತಿದ್ದಾಗ ಈ ವೇಳೆ ಸಮುದ್ರದ ಭಾರಿ ಅಲೆಯ ಹೊಡೆತಕ್ಕೆ ಸಿಲುಕಿ ಆತ ಸಮುದ್ರ ಪಾಲಾಗಿದ್ದಾನೆ‌ ಎಂದು ಹೇಳಲಾಗಿದೆ. ಎಲ್ಲರೂ ಅಪ್ರಾಪ್ತ ವಯಸ್ಸಿನವರು.

ಶ್ರೇಯಸ್‌ ಸ್ನೇಹಿತರೊಂದಿಗೆ ನವರಾತ್ರಿಗೆ ಹುಲಿವೇಷ ಹಾಕುವ ಸಲುವಾಗಿ ಬೆಳ್ತಂಗಡಿಯಿಂದ ಮಂಗಳೂರಿಗೆ ಬಂದಿದ್ದ. ಭಾನುವಾರ ಅಭ್ಯಾಸ ಮುಗಿದ ಬಳಿಕ ಐವರು ಸ್ಟೇಟ್‌ಬ್ಯಾಂಕ್‌ನಿಂದ ಬಸ್‌ ಹತ್ತಿ ಪಣಂಬೂರು ಬೀಚ್‌ಗೆ ತೆರಳಿದ್ದರು. ಸ್ನೇಹಿತರ ಕಣ್ಣೆದುರೇ ಶ್ರೇಯಸ್‌ ನೀರುಪಾಲಾಗಿದ್ದು, ಇದನ್ನು ನೋಡಿ ಹೆದರಿ ದಿಗ್ಭ್ರಾಂತರಾಗಿದ್ದ ಸ್ನೇಹಿತರು ಈ ವಿಚಾರವನ್ನು ಶ್ರೇಯಸ್‌ನ ತಂದೆ ಸಹಿತ ಯಾರಿಗೂ ತಿಳಿಸಿರಲಿಲ್ಲ. ಸ್ಥಳೀಯರು ಪೊಲೀಸರಿಗೆ ತಿಳಿಸಿದ ಬಳಿಕ ವಿಷಯ ಬೆಳಕಿಗೆ ಬಂದಿದೆ.

ಶ್ರೇಯಸ್ ತಂದೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಮಗ ನಾಪತ್ತೆಯಾಗಿರುವ ದೂರು ದಾಖಲಿಸಿದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಪತ್ತೆಯಾದ ಬಾಲಕ ಪತ್ತೆಗೆ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.











































error: Content is protected !!
Scroll to Top