ರಾತ್ರಿ ಡ್ರಗ್ಸ್ ಪಾರ್ಟಿಯಲ್ಲಿ ನಡೆದ ಬೆಚ್ಚಿಬೀಳಿಸುವ ಕೃತ್ಯ
ಬೆಂಗಳೂರು: ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಜಿಮ್ ಟ್ರೈನರ್ ನಂದನ್ ಎಂಬವರ ಕೊಲೆ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಅಂಶಗಳು ಬೆಳಕಿಗೆ ಬಂದಿವೆ. ಜಿಮ್ ಆ್ಯನಿವರ್ಸರಿ ಪಾರ್ಟಿ ನೆಪದಲ್ಲಿ ನಡೆದ ಈ ಕೃತ್ಯದಲ್ಲಿ ಸಲಿಂಗಕಾಮ, ಅತಿಯಾದ ಡ್ರಗ್ಸ್ ಸೇವನೆ ಮತ್ತು ಮಾರಣಾಂತಿಕ ಹಲ್ಲೆ ನಡೆದಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಶೆಟ್ಟಿ ಎಂಬಾತನಿಗೆ ನಂದನ್ ಪರ್ಸನಲ್ ಜಿಮ್ ಟ್ರೈನರ್ ಆಗಿದ್ದರು. ಜಿಮ್ ಆ್ಯನಿವರ್ಸರಿ ಹಿನ್ನೆಲೆಯಲ್ಲಿ ಅನುಷ್ ಶೆಟ್ಟಿ ಕೆಂಪಾಪುರದಲ್ಲಿರುವ ತನ್ನ ಫ್ಲ್ಯಾಟ್‌ನಲ್ಲಿ ಪಾರ್ಟಿ ಆಯೋಜಿಸಿ ನಂದನ್ ಸೇರಿದಂತೆ ಜಿಮ್‌ನ ನಾಲ್ವರು ಟ್ರೈನರ್‌ಗಳನ್ನು ಆಹ್ವಾನಿಸಿದ್ದ.

ಪಾರ್ಟಿಯಲ್ಲಿ ಭಾರೀ ಪ್ರಮಾಣದಲ್ಲಿ ಡ್ರಗ್ಸ್ ಮತ್ತು ಮದ್ಯ ಸೇವಿಸಿದ್ದರು ಎನ್ನಲಾಗಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ ವೇಳೆ ಡ್ರಗ್ಸ್ ಬಳಕೆಗೆ ಸಂಬಂಧಿಸಿದ ವಸ್ತುಗಳು ಪತ್ತೆಯಾಗಿದ್ದು, ಎಲ್ಲರೂ ನಶೆಯಲ್ಲಿದ್ದದ್ದು ಮೇಲ್ನೋಟಕ್ಕೆ ದೃಢಪಟ್ಟಿದೆ.
ಪೊಲೀಸ್ ಮೂಲಗಳ ಪ್ರಕಾರ, ತಡರಾತ್ರಿ ನಶೆಯಲ್ಲಿದ್ದ ವೇಳೆ ವಿಶ್ವನಾಥ್ ಎಂಬಾತ ನಂದನ್‌ಗೆ ಕಿಸ್ ಮಾಡಲು ಶುರುಮಾಡಿದ್ದಾನೆ. ಬಳಿಕ ಅಲ್ಲಿ ನೆರೆದಿದ್ದವರು ನಂದನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ವಿಶ್ವನಾಥ್ ಮತ್ತು ನಂದನ್ ನಡುವೆ ತೀವ್ರ ಗಲಾಟೆ ನಡೆದಿದೆ.
ನಂದನ್ ಮೃತದೇಹದ ಹಲವು ಭಾಗಗಳಲ್ಲಿ ಆಳವಾದ ಕಚ್ಚಿದ ಗುರುತುಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕೇವಲ ಜಗಳವಾದರೆ ಒಂದೆರಡು ಕಡೆ ಗಾಯಗಳಾಗುವ ಸಾಧ್ಯತೆ ಇರುತ್ತದೆ. ಆದರೆ ದೇಹದ ವಿವಿಧ ಭಾಗಗಳಲ್ಲಿ ಕಚ್ಚಿದ ಗುರುತುಗಳಿರುವುದು ಲೈಂಗಿಕ ದೌರ್ಜನ್ಯದ ವೇಳೆ ತೀವ್ರ ಸಂಘರ್ಷ ನಡೆದಿರುವುದನ್ನು ಪುಷ್ಟೀಕರಿಸುತ್ತಿದೆ. ಜಗಳ ವಿಕೋಪಕ್ಕೆ ತಿರುಗಿ ನಂದನ್‌ನ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.
ಘಟನೆ ಬಳಿಕ ಅನುಷ್ ಶೆಟ್ಟಿ ಪೊಲೀಸರಿಗೆ ವಿಚಿತ್ರ ಹೇಳಿಕೆ ನೀಡಿದ್ದಾನೆ. ರಾತ್ರಿ ನಾನೇ ಪಾರ್ಟಿಗೆ ಕರೆದಿದ್ದೆ, ಆದರೆ ರಾತ್ರಿ ಏನು ನಡೆಯಿತೋ ನನಗೆ ಗೊತ್ತಿಲ್ಲ. ನಾನು ಬೇರೆ ಕೋಣೆಯಲ್ಲಿ ಮಲಗಿದ್ದೆ. ಬೆಳಗ್ಗೆ ಎದ್ದು ನೋಡಿದಾಗ ನಂದನ್ ತಲೆಯಿಂದ ರಕ್ತ ಸೋರುತ್ತಿತ್ತು, ಕೂಡಲೇ ಆಸ್ಪತ್ರೆಗೆ ದಾಖಲಿಸಿದೆ ಎಂದು ಹೇಳಿಕೊಂಡಿದ್ದಾನೆ.
ಸ್ವತಃ ಪಾರ್ಟಿ ಆಯೋಜಿಸಿ, ಮನೆಯಲ್ಲೇ ಇಷ್ಟೆಲ್ಲಾ ರಾದ್ಧಾಂತ ನಡೆದಿದ್ದರೂ ನನಗೇನೂ ಗೊತ್ತಿಲ್ಲ ಎನ್ನುತ್ತಿರುವ ಅನುಷ್ ಶೆಟ್ಟಿಯ ಹೇಳಿಕೆಯನ್ನು ಪೊಲೀಸರು ನಂಬುತ್ತಿಲ್ಲ. ಅಮೃತಹಳ್ಳಿ ಠಾಣೆ ಪೊಲೀಸರು ಮರಣೋತ್ತರ ಪರೀಕ್ಷೆಯ ಅಂತಿಮ ವರದಿಗಾಗಿ ಕಾಯುತ್ತಿದ್ದು, ಪಾರ್ಟಿಯಲ್ಲಿದ್ದ ಅನುಷ್ ಶೆಟ್ಟಿ, ವಿಶ್ವನಾಥ್ ಸೇರಿದಂತೆ ಇತರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.





















