ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಕಾಯ್ದೆ, 2017ರ ಅಡಿಯಲ್ಲಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ವಿವಿಧ ಕ್ರಮಗಳನ್ನು ಕೈಗೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಈ ಕಾಯ್ದೆಯ ಅನುಷ್ಠಾನಕ್ಕಾಗಿ ನಮ್ಮ ರಾಜ್ಯದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ನಿಯಮಗಳನ್ನು 2023ರಲ್ಲಿ ರೂಪಿಸಲಾಗಿ ತದನಂತರ ಈ ನಿಯಮಗಳನ್ನು ತಿದ್ದುಪಡಿಗೊಳಿಸಿ ಕರ್ನಾಟಕ ರಾಜ್ಯ ರಸ್ತೊ ಸುರಕ್ಷತಾ ಪ್ರಾಧಿಕಾರ ತಿದ್ದುಪಡಿ ನಿಯಮಗಳನ್ನು 27-04-2026 ರ ಅಧಿಸೂಚನೆಯ ಮೂಲಕ ಜಾರಿಗೆ ಬಂದಿರುತ್ತದೆ. ಈ ಕಾನೂನಿನ ನಿಯಮಾನುಸಾರದಂತೆ ರಸ್ತೆ ಸುರಕ್ಷತೆಯು ಸಾರ್ವಜನಿಕರ ಜೀವ ಮತ್ತು ಆರೋಗ್ಯವನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವುದು, ಅಪಘಾತಕ್ಕೊಳಗಾದವರಿಗೆ ತ್ವರಿತ ವೈದ್ಯಕೀಯ ನೆರವು ಒದಗಿಸುವುದು ಮತ್ತು ಸಂಚಾರ ವ್ಯವಸ್ಥೆಯನ್ನು ಸುಧಾರಿಸುವುದು ಮುಂತಾದವುಗಳು ಈ ಕಾನೂನನ್ನು ಜಾರಿಗೊಳಿಸುವಲ್ಲಿ ಸರ್ಕಾರವು ಪ್ರಮುಖ ಉದ್ದೇಶವನ್ನು ಹೊಂದಿರುತ್ತದೆ. ಮಾತ್ರವಲ್ಲದೆ ರಸ್ತೆ ಅಪಘಾತಕ್ಕೊಳಗಾದವರಿಗೆ ಸಕಾಲದಲ್ಲಿ ವೈದ್ಯಕೀಯ ನೆರವು ದೊರೆಯುವಂತೆ ಮಾಡುವುದು, ಅಪಘಾತದ ಸಂತ್ರಸ್ತರಿಗೆ ನಗದುರಹಿತ ಚಿಕಿತ್ಸೆಯ ಯೋಜನೆಯ ಅನುಷ್ಠಾನವನ್ನು ಸುಧಾರಿಸುವುದು ಆಸ್ಪತ್ರೆಗಳು ಮತ್ತು ಸಂಬಂಧಪಟ್ಟ ಸರ್ಕಾರ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವುದು, ಈ ಯೋಜನೆಯ ಅನುಷ್ಠಾನದಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವುದು ಹಾಗೂ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಹೆಚ್ಚಿಸುವುದಾಗಿರುತ್ತದೆ. ಹಾಗೂ ರಸ್ತೆ ಅಪಘಾತದ ಸಂತ್ರಸ್ತರಿಗೆ ಅಗತ್ಯವಾದ ನೆರವು ದೊರೆಯುವಂತೆ ಆಡಳಿತಾತ್ಮಕ ವ್ಯವಸ್ಥೆಯನ್ನು ಬಲಪಡಿಸುವುದು ಇತ್ಯಾದಿಗಳ ದೃಷ್ಟಿಕೋನದಿಂದ ಮೇಲ್ಕಾಣಿಸಿದ ಕಾನೂನನ್ನು ತಿದ್ದುಪಡಿಗೊಳಿಸಲಾಗಿರುತ್ತದೆ. ಇಂತಹ ನಿಯಮಗಳಿಂದಾಗಿ ಸಂಚಾರ ಪೊಲೀಸರ ಕಾರ್ಯಾಚರಣೆ ಆಸ್ಪತ್ರೆಗಳ ಸಹಕಾರ ಮತ್ತು ಸಾರ್ವಜನಿಕರ ಜವಾಬ್ದಾರಿಯುತ ವರ್ತನೆ ಇವೆಲ್ಲವೂ ರಸ್ತೆ ಸುರಕ್ಷತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಈ ಕಾನೂನಿನ ನಿಯಮಾನುಸಾರದಂತೆ ಸರಕಾರವು ನಗದುರಹಿತ ವೈದ್ಯಕೀಯ ಚಿಕಿತ್ಸೆಯ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದು ಈ ಬಗ್ಗೆ ಗೊತ್ತುಪಡಿಸದ ಆಸ್ಪತ್ರೆಗಳಿಗೂ ಯೋಜನೆಯ ಅನುಷ್ಠಾನದ ಬಗ್ಗೆ ಮಾಹಿತಿ ಮತ್ತು ಅರಿವು ಮೂಡಿಸಿ ಎಲ್ಲಾ ಆಸ್ಪತ್ರೆಗಳು ಈ ಯೋಜನೆಯ ಉದ್ದೇಶ, ಸಂಬಂಧಪಟ್ಟ ಪ್ರಕ್ರಿಯೆಗಳು ಮತ್ತು ಸಂತ್ರಸ್ತರಿಗೆ ನೆರವು ಒದಗಿಸುವ ವ್ಯವಸ್ಥೆಯ ಬಗ್ಗೆ ಸೂಕ್ತ ಅರಿವನ್ನು ಹೊಂದುವಂತೆ ಮಾಡಲಾಗಿದೆ. ಈ ಕುರಿತು ಸರ್ಕಾರವು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯನ್ನು ಜಿಲ್ಲಾ ಮಟ್ಟದಲ್ಲಿ ರಚಿಸಿದ್ದು ಇದು ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಕ್ರಮಗಳ ಸಮನ್ವಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯು ಯೋಜನೆಯ ಅನುಷ್ಠಾನಕ್ಕೆ ಸಂಬAಧಿಸಿದ ದೂರುಗಳನ್ನು ಪರಿಹರಿಸಲು ಪ್ರತ್ಯೇಕ ದೂರು ಪರಿಹಾರ ಅಧಿಕಾರಿಯನ್ನು ಹೊಂದಿರುತ್ತದೆ. ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸುವುದು ದೂರುಗಳ ಸ್ವರೂಪವನ್ನು ಪರಿಶೀಲಿಸುವುದು ಸಂಬಂಧಪಟ್ಟ ಇಲಾಖೆ ಅಥವಾ ಆಸ್ಪತ್ರೆಯಿಂದ ಅಗತ್ಯ ಮಾಹಿತಿ ಪಡೆಯುವುದು ಹಾಗೂ ಅನ್ವಯಿಸುವ ನಿಯಮಗಳ ಪ್ರಕಾರ ದೂರುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿದೆ ಮತ್ತು ಈ ಯೋಜನೆಯ ಅನುಷ್ಠಾನದಲ್ಲಿ ಕಂಡುಬರುವ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದಾಗಿದೆ. ಇಂತಹ ವ್ಯವಸ್ಥೆಯು ಸಾರ್ವಜನಿಕರಿಗೆ ದೂರು ಸಲ್ಲಿಸಲು ಮತ್ತು ತಮ್ಮ ಸಮಸ್ಯೆಗಳ ಪರಿಹಾರವನ್ನು ಪಡೆಯಲು ನೆರವಾಗುತ್ತದೆ. ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯು ಜಿಲ್ಲಾ ಮಟ್ಟದಲ್ಲಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಕ್ರಮಗಳ ಸಮನ್ವಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ರಸ್ತೆ ಸುರಕ್ಷತೆಯನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿ ಮಾತ್ರವಲ್ಲ ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಆಗಿದೆ. ಅಪಘಾತಗಳನ್ನು ತಡೆಗಟ್ಟಲು ಸಾರ್ವಜನಿಕರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಹಾಗೂ ಅಪಘಾತ ಸಂಭವಿಸಿದಾಗ ಸುರಕ್ಷಿತವಾಗಿ ನೆರವು ಒದಗಿಸಿ, ಅಗತ್ಯವಿದ್ದಲ್ಲಿ ತುರ್ತು ವೈದ್ಯಕೀಯ ಸೇವೆಯನ್ನು ಸಂಪರ್ಕಿಸಬೇಕು. ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಹೆಚ್ಚಾದರೆ ಅಪಘಾತಗಳನ್ನು ತಡೆಗಟ್ಟಲು ಮತ್ತು ಜೀವಗಳನ್ನು ಉಳಿಸಲು ಸಹಾಯವಾಗುತ್ತದೆ. ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ (ತಿದ್ದುಪಡಿ) ನಿಯಮಗಳು, 2026 ರಸ್ತೆ ಅಪಘಾತದ ಸಂತ್ರಸ್ತರಿಗೆ ನೆರವು ಒದಗಿಸುವ ವ್ಯವಸ್ಥೆಯನ್ನು ಸುಧಾರಿಸುವ ದೃಷ್ಟಿಯಿಂದ ಮಹತ್ವ ಪಡೆದಿವೆ. ಈ ನಿಯಮಗಳ ಯಶಸ್ಸು ಅವುಗಳ ಪರಿಣಾಮಕಾರಿ ಅನುಷ್ಠಾನ, ಸಂಬಂಧಪಟ್ಟ ಇಲಾಖೆಗಳ ಸಮನ್ವಯ ಮತ್ತು ಸಾರ್ವಜನಿಕರ ಸಹಕಾರವನ್ನು ಅವಲಂಬಿಸಿದೆ. ಸರ್ಕಾರ, ಆಸ್ಪತ್ರೆಗಳು, ಸಂಚಾರ ಪೊಲೀಸರು ಮತ್ತು ನಾಗರಿಕರು ಒಟ್ಟಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ರಸ್ತೆ ಸುರಕ್ಷತೆಯನ್ನು ಸುಧಾರಿಸಲು ಸಾಧ್ಯವಾಗುತ್ತದೆ. ಆದ್ದರಿಂದ, ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವುದು, ಅಪಘಾತಗಳನ್ನು ತಡೆಗಟ್ಟುವುದು ಮತ್ತು ಅಪಘಾತದ ಸಂತ್ರಸ್ತರಿಗೆ ಸಮಯಕ್ಕೆ ಸರಿಯಾಗಿ ನೆರವು ದೊರೆಯುವಂತೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.









































