ಮೋದಿಯ ತಂದೆಯನ್ನು ನಿಂದಿಸಿದ ಮಲ್ಲಿಕಾರ್ಜುನ ಖರ್ಗೆ : ಬಿಜೆಪಿ ಕೆಂಡಾಮಂಡಲ

ಮೋದಿಯ ಅಪ್ಪನೂ ಅಧಿಕಾರದಿಂದ ಕೆಳಗಿಳಿಯುತ್ತಾರೆ ಎಂದ ಕಾಂಗ್ರೆಸ್‌ ಅಧ್ಯಕ್ಷ

ನವದೆಹಲಿ: ಬಿಹಾರದ ಪಾಟ್ನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದಿವಂಗತ ತಂದೆಯ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ನಿಂದನಾತ್ಮಕ ಹೇಳಿಕೆ ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಸಭಿಕರಲ್ಲಿದ್ದ ವ್ಯಕ್ತಿಯೊಬ್ಬರು “ಪ್ರಧಾನಿ ಮೋದಿ ಎಲ್ಲೂ ಹೋಗುವುದಿಲ್ಲ” ಎಂದು ಕಿರುಚಿದಾಗ ತಾಳ್ಮೆ ಕಳೆದುಕೊಂಡ ಖರ್ಗೆ “ಮೋದಿ ಮಾತ್ರವಲ್ಲ, ಅವರ ಅಪ್ಪನೂ ಅಧಿಕಾರದಿಂದ ಕೆಳಗಿಳಿಯುತ್ತಾರೆ” ಎಂದು ಹೇಳಿದ್ದರು. ಖರ್ಗೆ ಅವರ ಈ ಹೇಳಿಕೆಗೆ ಆಡಳಿತಾರೂಢ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ತನ್ನ ಎಲ್ಲ ಮಿತಿಗಳನ್ನು ಮೀರಿದೆ ಎಂದು ಕೆಂಡಾಮಂಡಲವಾಗಿ ತಿರುಗೇಟು ನೀಡಿದೆ.

ಹಿಂದೆ ಗೂಂಡಾಗಳು ಮತ್ತು ರೌಡಿಗಳು ಬಳಸುತ್ತಿದ್ದ ಭಾಷೆಯನ್ನು ಇಂದು ಕಾಂಗ್ರೆಸ್ ಅಧ್ಯಕ್ಷರು ಬಳಸುತ್ತಿದ್ದಾರೆ. ಹತಾಶೆಯಿಂದ ಅವರ ‘ಯುವರಾಜ’ (ರಾಹುಲ್ ಗಾಂಧಿ) ಒಮ್ಮೆ ರಸ್ತೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದರೆ, ಮತ್ತೊಮ್ಮೆ ಸ್ವಪಕ್ಷದ ನಾಯಕರೊಂದಿಗೆ ಗಲಾಟೆ ಮಾಡಿಕೊಳ್ಳುತ್ತಾರೆ” ಎಂದು ಬಿಜೆಪಿ ತಿರುಗೇಟು ನೀಡಿ ಲೇವಡಿ ಮಾಡಿದೆ.

“ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ 10 ವರ್ಷಗಳ ಕಾಲ ಖರ್ಗೆ ಅವರ ಕನಸನ್ನು ನನಸು ಮಾಡಲು ಎಲ್ಲ ಕಸರತ್ತು ನಡೆಸಿದರೂ ಅಧಿಕಾರದಿಂದ ದೂರವಾದರು. ಇಂದು ಅವರ ಮಗ ಅದೇ ಕನಸನ್ನು ಹೊತ್ತು ವಿಯೆಟ್ನಾಂ, ಕೊಲಂಬಿಯಾಗಳಲ್ಲಿ ಅಲೆಯುತ್ತಿದ್ದಾರೆ. ದೇಶದ ಜನತೆ ಎಂದಿಗೂ ಈ ಕನಸನ್ನು ನನಸಾಗಲು ಬಿಡುವುದಿಲ್ಲ” ಎಂದು ಬಿಜೆಪಿ ಟೀಕಿಸಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ನಾಯಕರು ರಾಜಕೀಯ ಶಿಸ್ತಿನ ಎಲ್ಲಾ ಮಿತಿಗಳನ್ನು ಮೀರಿದ್ದಾರೆ ಎಂದು ಟೀಕಿಸಿದ್ದಾರೆ. “ಮೋದಿ ಅವರ ದಿವಂಗತ ತಾಯಿಯವರನ್ನು ನಿಂದಿಸುವುದು, ಅವರನ್ನು ‘ಸಾವಿನ ವ್ಯಾಪಾರಿ’ ಎಂದು ಕರೆಯುವುದು ಹಾಗೂ ಬಡತನವನ್ನು ‘ಚಾಯ್‌ವಾಲಾ’ ಎಂದು ಗೇಲಿ ಮಾಡುವುದು ಕಾಂಗ್ರೆಸ್‌ಗೆ ಅಭ್ಯಾಸವಾಗಿದೆ” ಎಂದು ಕಿಡಿಕಾರಿದ್ದಾರೆ.

