ಸ್ವರಮಾಂತ್ರಿಕ ಇನ್ನು ನೆನಪು ಮಾತ್ರ
ಬಡಗುತಿಟ್ಟಿನ ಸ್ಟಾರ್ ಭಾಗವತರು, ನಿಜಾರ್ಥದಲ್ಲಿ ರಂಗದ ನಿರ್ದೇಶಕ, ದಶಕಗಳ ಕಾಲ ಪೆರ್ಡೂರು ಮೇಳದ ಯಕ್ಷ ವೇದಿಕೆಯಲ್ಲಿ ‘ಮಾ ನಿಷಾದ’ ‘ರಂಗ ನಾಯಕಿ ‘ಮೊದಲಾದ ಮೌಲ್ಯಯುತವಾದ ಪ್ರಸಂಗಗಳ ನಿರ್ದೇಶಕ ಸುಬ್ರಹ್ಮಣ್ಯ ಧಾರೇಶ್ವರ ಇಂದು ನಿಧನರಾಗಿದ್ದಾರೆ. ಕಾಳಿಂಗ ನಾವಡರ ಸಮಕಾಲೀನರಾದ ಧಾರೇಶ್ವರರು ಅವರಷ್ಟೇ ಸಿದ್ಧಿ ಮತ್ತು ಕೀರ್ತಿಯನ್ನು ಹೊಂದಿದ್ದರು. ಯಕ್ಷಗಾನದ ಯಾವುದೇ ಪ್ರಯೋಗಗಳು ಸಂಪ್ರದಾಯದ ಚೌಕಟ್ಟು ಮೀರಬಾರದು ಎಂದು ಬಲವಾಗಿ ನಂಬಿದವರು ಅವರು.
ಯಕ್ಷಗಾನದ ಮೇರು ಭಾಗವತರಾದ ನಾರಣಪ್ಪ ಉಪ್ಪೂರು ಅವರ ನೇರ ಶಿಷ್ಯರಾಗಿ ಗುರು ಶಿಷ್ಯ ಪರಂಪರೆಯ ಅನನ್ಯ ವಾರಸುದಾರರಾಗಿ ಕಲೆಯನ್ನು ಬೆಳೆಸಿದವರು ಅವರು. ಹಂಗಾರಕಟ್ಟೆಯ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗುರು ಆಗಿ ನೂರಾರು ಶಿಷ್ಯರನ್ನು ಬೆಳೆಸಿದ ಕೀರ್ತಿ ಕೂಡ ಅವರಿಗೆ ಸಲ್ಲುತ್ತದೆ. ಒಟ್ಟು 46 ವರ್ಷಗಳ ಕಾಲ ಅಮೃತೇಶ್ವರಿ ಮತ್ತು ಪೆರ್ಡೂರು ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ಮೆರೆದ ದಾಖಲೆ ಅವರದ್ದು. ಅದರಲ್ಲಿ ಕೂಡ 28 ವರ್ಷ ಪೆರ್ಡೂರು ಮೇಳದಲ್ಲಿ ಸುವರ್ಣ ಯುಗಕ್ಕೆ ಸಾಕ್ಷಿ ಆದವರು ಅವರು. ಮೇಳದ ಎಲ್ಲ ಕಲಾವಿದರ ಜೊತೆಗೆ ಅವರ ಸಂಬಂಧಗಳು, ಮಾಲಿಕರ ಜೊತೆಗೆ ಅವರಿಗೆ ಇದ್ದ ಒಡನಾಟ ಇವುಗಳನ್ನು ಕೊನೆಯವರೆಗೆ ಅವರು ಉಳಿಸಿಕೊಂಡವರು.


ಎಲ್ಲ ಪೌರಾಣಿಕ ಪ್ರಸಂಗಗಳ ಚಂದೋಬದ್ದ ಹಾಡುಗಳು, ಕವಿರತ್ನ ಕಾಳಿದಾಸ ಪ್ರಸಂಗದ ಸಾವೇ ಇಲ್ಲದ ಹಾಡುಗಳು, ಬೊಟ್ಟಿಕೆರೆ ಪುರುಷೋತ್ತಮ ಪೂಂಜಾ ರಚನೆ ಮಾಡಿದ ಮಾ ನಿಷಾದ ಪ್ರಸಂಗದ ಹಾಡುಗಳು, ಅವರೇ ನಿರ್ದೇಶನ ಮಾಡಿದ ನಾಗವಲ್ಲಿ ಪ್ರಸಂಗದ ಹಾಡುಗಳು ಅವರಿಗೆ ಭಾರೀ ಕೀರ್ತಿ ತಂದವು.
