ಕರ್ನಾಟಕ ಮಲ್ಲ ಪತ್ರಿಕೆಯ ಮಾಲಕ ಮುರಳೀಧರ ಶಿಂಗೋಟೆ ನಿಧನ

ಪುಣೆ, ಆ. 6- ಕರ್ನಾಟಕ ಮಲ್ಲ ಸಮೂಹ ಪತ್ರಿಕೆ ಹಾಗೂ ಅಂಬಿಕಾ ಪ್ರಿಂಟರ್ಸ್ & ಪಬ್ಲಿಕೇಶನ್ ನ ಸ್ಥಾಪಕ ಹಾಗೂ ಮಾಲಕರಾದ ಮುರಳೀಧರ ಅನಂತ ಬಾಬಾ ಶಿಂಗೋಟೆ (82) ಇಂದು ಮಧ್ಯಾಹ್ನ 1 ಗಂಟೆಗೆ ಪುಣೆಯ ಜುನ್ಹಾರ್ ತಾಲೂಕಿನ ಗಾಯ್ಮುಖ್ ವಾಡಿಯಲ್ಲಿ  ನಿಧನರಾಗಿದ್ದಾರೆ.

1938, ಮಾ.7ರಂದು  ಪುಣೆಯ ಜುನ್ಹಾರ್ ತಾಲೂಕಿನ ಉಮ್ರಾಜ್ ಗಾಂವ್ ನಲ್ಲಿ ಜನಿಸಿ, ಕೇವಲ ನಾಲ್ಕನೇ ತರಗತಿಯ ಪ್ರಾಥಮಿಕ ಶಿಕ್ಷಣವನ್ನು ಪಡೆದು, ಬದುಕನ್ನು ಅರಸುತ್ತಾ ಮುಂಬಯಿಗೆ ಬಂದ ಶಿಂಗೋಟೆಯವರು, ಇಲ್ಲಿಯ ಪ್ರಸಿದ್ಧ ದಾಂಗಟ್ ಏಜೆನ್ಸಿಯಲ್ಲಿ ಪತ್ರಿಕಾ ವಿತರಣೆಯ ಕೆಲಸವನ್ನು ಮಾಡಿದರು.

ಮುಂದೆ ಜನಸಾಮಾನ್ಯರು ಓದುವಂತಹ ಪೇಪರ್ ಮಾಡುವ ಕನಸು ಕಂಡ ಅವರು  ಮೊದಲ ಸಂಯುಕ್ತ ಮಹಾರಾಷ್ಟ್ರ ಆಂದೋಲನದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು.

ತನ್ನ ಕನಸಿನ ಕೂಸಾಗಿ ಮೊದಲ ಸಂಜೆ ದೈನಿಕವಾಗಿ ‘ಮುಂಬಯಿ ಚೌಫೇರ್’ ರನ್ನು 1994 ಮುದ್ರಿಸಿ, ತದನಂತರ ‘ಅಪ್ಲಾ ವಾರ್ತಾಹಾರ್’, ಎಂಬ ದೈನಿಕ ವನ್ನು, ಮುಂದೆ ‘ಯಶೋಭೂಮಿ’ ಹಿಂದಿ ದೈನಿಕ, ‘ಕರ್ನಾಟಕ ಮಲ್ಲ’ ಕನ್ನಡ ದೈನಿಕ, ‘ಪುಣ್ಯ ನಗರಿ’ ಮರಾಠಿ ದೈನಿಕ, ‘ತಮಿಳ್ ಟೈಮ್ಸ್’ ತಮಿಳು ದೈನಿಕಗಳ ಪ್ರಕಟನೆ ಪ್ರಾರಂಭಿಸಿದರು.ಮುಂದಿನ ದಿನಗಳಲ್ಲಿ  ಸುಸಜ್ಜಿತ ಮದ್ರಣಾಲಯವನ್ನು ಸ್ಥಾಪಿಸಿ  ಅನೇಕ ಪತ್ರಿಕೆಗಳ  ಮುದ್ರಣಕ್ಕೆ ಅವಕಾಶ ಮಾಡಿಕೊಟ್ಟರು.