ಬಿಜೆಪಿ ಅಧ್ಯಕ್ಷ ನಿತಿನ್ ನವೀನ್ ಮಾತನಾಡಿ, “ರಾಜಕೀಯ ವಿರೋಧಕ್ಕೂ ಒಂದು ಘನತೆ ಇರುತ್ತದೆ. ದಿವಂಗತರಾದ ಕುಟುಂಬಸ್ಥರನ್ನು ಸಾರ್ವಜನಿಕ ಭಾಷಣಕ್ಕೆ ಎಳೆದು ತರುವುದು ರಾಹುಲ್ ಗಾಂಧಿ ಮತ್ತು ಇಡೀ ವಿರೋಧ ಪಕ್ಷದ ಸಂಸ್ಕೃತಿಯಾಗಿದೆ” ಎಂದು ಆಕ್ರೋಶ ಹೊರಹಾಕಿದ್ದಾರೆ.

ಖರ್ಗೆ ಹೇಳಿದ್ದೇನು?

ಬಿಹಾರದ ಪಾಟ್ನಾದಲ್ಲಿ ಮೊದಲ ಮುಖ್ಯಮಂತ್ರಿ ಡಾ. ಶ್ರೀ ಕೃಷ್ಣ ಸಿಂಗ್ ಅವರ 139ನೇ ಜಯಂತಿ ಸಮಾರಂಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಮಾತನಾಡುತ್ತಿದ್ದಾಗ, ಸಭಿಕರಲ್ಲಿದ್ದ ವ್ಯಕ್ತಿಯೊಬ್ಬರು “ಪ್ರಧಾನಿ ಮೋದಿ ಎಲ್ಲೂ ಹೋಗುವುದಿಲ್ಲ (ಅಧಿಕಾರದಿಂದ ಕೆಳಗಿಳಿಯುವುದಿಲ್ಲ)” ಎಂದು ಕೂಗಿದ್ದರು. ಅದಕ್ಕೆ ಪ್ರತಿಯಾಗಿ ಖರ್ಗೆ, “ಮೋದಿ ಮಾತ್ರವಲ್ಲ, ಅವರ ಅಪ್ಪನೂ ಅಧಿಕಾರದಿಂದ ಕೆಳಗಿಳಿಯುತ್ತಾರೆ” ಎಂದು ಆಕ್ರೋಶ ಹೊರಹಾಕಿದ್ದರು.
ಇದೇ ಕಾರ್ಯಕ್ರಮದಲ್ಲಿ, ಪ್ರಧಾನಿ ಮೋದಿ 100 ದಿನಗಳಲ್ಲಿ ಕಪ್ಪು ಹಣ ತರುವುದಾಗಿ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದ್ದ ಖರ್ಗೆ, ಆರ್‌ಎಸ್‌ಎಸ್‌ನ ಕೋಮುವಾದಿ ಚಿಂತನೆಗಳು ಕೊನೆಗೊಳ್ಳುವವರೆಗೆ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದೂ ವಾಗ್ದಾಳಿ ನಡೆಸಿದ್ದರು.

ಕಾಂಗ್ರೆಸ್ ನಾಯಕ ಹುಸೇನ್ ದಳವಾಯಿ ಸಮರ್ಥನೆ

ಮುಂಬಯಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಹುಸೇನ್ ದಳವಾಯಿ, ಖರ್ಗೆ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಕಳೆದ 12-13 ವರ್ಷಗಳಲ್ಲಿ ಸರ್ಕಾರ ಮಾಡಿರುವ ತಪ್ಪುಗಳು, ಅಕ್ರಮಗಳು ಮತ್ತು ವಿದೇಶಾಂಗ ನೀತಿಯ ಲೋಪಗಳ ಕುರಿತು ಖರ್ಗೆ ಮಾತನಾಡಿದ್ದಾರೆ. 2029ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಎಲ್ಲ ತಪ್ಪುಗಳಿಗೆ ಲೆಕ್ಕ ಕೇಳಲಾಗುವುದು ಎಂದಿದ್ದಾರೆ.

















































































error: Content is protected !!
Scroll to Top