ಕಾಳಿಂಗ ನಾವಡ ಮತ್ತು ಸುಬ್ರಹ್ಮಣ್ಯ ಧಾರೇಶ್ವರ ಅವರು ಇಬ್ಬರೂ ಒಂದೇ ಗುರುವಿನ ಬಳಿ ಭಾಗವತಿಕೆ ಕಲಿತವರು. ಅವರೆಂದಿಗೂ ಸ್ಪರ್ಧೆಗೆ ಇಳಿದವರಲ್ಲ. ಗೆಳೆತನ ಸಂಬಂಧ ಕೆಡಿಸಿಕೊಳ್ಳಲಿಲ್ಲ. ಕಾಳಿಂಗ ನಾವಡರು ಸಂಪ್ರದಾಯದ ಚೌಕಟ್ಟುಗಳನ್ನು ಮೀರಿ ಬೆಳೆದರು. ನಮ್ಮ ಸುಬ್ರಹ್ಮಣ್ಯ ಧಾರೇಶ್ವರರು ಸಂಪ್ರದಾಯದ ಚೌಕಟ್ಟು ಮೀರುವ ಮನಸ್ಸು ಮಾಡಲಿಲ್ಲ. ಹಾಗೆಂದು ಪ್ರಯೋಗಶೀಲತೆಯಲ್ಲಿ ಹಿಂದೆ ಬೀಳಲಿಲ್ಲ. ಜಾನಪದ ಹಾಡುಗಳು, ಲಾವಣಿ ಹಾಡುಗಳು, ಗೀಗೀ ಪದಗಳು ಇವೆಲ್ಲವನ್ನೂ ರಂಗದ ಮೇಲೆ ತಂದರು. ಅವರು ಹಾಡಿದ ಕೊರವಂಜಿಯ ಹಾಡುಗಳು, ಕವಿರತ್ನ ಕಾಳಿದಾಸ ಪ್ರಸಂಗದ ಜಾನಪದ ಹಾಡುಗಳು, ಮಾಣಿಕ್ಯ ವೀಣಾ ಶ್ಲೋಕ…… ಇವುಗಳು ಲೋಕ ವಿಖ್ಯಾತಿಯನ್ನು ಪಡೆದವು.
ನಾವಡರದು ವೇಗವಾಗಿ ಹರಿಯುವ ಅಮೆಜಾನ್ ನದಿ ಆದರೆ ಧಾರೇಶ್ವರ ಅವರದ್ದು ನಿಧಾನವಾಗಿ ಹರಿಯುವ ಯಮುನೆ ಎನ್ನುವುದು ರೂಪಕ.
ಶುದ್ಧ ಶಾಸ್ತ್ರೀಯ ನೆಲೆಗಟ್ಟಿನ ಪರಂಪರೆಯ ಭಾಗವತರು ಅವರು. ರಂಗದ ಶಿಸ್ತನ್ನು ಎಂದಿಗೂ ಮೀರಿದವರು ಅಲ್ಲ. ಬೇರೆಯವರು ಮೀರಿದರೆ ಸಹಿಸಿದವರೂ ಅಲ್ಲ. ಯಾವ ಸ್ಟಾರ್ ಕಲಾವಿದರಾದರೂ ಭಾಗವತರ ನಿರ್ದೇಶನವನ್ನು ಮೀರುವುದು ಅವರಿಗೆ ಸಮ್ಮತವು ಆಗಿರಲಿಲ್ಲ. ಕಿರಿಯ ಪ್ರತಿಭೆಗಳನ್ನು ಹೇಗೆ ಬೆಳೆಸಬೇಕು ಎಂದು ಯಾರಾದರೂ ಅವರಿಂದ ಕಲಿಯಬೇಕು. ನಿವೃತ್ತಿ ಪಡೆದು ಹೋದನಂತರ ಕೂಡ ಪೆರ್ಡೂರು ಮೇಳದ ಆಡಳಿತ ಅವರ ಸೇವೆಯನ್ನು ಬಯಸಿದಾಗ ಧಾರೇಶ್ವರರು ಓಡೋಡಿ ಬರುತ್ತಿದ್ದರು.



































































