ಶಾಸಕ ಸುನೀಲ್ ಕುಮಾರ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್: ಆರೋಪಿ ಪ್ರಸಾದ್ ಶೆಟ್ಟಿ ಅಂದರ್

ಶಾಸಕರ ತಲೆ ಕತ್ತರಿಸುವ ಚಿತ್ರ ಪೋಸ್ಟ್ ಮಾಡಿ ಸಾಮಾಜಿಕ ಶಾಂತಿ ಕದಡಲು ಯತ್ನಿಸಿದ ಆರೋಪಿ

ಕಾರ್ಕಳ: ಶಾಸಕ ಸುನೀಲ್ ಕುಮಾರ್ ಅವರ ತಲೆ ಕತ್ತರಿಸಿರುವಂತೆ ಚಿತ್ರವನ್ನು ಬಳಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಹಾಗೂ ಹಲ್ಲೆಗೆ ಪ್ರಚೋದಿಸುವ ರೀತಿಯಲ್ಲಿ ವಿಡಿಯೋ ಸೃಷ್ಟಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಆರೋಪದಡಿ ಪ್ರಸಾದ್ ಶೆಟ್ಟಿ ಎಂಬಾತನನ್ನು ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾರ್ಕಳ ತಾಲೂಕು ನಿವಾಸಿ ವಿಘ್ನೇಶ್ ಪ್ರಸಾದ್ ರಾವ್ ಅವರು ಫೇಸ್ಬುಕ್ ನೋಡುತ್ತಿದ್ದ ಸಂದರ್ಭದಲ್ಲಿ ‘Prasad Shetty’ ಹೆಸರಿನ ಖಾತೆಯಲ್ಲಿ ಶಾಸಕ ಸುನೀಲ್ ಕುಮಾರ್ ಅವರ ತಲೆ ಕತ್ತರಿಸಿರುವ ಚಿತ್ರವನ್ನು ಬಳಸಿ ಎಡಿಟ್ ಮಾಡಲಾದ ಪ್ರಚೋದನಕಾರಿ ವಿಡಿಯೋವೊಂದು ಪೋಸ್ಟ್ ಆಗಿರುವುದು ಗಮನಕ್ಕೆ ಬಂದಿದೆ. ಅದರಲ್ಲಿ ಸುನೀಲ್ ಕುಮಾರ್ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ, ಹಲ್ಲೆ ಹಾಗೂ ಕೊಲೆಗೆ ಪ್ರಚೋದಿಸುವ ರೀತಿಯ ಮಾತುಗಳು, ಸಿನಿಮಾದ ಹಾಡನ್ನು ಹಿನ್ನೆಲೆ ಧ್ವನಿಯಾಗಿ ಬಳಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಿಘ್ನೇಶ್ ಪ್ರಸಾದ್ ರಾವ್ ಅವರು ಈ ಸಂಬಂಧ ದೂರು ನೀಡಿದ್ದು, ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಉದ್ದೇಶದಿಂದ ವಿಡಿಯೋವನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಆರೋಪಿ ಈ ಪೋಸ್ಟ್ ಅನ್ನು ಹರಿಯಬಿಟ್ಟಿರುವುದಾಗಿ ಆರೋಪಿಸಲಾಗಿದೆ.

ಆರೋಪಿ ಪ್ರಸಾದ್ ಶೆಟ್ಟಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ತಿಳಿದು ಬಂದಿದೆ.







































































































































error: Content is protected !!
Scroll to Top