ಕರ್ನಾಟಕ ಮಲ್ಲ ದಿನ ಪತ್ರಿಕೆಯ ಸ್ಥಾಪಕ ಮಾಲಕರಾಗಿದ್ದ  ದಿ. ಎಂ. ಮಲ್ಲಿಕಾರ್ಜುನಯ್ಯ ನವರು ಮುಂದೆ ಪತ್ರಿಕೆ ನಡೆಸಲು ಸಾಧ್ಯವಾಗದ ಹೊತ್ತು, ಮುಂಬಯಿ ಮಹಾನಗರದಲ್ಲಿ ತಾನೋರ್ವ ಮರಾಠಿಗರಾಗಿದ್ದರೂ, ಕೂಡಾ ಕನ್ನಡ ಪತ್ರಿಕೆಗೆ ಮಾನ್ಯತೆಯನ್ನು ನೀಡಿ ಅದನ್ನು ಖರೀದಿಸಿ, ಕಟ್ಟಿ, ಬೆಳೆಸಿ ಮಹಾನಗರದಲ್ಲಿ ಕನ್ನಡ ಭಾಷೆಯ ಹಾಗೂ ಸಂಸ್ಕೃತಿಯ ಏಳಿಗೆಗೆ ಅಮೂಲ್ಯ  ಕೊಡುಗೆಯನ್ನು ನೀಡಿ ಕನ್ನಡಿಗರ ಪ್ರೀತಿ ಪಾತ್ರರಾಗಿದ್ದರು.

ತನ್ನ ಸಂಸ್ಥೆಯ ನೌಕರರನ್ನು ಪಿತೃಭಾವದಿಂದ ನೋಡುತ್ತಿದ್ದರು  ಹಾಗೂ ಅವರ ಸುಖಕಷ್ಟಗಳಿಗೆ ತ್ವರಿತವಾಗಿ ಸ್ಪಂದಿಸುತ್ತಿದ್ದರು.ನೌಕರರ ಪಾಲಿಗೆ ಪ್ರೀತಿಯ    “ಬಾಬಾ” (ಮರಾಠಿಯಲ್ಲಿ ‘ಬಾಬಾ’ ಅಂದರೆ ತಂದೆ) ಆಗಿದ್ದರು.

ಅವರು ಮಕ್ಕಳಾದ ಅರವಿಂದ ಮುರಳೀಧರ ಶಿಂಗೋಟೆ, ಪ್ರವೀಣ್ ಮುರಳೀಧರ ಶಿಂಗೋಟೆ, ಸಂದೀಪ್ ಮುರಳೀಧರ ಶಿಂಗೋಟೆ ಹಾಗೂ ಬಂಧು-ಬಳಗವನ್ನು ಅಗಲಿದ್ದಾರೆ.

ಪತ್ರಿಕೋದ್ಯಮ ಕ್ಷೇತ್ರಕ್ಕೆ ಅದ್ವಿತೀಯ ಕೊಡುಗೆ ನೀಡಿದ ಅಮರ ಚೇತನ ಮುರಳೀಧರ ಅನಂತ ಬಾಬಾ ಶಿಂಗೋಟೆಯವರ ನಿಧನಕ್ಕೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ ಠಾಕ್ರೆ ಸೇರಿ ಹಲವು ರಾಜಕೀಯ ಗಣ್ಯರು ಶಿಂಗೋಟೆಯವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಮಲ್ಲ ದೈನಿಕದ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ, ಸಿಬ್ಬಂದಿ ವರ್ಗ, ಜಾಹೀರಾತು ಏಜೆಂಟರು ಹಾಗೂ ಶ್ರೀ ಅಂಬಿಕಾ ಪ್ರಿಂಟರ್ಸ್ & ಪಬ್ಲಿಕೇಶನ್ ನ ಸಿಬ್ಬಂದಿ ವರ್ಗ ದುಃಖ ಸೂಚಿಸಿದ್ದಾರೆ.

ವರದಿ:ಭಾರತಿ ಉಮೇಶ್ ಕೋಟ್ಯಾನ್

 









































error: Content is protected !!
Scroll to Top