ಸರ್ಕಾರಿ ಜಾಗದಲ್ಲಿ ಸಿಕ್ಕ ಮೂಳೆಗಳಿಂದ ಸ್ಥಳೀಯರಲ್ಲಿ ಸೃಷ್ಟಿಯಾಯ್ತು ಆತಂಕ
ಮಣಿಪಾಲ: ಇಲ್ಲಿನ ಅನಂತನಗರದ ಮೂರನೇ ತಿರುವಿನಲ್ಲಿರುವ ಸರ್ಕಾರಿ ಜಾಗದಲ್ಲಿ ಮಾನವನ ಅಸ್ಥಿಪಂಜರದ ಕೆಲವು ಭಾಗಗಳು ಪತ್ತೆಯಾಗಿದ್ದು ಸಾರ್ವಜನಿಕರಲ್ಲಿ ಆಂತಕ ಸೃಷ್ಟಿಸಿದೆ.
ಸರ್ಕಾರಿ ಭೂಮಿಯ ಖಾಲಿ ಜಾಗವನ್ನು ಸ್ವಚ್ಛಗೊಳಿಸುವ ಕೆಲಸ ನಡೆಯುತ್ತಿದ್ದು, ತಲೆಬುರುಡೆ ಹಾಗೂ ಕೈಗಳ ಮೂಳೆಗಳು ಪತ್ತೆಯಾಗಿವೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಪತ್ತೆಯಾದ ಮೂಳೆಗಳ ಅವಶೇಷಗಳನ್ನು ಸಂಗ್ರಹಿಸಿ, ಹೆಚ್ಚಿನ ವೈಜ್ಞಾನಿಕ ಪರೀಕ್ಷೆ ಹಾಗೂ ತನಿಖೆಗಾಗಿ ಮಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾಗಿ ಎಂದು ತಿಳಿದುಬಂದಿದೆ.
ಪತ್ತೆಯಾಗಿರುವ ಮೂಳೆಗಳು ಯಾರಿಗೆ ಸೇರಿವೆ, ಅವು ಎಷ್ಟು ಹಳೆಯವು ಹಾಗೂ ಯಾವ ಸಂದರ್ಭಗಳಲ್ಲಿ ಆ ಸ್ಥಳದಲ್ಲಿ ಬಿದ್ದಿದ್ದವು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೂಳೆಗಳ ಸ್ವರೂಪ, ಅವುಗಳ ಕಾಲಮಾನ ಮತ್ತು ಇತರ ವಿವರಗಳನ್ನು ವಿಧಿವಿಜ್ಞಾನ ಪರೀಕ್ಷೆಯ ಮೂಲಕ ಪತ್ತೆಹಚ್ಚಬೇಕಿದೆ.








































