ನೀವು ಅಧಿಕಾರದಲ್ಲಿರುವಲ್ಲಿ ಅಭಿವೃದ್ಧಿ ಯೋಜನೆಗಳನ್ನು ತನ್ನಿ ಎಂದು ವಿಪಕ್ಷಗಳಿಗೆ ಕಿವಿಮಾತು
ನವದೆಹಲಿ: ಮುಂದಿನ ಮೂರು ದಶಕಗಳ ಕಾಲ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವ್ಯಂಗ್ಯವಾಡಿದ್ದಾರೆ.
ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ವಿದೇಶಿ ಪ್ರವಾಸದ ಬಗ್ಗೆ ಟೀಕಿಸಿದ ಅವರು, ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕಾಂಗ್ರೆಸ್ ಮತ್ತು ವಿಪಕ್ಷಗಳು ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿದೇಶ ಪ್ರವಾಸ ಕೈಗೊಂಡಿರುವುದ್ದಾಗಿ ಹೇಳಿದ್ದಾರೆ.

ನನ್ನ ಮಾತು ನಿಮಗೆ ಕೇಳಿಸುವುದಿಲ್ಲ ಎಂಬುದು ಗೊತ್ತು, ಏಕೆಂದರೆ ನೀವು ವಿದೇಶದಲ್ಲಿ ಎಲ್ಲೋ ಕುಳಿತಿದ್ದೀರಿ. ವಿದೇಶಕ್ಕೆ ಏಕೆ ಹೋದೆ ಎಂದು ನೀವು ಕಾರಣವನ್ನೂ ನೀಡುವುದಿಲ್ಲ, ಆದರೆ ಪರವಾಗಿಲ್ಲ, ಅದು ನಿಮ್ಮ ವೈಯಕ್ತಿಕ ವಿಚಾರ. ಆದರೆ ದೆಹಲಿಗೆ ಬಂದಿಳಿದ ನಂತರ ನನ್ನ ಮಾತನ್ನು ಕೇಳಿ; ಮುಂದಿನ ಮೂವತ್ತು ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರ ಬರುವುದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ವಿರುದ್ಧ ‘ಮತಗಳ್ಳತನ’ ಆರೋಪ ಮಾಡುತ್ತಿರುವ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಶಾ, ವಿಪಕ್ಷಗಳು ಹಲವು ರಾಜ್ಯಗಳಲ್ಲಿ ದಶಕಗಳಿಂದ ಅಧಿಕಾರದಿಂದ ಹೊರಗುಳಿದಿವೆ ಎಂಬುದನ್ನು ನೆನಪಿಸಿದರು. ಪ್ರತಿಭಟನೆ ಮತ್ತು ಧರಣಿಗಳಿಂದ ಏನೂ ಸಾಧಿಸಲು ಸಾಧ್ಯವಿಲ್ಲ. ನೀವು ಎಲ್ಲೆಲ್ಲಿ ಆಯ್ಕೆಯಾಗಿದ್ದೀರೋ ಆ ಪ್ರದೇಶಗಳ ಅಭಿವೃದ್ಧಿಗೆ ಸೂಕ್ತ ಯೋಜನೆಗಳನ್ನು ತನ್ನಿ ಎಂದು ಕಿವಿಮಾತು ಹೇಳಿದ್ದಾರೆ.






























































